ಅಗ್ನಿ ಪರೀಕ್ಷೆಯಲ್ಲಿ ಗಮನ ಸೆಳೆದಿದ್ದ ಲಾವಣ್ಯ ಕುಮಾರಿ ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಹೋಗಿದ್ದರು. ಎರಡು ವಾರ ದೊಡ್ಮನೆಯಲ್ಲಿ ಇದ್ದು ವೀಕ್ಷಕರನ್ನು ರಂಜಿಸಿದ್ದರು. ತಮ್ಮ ಮುಗ್ಧ ಮಾತುಗಳಿಂದ ನೋಡುಗರ ಮನಗೆದ್ದಿದ್ದರು. ದಿಢೀರನೆ ಬಿಗ್‌ಬಾಸ್ ಆಯೋಜಕರ ವಿರುದ್ಧ ಕುಮಾರಿ ಗಂಭೀರ ಆರೋಪ ಮಾಡಿದ್ದಾರೆ.

ಹಳ್ಳಿ ಹುಡುಗಿ ಕುಮಾರಿ ಎಂದೇ ಲಾವಣ್ಯ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿದ್ದರು. ಬಿಗ್‌ಬಾಸ್ ಅಗ್ನಿಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಆದರೆ ಕಾರಣಾಂತರಗಳಿಂದ ಆಕೆಗೆ ಮನೆ ಒಳಗೆ ಹೋಗಲು ಮೊದಲಿಗೆ ಅವಕಾಶ ಸಿಕ್ಕಿರಲಿಲ್ಲ. 35ನೇ ದಿನಕ್ಕೆ ಸರ್‌ಪ್ರೈಸ್ ಆಗಿ ಮನೆ ಒಳಗೆ ಎಂಟ್ರಿ ಕೊಟ್ಟಿದ್ದರು. 'ಸೂಪರ್ ಸಂಡೇ ವಿತ್ ಸುದೀಪ' ಶೋನಲ್ಲೇ ಆಕೆಯನ್ನು ಕಿಚ್ಚ ವೇದಿಕೆಗೆ ಬರಮಾಡಿಕೊಂಡಿದ್ದರು. ಸಿಂಪಲ್ ಆಗಿ ಚೂಡಿದಾರ್ ಧರಿಸಿ ಮೇಲೊಂದು ವೇಸ್‌ಕೋಟ್ ಹಾಕಿಕೊಂಡು ವೇದಿಕೆಗೆ ಬಂದಿದ್ದರು.

ಕುಮಾರಿ ಮೊದಲಿನಿಂದಲೂ ಇದೇ ರೀತಿ ಸಿಂಪಲ್ ಆಗಿಯೇ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ತೋಳಿಲ್ಲದ ಸ್ವೆಟರ್ ಹಾಕಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಮಾಡುತ್ತಿದ್ದರು. ಬಿಗ್‌ಬಾಸ್ ಅಗ್ನಿ ಪರೀಕ್ಷೆಗೂ ಇದೇ ಲುಕ್‌ನಲ್ಲಿ ಬಂದು ಆಕೆ ಗಮನ ಸೆಳೆದಿದ್ದರು. ವೈಲ್ಡ್ ಕಾರ್ಡ್ ಎಂಟ್ರಿಗೆ ವೇದಿಕೆ ಏರಿದಾಗಲೂ ಇದೇ ಲುಕ್ ಮುಂದುವರೆಸಿದ್ದರು. ಈ ಬಗ್ಗೆ ಕೆಲವರು ವ್ಯಂಗ್ಯವಾಡಿದ್ದರು. ಸಿಂಪಥಿ ಕಾರ್ಡ್ ಯೂಸ್ ಮಾಡ್ತಿದ್ದಾಳೆ, ಬೇಕೆಂದೇ ಅದೇ ಹಳೇ ಬಟ್ಟೆ ಹಾಕ್ಕೊಂಡು ಬಂದಿದ್ದಾಳೆ ಎಂದು ನೆಗೆಟಿವ್ ಕಾಮೆಂಟ್ ಮಾಡಿದ್ದರು. ಕೊನೆಗೂ ಈ ಬಗ್ಗೆ ಕುಮಾರಿ ಪ್ರತಿಕ್ರಿಯಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಮಾಡಿ ಕುಮಾರಿ ಮಾತನಾಡಿದ್ದಾರೆ. "ಕಾರಣಾಂತರಗಳಿಂದ ಇಷ್ಟು ದಿನ ಮಾತನಾಡಲು ಸಾಧ್ಯವಾಗಿರಲಿಲ್ಲ. ನನ್ನ ಬಟ್ಟೆ ಬಗ್ಗೆ ಸಾಕಷ್ಟು ಜನ ಕಾಮೆಂಟ್ ಮಾಡ್ತಿದ್ದೀರಾ. ಅದೇ ಬಟ್ಟೆ ಹಾಕ್ಕೊಂಡು ಹೋಗಿ ನಾಟಕ ಮಾಡ್ದೆ ಅಂತಿದ್ದೀರ.. ಕಂಡಿತ ನಾನು ಜನರನ್ನು ಮೋಸ ಮಾಡಿ ಬದುಕಬೇಕಿಲ್ಲ.. ಅವತ್ತು ಸ್ಟೇಜ್‌ ಮೇಲೆ ಹೋಗಲು ಅಮ್ಮನ ಸೀರೆ ತೆಗೆದಿಟ್ಟಿದ್ದೆ.. ನನ್ನತ್ರ ಬಳೆ, ಸರ ಎಲ್ಲಾ ತುಂಬಾ ಇದೆ.. ಅದೆಲ್ಲಾ ಹಾಕ್ಕೊಂಡು ಸುದೀಪ್ ಅಣ್ಣ ಎದುರು ಹೋಗಬೇಕು ಎಂದು ಬಹಳ ಆಸೆ ಇಟ್ಟುಕೊಂಡಿದ್ದೆ. ಆಗಿದ್ದೇ ಬೇರೆ, ಆದ್ರೆ ಬಿಗ್‌ಬಾಸ್‌ನವ್ರು ಹಾಕಿಸಿದ ಬಟ್ಟೆ ಅದು.. ಅದನ್ನೇ ಹಾಕಿಕೊಳ್ಳಬೇಕು ಅಂದಾಗ ಬೇರೆ ದಾರಿ ಇಲ್ಲದೇ ಹಾಕಿಕೊಂಡಿದ್ದೆ.. ಯಾವುದೇ ಸಿಂಪಥಿ ಸಂಪಾದಿಸಿ ಗೆಲ್ಲುವ ಆಲೋಚನೆ ನನಗಿರಲಿಲ್ಲ. ಹೇಳಬೇಕಾಗಿತ್ತು, ಹೇಳಿದ್ದೀನಿ ಬಿಗ್‌ಬಾಸ್‌ನವ್ರು ದಯವಿಟ್ಟು ಕ್ಷಮಿಸಿ" ಎಂದು ತಿಳಿಸಿದ್ದಾರೆ.

ಅಂದಹಾಗೆ ಬಿಗ್‌ಬಾಸ್ ಮನೆಗೆ ಕುಮಾರಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಅಲ್ಲ, ಬದಲಿಗೆ ಅತಿಥಿಯಾಗಿ ಹೋಗಿದ್ದರು. ಹಾಗಾಗಿ 20 ದಿನಕ್ಕೆ ಹೊರ ಬರುವಂತಾಗಿತ್ತು. ಅಗ್ನಿಪರೀಕ್ಷೆ ವೇದಿಕೆಯಲ್ಲಿ ಕುಮಾರಿ ಅವರ ಮುಗ್ಧ ಮಾತು ವೀಕ್ಷಕರಿಗೆ ಇಷ್ಟವಾಗಿತ್ತು. ಸುಮ್ಮನ್ ಕೂಗಾಡುವವರ ಬದಲು ಇಂತಹವರು ಮನೆ ಒಳಗೆ ಹೋಗಬೇಕು ಎಂದು ಸಾಕಷ್ಟು ಜನ ಬಯಸಿದ್ದರು. ಮಾಡ್ರನ್ ಮಹಾಕವಿ ಮಂಜ ಹಾಗೂ ಸಂಗೀತಾ ಭಟ್ ದಿಢೀರನೆ ಮನೆಯಿಂದ ಹೊರ ಬಂದಿದ್ದರು. ಹಾಗಾಗಿ ಅಗ್ನಿಪರೀಕ್ಷೆಯಲ್ಲಿ ಅಂತಿಮ ಹಂತದವರಗೆ ಬಂದಿದ್ದ ಕುಮಾರಿ ಹಾಗೂ ಲಕ್ಷ್ಮಿ ಗೌಡ ಅವರನ್ನು ವೈಲ್ಡ್‌ಕಾರ್ಡ್ ಎಂಟ್ರಿ ಹೆಸರಿನಲ್ಲಿ ಮನೆ ಒಳಗೆ ಕಳುಹಿಸಿದ್ದರು.