ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಈ ವಾರ ಮತ್ತೊಂದು ಎಲಿಮಿನೇಟ್ ಆಗಿದೆ. ವೈಲ್ಡ್ ಕಾರ್ಡ್ ಎಂಟ್ರಿ ಕುಮಾರಿ 20 ದಿನಕ್ಕೆ ತಮ್ಮ ಬಿಗ್‌ಬಾಸ್ ಜರ್ನಿ ಮುಗಿಸಿದ್ದಾರೆ. ಕುಮಾರಿ ಹಾಗೂ ಲಕ್ಷ್ಮಿ ಗೌಡ ಕೇವಲ ಅತಿಥಿಗಳ ರೀತಿ ಬಂದಿದ್ದಾರೆ. ಫಿನಾಲೆವರೆಗೂ ಅವರು ಹೋಗಲ್ಲ ಎನ್ನುವ ಅನುಮಾನ ಮೂಡಿತ್ತು. ಅದು ನಿಜವಾಗಿದೆ. ಕುಮಾರಿ ಜೊತೆ ಮನೆ ಪ್ರವೇಶಿಸಿದ್ದ ಲಕ್ಷ್ಮಿ ಕಳೆದ ವಾರವೇ ಹೊರಗೆ ಬಂದಿದ್ದರು.

ಅಗ್ನಿಪರೀಕ್ಷೆಯಲ್ಲಿ ಕೊನೆ ಹಂತದವರೆಗೆ ಬಂದಿದ್ದ ಕುಮಾರಿ ತಮ್ಮ ಮುಗ್ಧ ಮಾತುಗಳಿಂದ ಗಮನ ಸೆಳೆದಿದ್ದರು. ಆದರೆ ಕಾರಣಾಂತರಗಳಿಂದ ಮೊದಲಿಗೆ ಬಿಗ್‌ಬಾಸ್ ಮನೆ ಪ್ರವೇಶದ ಅವಕಾಶ ಸಿಕ್ಕಿರಲಿಲ್ಲ. ಸಾಕಷ್ಟು ಜನ ವೈಲ್ಡ್ ಕಾರ್ಡ್ ಎಂಟ್ರಿ ರೂಪದಲ್ಲಿ ದೊಡ್ಮನೆ ಒಳಗೆ ಆಕೆಯನ್ನು ನೋಡಲು ಬಯಸಿದ್ದರು. ಅದೇ ರೀತಿ ಆಯೋಜಕರು ಅವಕಾಶ ಕೊಟ್ಟಿದ್ದರು. ಇದ್ದಷ್ಟು ದಿನ ಕುಮಾರಿ ವೀಕ್ಷಕರ ಗಮನ ಸೆಳೆದರು. ಈ ವಾರಂತ್ಯದಲ್ಲಿ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ.

ಮೊದಲ ವಾರ ಚೆನ್ನಾಗಿ ಆಡಿದ್ದ ಕುಮಾರಿ ಎರಡನೇ ವಾರ ಡಲ್ ಆಗಿಬಿಟ್ಟರು. ಆರೋಗ್ಯ ಸಮಸ್ಯೆ ಕಾರಣ ಅಷ್ಟು ಲವಲವಿಕೆಯಿಂದ ಆಟ ಆಡಲು ಸಾಧ್ಯವಾಗಿರಲಿಲ್ಲ. ಆಸಿಯಾ, ಧನುಶ್, ಗಗನ್, ಜಗದೀಶ್, ಪ್ರಶಾಂತ್, ಕಿರಣ್, ಕುಮಾರಿ ಹಾಗೂ ಪ್ರಶಾಂತ್ ಈ ವಾರ ಮನೆಯಿಂದ ಹೊರಬರಲು ನಾಮಿನೇಟ್ ಆಗಿದ್ದರು. ಆಸಿಯಾ, ಗಗನ್, ಬಳಿಕ ಧನುಶ್ ಹಾಗೂ ಕಿರಣ್ ಕ್ರಮವಾಗಿ ಸೇವ್ ಮಾಡಲಾಗಿತ್ತು. ಅಂತಿಮವಾಗಿ ಜಗದೀಶ್, ಪ್ರಶಾಂತ್ ಮತ್ತು ಕುಮಾರಿ ಎಲಿಮಿನೇಟ್ ಆಗುವವರ ಪಟ್ಟಿಯಲ್ಲಿ ಉಳಿದಿದ್ದರು. ಮೂವರ ಮುಂದೆ ಮೂರು ಫಿರಂಗಿ ಇಟ್ಟು ಎಲಿಮಿನೇಟ್ ಪ್ರಕ್ರಿಯೆಯ ಕೊನೆ ಹಂತ ಮುಗಿಸಲಾಯಿತು.

20 ದಿನ ಮಾತ್ರ ಮನೆಯಲ್ಲಿ ಇದ್ದರೂ ಕುಮಾರಿ ಸಾಕಷ್ಟು ನೆನಪುಗಳನ್ನು ಹೊತ್ತು ಹೊರ ಬಂದಿದ್ದಾರೆ. ಮನೆಯ ಬಹುತೇಕ ಎಲ್ಲಾ ಸ್ಪರ್ಧಿಗಳ ಫೇವರಿಟ್ ಎನಿಸಿಕೊಂಡಿದ್ದರು. ಜಗದೀಶ್ ಸೇರಿ ಕೆಲವರು ಬಹಳ ಭಾವುಕರಾಗಿ ಆಕೆಗೆ ಬೀಳ್ಕೊಟ್ಟರು. ಕುಮಾರಿ ಹೊರಬಂದ ಬಳಿಕ ಮನೆಯಲ್ಲಿ 11 ಮಂದಿ ಮಾತ್ರ ಉಳಿದುಕೊಂಡಿದ್ದಾರೆ. ಇನ್ನು 44 ದಿನಗಳ ಬಿಗ್‌ಬಾಸ್ ಆಟ ಉಳಿದಿದೆ.