ಬಿಗ್‌ಬಾಸ್ ಸೀಸನ್ 13ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದವರು ಒಬ್ಬೊಬ್ಬರಾಗಿ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಅಗ್ನಿಪರೀಕ್ಷೆಯಲ್ಲಿ ಮಿಂಚಿದ್ದ ಕುಮಾರಿ ಹಾಗೂ ಲಕ್ಷ್ಮಿ ಗೌಡ ಕೂಡ ಕೆಲ ದಿನ ಮನೆ ಒಳಗೆ ಹೋಗಿದ್ದರು. ಸ್ಪರ್ಧಿಗಳಾಗಿ ಅಲ್ಲ ಕೇವಲ ಅತಿಥಿಗಳಾಗಿ ಅವರಿಬ್ಬರು ಮನೆಯೊಳಗೆ ಹೋಗಿದ್ದು ಗೊತ್ತೇಯಿದೆ. ಇದೀಗ ಲಕ್ಷ್ಮಿ ಗೌಡ ವಿರುದ್ಧ ಕುಮಾರಿ ಅಸಮಾಧಾನ ಹೊರ ಹಾಕಿದ್ದಾರೆ.

ಬಿಗ್‌ಬಾಸ್ ಮನೆ ಒಳಗೆ ಹಾಗೂ ಹೊರಗಡೆ ಬಂದಮೇಲೆ ತಮ್ಮ ಬಗ್ಗೆ ಲಕ್ಷ್ಮಿ ಗೌಡ ನೀಡುತ್ತಿರುವ ಹೇಳಿಕೆಗಳ ಬಗ್ಗೆ ಕುಮಾರಿ ವೀಡಿಯೋ ಮಾಡಿ ಮಾತನಾಡಿದ್ದಾರೆ. ಬಿಗ್‌ಬಾಸ್ ಮನೆಯಿಂದ ಹೊರಬಂದ ಮೇಲೆ ಲಕ್ಷ್ಮಿ ಗೌಡ ಕೆಲ ಸಂದರ್ಶನಗಳಲ್ಲಿ ಭಾಗಿ ಆಗಿದ್ದರು. "ಕುಮಾರಿ ಸ್ನಾನನೇ ಮಾಡಲ್ಲ. ಅವರು ಸ್ನಾನ ಮಾಡಿದ್ರು ಎಂದ್ರೆ ಆ ದಿನ ಉಳಿದವರು ಸೆಲೆಬ್ರೇಟ್​ ಮಾಡ್ತಾರೆ. ನನಗೆ ತುಂಬಾ ಅಸಹ್ಯ ಎನ್ನಿಸಿತು" ಎಂದು ಹೇಳಿದ್ದರು. ಈ ಬಗ್ಗೆ ಕುಮಾರಿ ಪ್ರತಿಕ್ರಿಯಿಸಿದ್ದಾರೆ.

ಕುಮಾರಿ ಬಗ್ಗೆ ಸಾಕಷ್ಟು ಟ್ರೋಲ್ ನಡೆಯುತ್ತಲೇ ಇದೆ. ಹಳೇ ಬಟ್ಟೆ ಹಾಕ್ಕೊಂಡು ಬಿಗ್‌ಬಾಸ್ ವೇದಿಕೆಗೆ ಏರಿದ್ರು, ನಾಟಕ, ಸಿಂಪಥಿ ಎಂದು ಕೆಲವರು ವ್ಯಂಗ್ಯವಾಡಿದ್ದರು. ಈ ಬಗ್ಗೆ ವೀಡಿಯೋ ಮಾಡಿ ಆಕೆ ಮಾತನಾಡಿದ್ದಾರೆ. ನಾನು ಅವತ್ತು ವೇದಿಕೆಗೆ ಅಮ್ಮನ ಸೀರೆ ಉಟ್ಟು ಹೋಗಲು ಬಯಸಿದ್ದೆ. ಆದ್ರೆ ಬಿಗ್‌ಬಾಸ್ ಆಯೋಜಕರು ಬಿಡಲಿಲ್ಲ. ಈ ವಿಚಾರ ಹೇಳಬೇಕಿತ್ತು, ಹೇಳಿದ್ದೀನಿ ಕ್ಷಮಿಸಿ ಎಂದಿದ್ದಾರೆ. ಇದರ ಜೊತೆಗೆ ಮತ್ತೊಂದು ವೀಡಿಯೋದಲ್ಲಿ ಲಕ್ಷ್ಮಿ ಗೌಡ ಹೇಳಿಕೆ ಕುಮಾರಿ ಬೇಸರ ವ್ಯಕ್ತಪಡಿಸಿದ್ದಾರೆ.

"ಸಂದರ್ಶನದಲ್ಲಿ ಕೂತು ನನ್ನ ಬಗ್ಗೆ ಮಾತನಾಡಿದ್ದೀರಾ.. ನಿಮಗೆ ಅಕ್ಕನ ಸ್ಥಾನ ಕೊಟ್ಟಿದ್ದೀನಿ. ನಿಮ್ಮ ರೀತಿ ಮಾತನಾಡಿದ್ರೆ, ನನಗೂ ನಿಮಗೂ ವ್ಯತ್ಯಾಸ ಇರಲ್ಲ. ಯಾವ ವಿಷಯ ಮಾತನಾಡಬೇಕು, ಯಾವುದು ಮಾತನಾಡಬಾರದು ಎಂದು ತಿಳ್ಕೊಂಡು ಮಾತಾಡಿ.. ಸಣ್ಣ ಬುದ್ಧಿ ತೋರಿಸ್ಬೇಡಿ.. ಇವತ್ತಿಗೂ ನಾನು ವೀಡಿಯೋ ಮಾಡಿ ಹಾಕಿದ್ರೆ, ಇವತ್ತಾದ್ರು ಸ್ನಾನ ಮಾಡಿದ್ರಾ ಅಂತ ಕೇಳ್ತಾರೆ. ನಾಚಿಕೆ ಬಿಟ್ಟು ಹೇಳ್ತೀನಿ.. ಬಿಗ್‌ಬಾಸ್ ಮನೆಯಿಂದ ಹೊರಬಂದು ದೀಪಾವಳಿ ಹಬ್ಬದವರೆಗೂ ನನಗೆ ಸ್ನಾನ ಮಾಡ್ಸಿ ನೋಡ್ಕೊಂಡಿದ್ದು ನಮ್ಮ ತಾಯಿ.. ಕಾರಣ ನನ್ನ ದೇಹ ಅಷ್ಟು ವೀಕ್ ಆಗಿತ್ತು.. ನನ್ನ ಆರೋಗ್ಯ ನನಗೆ ಮುಳುವಾಗುತ್ತೆ ಎಂದು ಗೊತ್ತಾಗಿದ್ರೆ, ದೊಡ್ಮನೆಗೆ ಕಾಲಿಡುತ್ತಿರಲಿಲ್ಲ. ಚೆಕ್ ಅಂದ್ರೆ ಏನು ಅಂತ ನಾನು ಕೇಳಿಲ್ಲ. ತಾಯಿ ಆಣೆ ನಾನು ನಾಟಕ ಮಾಡಿಲ್ಲ" ಎಂದು ಕುಮಾರಿ ವಿವರಿಸಿದ್ದಾರೆ.