ಬಿಗ್‌ಬಾಸ್ ಮನೆಗೆ ಹೋಗಬೇಕು ಎನ್ನುವುದು ಸಾಕಷ್ಟು ಜನರ ಮಹದಾಸೆ. ಒಮ್ಮೆ ಮನೆ ಒಳಗೆ ಹೋಗಿಬಿಟ್ಟಮೇಲೆ ಟ್ರೋಫಿ ಗೆಲ್ಲುವ ಕನಸು ಶುರುವಾಗುತ್ತದೆ. ಪರಿಶ್ರಮದ ಜೊತೆಗೆ ಅದಕ್ಕೆ ಅದೃಷ್ಟ ಕೂಡ ಬೇಕು ಎನ್ನುವವರು ಇದ್ದಾರೆ. ದೇವರ ದಯೆ ಇದ್ದರೆ ಎಲ್ಲವೂ ಸಾಧ್ಯ ಎಂದು ನಂಬುವವರನ್ನು ನೋಡಬಹುದು.

ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗಿನಲ್ಲಿ ಕೂಡ ಬಿಗ್‌ಬಾಸ್ ಶೋ ನಡೀತಿದೆ. ಸೀಸನ್ 10ರಲ್ಲಿ ಟ್ರೋಫಿಗಾಗಿ ಭಾರೀ ಪೈಪೋಟಿ ನಡೀತಿದೆ. ಬಿಗ್‌ಬಾಸ್ ಟ್ರೋಫಿ ಗೆಲ್ಲಲು ಕೆಲವರು ಹೊರಗಡೆ ಕೂಡ ಪಿಆರ್‌ ಟೀಂ ಇಟ್ಟು ಕಸರತ್ತು ನಡೆಸುವುದನ್ನು ನೋಡಿದ್ದೇವೆ. ತೆಲುಗು ಬಿಗ್‌ಬಾಸ್ ಮನೆಗೆ ಕಿರುತೆರೆ ನಟ ಶಿವ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ. ಉತ್ತಮವಾಗಿ ಆಟ ಆಡುತ್ತಿದ್ದಾರೆ. ಶಿವ ಟ್ರೋಫಿ ಗೆಲ್ಲಬೇಕು ಎಂದು ಆತನ ಪ್ರೇಯಸಿ ಪ್ರಿಯಾಂಕ ಜೈನ್ ದೇವರಲ್ಲಿ ಪ್ರಾರ್ಥನೆ ನಡೆಸುತ್ತಿದ್ದಾರೆ.

ಶಿವ ದೊಡ್ಮನೆ ಒಳಗೆ ಹೋದ ದಿನದಿಂದ ಪ್ರಿಯಾಂಕ ಬೆಂಬಲವಾಗಿ ನಿಂತಿದ್ದಾರೆ. ಇತ್ತೀಚೆಗೆ ದೊಡ್ಮನೆ ಒಳಗೆ ಇಬ್ಬರ ಎಂಗೇಜ್‌ಮೆಂಟ್ ಕೂಡ ನಡೆದಿತ್ತು. ಅಂದಹಾಗೆ ಪ್ರಿಯಾಂಕ ಕೂಡ ಈ ಹಿಂದೆ ಬಿಗ್‌ಬಾಸ್ ಸ್ಪರ್ಧಿಯಾಗಿ ಮನೆ ಒಳಗೆ ಹೋಗಿದ್ದರು. ಇದೀಗ ಪ್ರಿಯಕರನ ಗೆಲುವಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ತಿರುಪತಿ ಬೆಟ್ಟವನ್ನು ಮೊಣಕಾಲಿನಲ್ಲಿ ಹತ್ತಿ ದೇವರ ದರ್ಶನ ಪಡೆದಿದ್ದರು. ಶಿವ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಬಿಗ್‌ಬಾಸ್ 10 ತೆಲುಗು ಶೋ 80 ದಿನ ಪೂರೈಸಿದೆ. ಶಿವ ಸೇರಿ 10 ಮಂದಿ ದೊಡ್ಮನೆ ಒಳಗೆ ಇದ್ದಾರೆ. ಟಾಪ್ 5 ಪಟ್ಟಿಯಲ್ಲಿ ಶಿವ ಕಾಣಿಸಿಕೊಳ್ಳಬಹುದು ಎಂದು ನಿರೀಕ್ಷಿಸಲಾಗ್ತಿದೆ. ಅಭಿಮಾನಿಗಳ ಬೆಂಬಲ ಕೂಡ ಅವರಿಗಿದೆ. ನಾಗಾರ್ಜುನ ಈ ಬಾರಿ ಕೂಡ ಶೋ ನಿರೂಪಣೆ ಮಾಡುತ್ತಿದ್ದಾರೆ. ಅಂದಹಾಗೆ ಸ್ಪರ್ಧಿಗೆ ಶಿವ ಕರ್ನಾಟಕ ಮೂಲದವರು. ಬೆಳಗಾವಿ ಮೂಲದ ಶಿವಕುಮಾರ್ ಕನ್ನಡದ 'ನಾಗಕನ್ನಿಕೆ' ಧಾರಾವಾಹಿಯಲ್ಲಿ ಮೊದಲಿಗೆ ನಟಿಸಿದ್ದರು. ಬಳಿಕ ತೆಲುಗು ಕಿರುತೆರೆಯಲ್ಲಿ ಅವಕಾಶ ಸಿಕ್ಕಿತ್ತು.

ಏಳೆಂಟು ವರ್ಷಗಳಿಂದ ಶಿವ ಹಾಗೂ ಪ್ರಿಯಾಂ ಪ್ರೀತಿಸುತ್ತಿದ್ದಾರೆ. ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಇತ್ತೀಚೆಗೆ ಬಿಗ್‌ಬಾಸ್ ಮನೆಯಲ್ಲಿ ಫ್ಯಾಮಿಲಿ ರೌಂಡ್ ನಡೆದಿತ್ತು. ಆಗ ಪ್ರಿಯಾಂಕ ಜೈನ್ ಮನೆ ಒಳಗೆ ಹೋಗಿ ಸರ್‌ಪ್ರೈಸ್ ನೀಡಿದ್ದರು. ಅಲ್ಲೇ ಇಬ್ಬರ ಎಂಗೇಜ್‌ಮೆಂಟ್ ನಡೆದಿತ್ತು. ಬಿಗ್‌ಬಾಸ್ ಇತಿಹಾಸದಲ್ಲೇ ಮೊದಲು ಎನ್ನುವಂತೆ ದೊಡ್ಮನೆ ಒಳಗೆ ನಿಜವಾಗಿ ಉಂಗುರ ಬದಲಿಸಿಕೊಂಡು ಜೋಡಿ ಮದುವೆ ನಿಶ್ಚಯ ಮಾಡಿಕೊಂಡಿತ್ತು.