ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳು ಆಡುವ ಮಾತುಗಳು ಕೆಲವೊಮ್ಮೆ ವಿವಾದ ಸೃಷ್ಟಿಸಿಬಿಡುತ್ತದೆ. ಈ ಹಿಂದೆ ಇದೇ ದೊಡ್ಮನೆ ಒಳಗೆ ಸ್ಪರ್ಧಿಗಳು ಆಡಿನ ಮಾತಿನ ಬಗ್ಗೆ ಹೊರಗಡೆ ದೂರು ದಾಖಲಾಗಿದ್ದ ಉದಾಹರಣೆ ಸಹ ಇದೆ. ಈ ಸೀಸನ್‌ನಲ್ಲಿ ಯಶಸ್ ಒಂದು ಸಮುದಾಯದ ಬಗ್ಗೆ ಬಳಸಿದ ಪದ ಪ್ರಯೋಗ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಸುದೀಪ್ ವೀಕೆಂಡ್ ಪಂಚಾಯ್ತಿಯಲ್ಲಿ ಪ್ರಸ್ತಾಪಿಸಿದ್ದರು. ಕೊನೆಗೆ ಯಶಸ್ ತಮ್ಮ ತಪ್ಪಿಗೆ ಕ್ಷಮೆ ಕೇಳಿದ್ದಾರೆ.

ಈ ವಾರ ಗಗನ್ ಬಗ್ಗೆ ಮಾತನಾಡುತ್ತಾ ಯಶಸ್ 'ಒಂಭತ್ತು' ಎಂಬ ಪದ ಬಳಸಿದ್ದರು. ಕಲರ್ಸ್ ಕನ್ನಡ ವಾಹಿನಿ ಎಪಿಸೋಡ್‌ನಲ್ಲಿ ಅದನ್ನು ಎಡಿಟ್ ಮಾಡಿದ್ದರು. ಆದರೆ ಜಿಯೋ ಹಾಟ್‌ಸ್ಟರ್‌ನಲ್ಲಿ 24 ಗಂಟೆಗಳ ಲೈವ್ ವೇಳೆ ಯಶಸ್ ಮಾತನಾಡಿದ್ದು ವೈರಲ್ ಆಗಿತ್ತು. ಸಾಕಷ್ಟು ಜನ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಯಶಸ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ವೀಕೆಂಡ್ ಪಂಚಾಯ್ತಿಯಲ್ಲಿ ಈ ವಿಚಾರ ಪ್ರಸ್ತಾಪ ಆಗುತ್ತೋ ಇಲ್ಲವೋ ಎನ್ನುವ ಕುತೂಹಲ ಇತ್ತು.

ಸುದೀಪ್ ಮಾತನಾಡಿ "ಯಾವುದೋ ಒಂದು ವರ್ಗವನ್ನು ನಿರ್ದಿಷ್ಟ ನಂಬರ್‌ಗಳಿಗೆ ಹೋಲಿಸಿ ಮಾತನಾಡುವುದು ಕೆಟ್ಟ ಸಂಸ್ಕೃತಿ. ದೊಡ್ಡ ವಾಹಿನಿಯಲ್ಲಿ ಈ ರೀತಿಯ ಜವಾಬ್ದಾರಿರಹಿತ ಪದಗಳನ್ನು ಬಳಸುವುದು ನಿಮ್ಮ ಇಡೀ ಜೀವನ ಮತ್ತು ವೃತ್ತಿಬದುಕನ್ನೇ ಹಾಳು ಮಾಡಿಬಿಡುತ್ತೆ" ಎಂದು ಸುದೀಪ್ ಖಾರವಾಗಿಯೇ ಬುದ್ಧಿ ಹೇಳಿದರು.

ತಪ್ಪಿನ ಅರಿವಾಗಿ ಯಶಸ್ ಪ್ರತಿಕ್ರಿಯಿಸಿದರು. "ಯಾವುದೇ ಒಂದು ನಿರ್ದಿಷ್ಟ ಸಮುದಾಯಯಕ್ಕೆ ನೋವುಂಟು ಮಾಡುವ, ಅಪಮಾನ ಮಾಡುವ ಉದ್ದೇಶ ನನಗೆ ಖಂಡಿತ ಇರಲಿಲ್ಲ. ಆ ಕ್ಷಣದ ಸಿಟ್ಟು, ಆಕ್ರೋಶದಲ್ಲಿ ಗಗನ್ ಅವರನ್ನು ಮಾತ್ರ ಹರ್ಟ್ ಮಾಡಬೇಕು ಅಂದ್ಕೊಂಡೆ. ನನ್ನ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೋರುತ್ತೇನೆ" ಎಂದರು. ಆ ಮೂಲಕ ವಿವಾದಕ್ಕೆ ತೆರೆಬಿದ್ದಂತಾಗಿದೆ.

ಕಳೆದ ಸೀಸನ್‌ನಲ್ಲಿ ಅಶ್ವಿನಿ ಗೌಡ ಕೂಡ ಇಂಥದ್ದೇ ಎಡವಟ್ಟು ಮಾಡಿದ್ದರು. ರಕ್ಷಿತಾ ಶೆಟ್ಟಿ ಬಗ್ಗೆ ಮಾತನಾಡುತ್ತಾ 'S' ಕ್ಯಾಟಗರಿ ಎಂದು ಹೇಳಿದ್ದರು. ಇದು ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಈ ಬಗ್ಗೆ ಹೈಕೋರ್ಟ್ ವಕೀಲ ಪ್ರಶಾಂತ್ ಮೆತಾಲ್ ಅವರು ಬಿಡದಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ತನಿಷಾ ಕುಪ್ಪಂಡ ಬಳಸಿದ್ದ 'ವಡ್ಡ' ಎನ್ನುವ ಪದ ಕೂಡ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಬೋವಿ ಸಮಾಜಕ್ಕೆ ಅವಮಾನ ಎಂದು ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ ಪದ್ಮಾ ಅವರು ಕುಂಬಳಗೋಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.