ಶ್ರದ್ಧಾ ಶ್ರೀನಾಥ್ ಉದ್ಧಟತನದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಬೆಳಕಿನ ಹಬ್ಬವನ್ನು ಉತ್ತರ ಭಾರತದಲ್ಲಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ದಿವಾಳಿ(DIWALI) ಎಂದು ಕರೆಯುತ್ತಾರೆ. ಕನ್ನಡದಲ್ಲಿ ದಿವಾಳಿ ಅಂದ್ರೆ ಸಂಪೂರ್ಣ ನಷ್ಟವಾಗುವುದು ಎನ್ನುವ ಅರ್ಥ ಇದೆ. ಹಾಗಾಗಿ ದಿವಾಳಿ ಎನ್ನುವುದು ತಪ್ಪಾಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಪದೇ ಪದೆ ಈ ಬಗ್ಗೆ ಚರ್ಚೆ ನಡೆಯುತ್ತದೆ.

ಸದ್ಯ ನಟಿ ಶ್ರದ್ಧಾ ಶ್ರೀನಾಥ್ ಮಾಡಿದ್ದ ಪೋಸ್ಟ್ ಅದಕ್ಕೆ ನೆಟ್ಟಿಗನೊಬ್ಬನ ಕಾಮೆಂಟ್ ವೈರಲ್ ಆಗ್ತಿದೆ. ಆತನ ಆಕ್ಷೇಪದ ಬಗ್ಗೆ ನಟಿ ಶ್ರದ್ಧಾ ವ್ಯಂಗ್ಯವಾಗಿ ತಿರುಗೇಟು ಕೊಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ. ದೀಪಾವಳಿ ಸಂಭ್ರಮದಲ್ಲಿ ಸೀರೆ ಉಟ್ಟು ಯೂಟರ್ನ್ ಬೆಡಗಿ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ ನೆಟ್ಟಿಗನೊಬ್ಬ "ಅದು ದಿವಾಳಿ ಅಲ್ಲ, ದೀಪಾವಳಿ" ಎಂದು ರಿಪ್ಲೇ ಮಾಡಿದ್ದಾನೆ. ಅದನ್ನು ಟ್ಯಾಗ್ ಮಾಡಿ "ಸ್ವಾರಿ ಸ್ವಾರಿ ಬ್ರದರ್.. ಹ್ಯಾಪಿ ಡೆಲುಲು(Delulu) ಟು ಯು" ಎಂದು ಪ್ರತಿಕ್ರಿಯಿಸಿದ್ದಾರೆ. Delulu ಅಂದ್ರೆ ಹಳೇ ರೂಢಿಗೆ ಜೋತುಬಿದ್ದು ಭ್ರಮೆಯಲ್ಲಿರುವ(delusional) ಎನ್ನುವ ಅರ್ಥ ಇದೆ.

ಮತ್ತೊಬ್ಬ ನೆಟ್ಟಿಗ ಕೂಡ 'ದಿವಾಳಿ ಅಲ್ಲ ದೀಪಾವಳಿ' ಎಂದು ಕಾಮೆಂಟ್ ಮಾಡಿದ್ದು ಅದಕ್ಕೂ ಶ್ರದ್ಧಾ ಪ್ರತಿಕ್ರಿಯಿಸಿದ್ದಾರೆ. ಕ್ಷಮಿಸಿ, ಕ್ಷಮಿಸಿ, ನನ್ನದೇ ತಪ್ಪು ಸಹೋದರ. ನಿಮಗೂ 'ಹ್ಯಾಪಿ ಡೆಲುಲು' (Happy Delulu). ಇದು ದೀಪಾವಳಿ. ನಾನು ಕ್ಷಮೆ ಕೋರುತ್ತೇನೆ. ಬಹುಶಃ ನಾನು ಅನೇಕರಿಗೆ ಬೇಸರ ಉಂಟುಮಾಡಿದಂತಿದೆ. 'ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ'. ಹಬ್ಬದ ಹೆಸರನ್ನು ಹೇಗೆ ಬರೆಯಬೇಕು ಎಂದು ನಾವು ಜಗಳವಾಡುತ್ತಾ, ತಾವೇ ನೈತಿಕವಾಗಿ ಶ್ರೇಷ್ಠರು ಎಂದು ಭಾವಿಸುತ್ತಿರುವುದನ್ನು ನೋಡಿ ನಮ್ಮ ದೇವರುಗಳು ಖುಷಿಪಡುತ್ತಿರಬಹುದು" ಎಂದು ಶ್ರದ್ಧಾ ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದ್ಯಾಕೋ ಅತಿಯಾಯ್ತು ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಮೂಲತಃ ಕನ್ನಡ ಕುಟುಂಬಕ್ಕೆ ಸೇರಿದ ಶ್ರದ್ಧಾ ಕಾಶ್ಮೀರದ ಉಧಂಪುರ್‌ದಲ್ಲಿ ಜನಿಸಿದವರು. ಹೈದರಾಬಾದ್‌ನಲ್ಲಿ ಶಾಲಾ ಶಿಕ್ಷಣ ಮುಗಿಸಿದ ಶ್ರದ್ಧಾ ಬೆಂಗಳೂರಿನಲ್ಲಿ ಪದವಿ ಪಡೆದಿದ್ದಾರೆ. ಮಲಯಾಳಂನ 'ಕೋಹಿನೂರ್' ಚಿತ್ರದಲ್ಲಿ ಮೊದಲಿಗೆ ಬಣ್ಣ ಹಚ್ಚಿದ್ದ ಶ್ರದ್ಧಾಗೆ ಬ್ರೇಕ್ ಕೊಟ್ಟಿದ್ದು ಕನ್ನಡದ 'ಯೂಟರ್ನ್' ಸಿನಿಮಾ. ಸದ್ಯ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಆಕೆ ಬ್ಯುಸಿಯಾಗಿದ್ದಾರೆ.