ಬಿಗ್‌ಬಾಸ್ ಸೀಸನ್ 12ರ ಖ್ಯಾತಿಯ ಸ್ಪಂದನಾ ಸೋಮಣ್ಣ ಹೊಸಬಾಳಿಗೆ ಕಾಲಿಟ್ಟಿದ್ದಾರೆ. ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ ವರುಣ್ ಮುನಿರಾಜು ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವರುಣ್- ಸ್ಪಂದನಾ ಮದುವೆ ಶಾಸ್ತ್ರಗಳು ಕಳೆಕಟ್ಟಿದೆ. ಇತ್ತೀಚೆಗೆ ಅರಿಶಿನ ಶಾಸ್ತ್ರ ನಡೀತು. ಸ್ಪಂದನಾ ಫೋಟೊವೊಂದು ಸಖತ್ ವೈರಲ್ ಆಗ್ತಿದೆ.

ಕಳೆದ ವರ್ಷ ಬಿಗ್‌ಬಾಸ್ ಮನೆಯಲ್ಲಿ ಸ್ಪಂದನಾ ಹಾಗೂ ಗಿಲ್ಲಿ ವೀಕ್ಷಕರನ್ನು ರಂಜಿಸಿದ್ದರು. ಇಬ್ಬರ ಸ್ನೇಹ ವೀಕ್ಷಕರ ಗಮನ ಸೆಳೆದಿತ್ತು. ಪದೇ ಪದೆ ಕಳ್ಳೆಪುಟ್ಟಿ ಎಂದು ಆಕೆಯನ್ನು ಗಿಲ್ಲಿ ರೇಗಿಸುತ್ತಿದ್ದರು. ಸ್ಪಂದನಾ- ವರುಣ್ ಮದುವೆ ರಿಸೆಪ್ಷನ್ ಕಾರ್ಯಕ್ರಮದಲ್ಲಿ ಕೂಡ ಗಿಲ್ಲಿ ಭಾಗವಹಿಸಿದ್ದರು. ಇನ್ನು ಇದೇ ವೇಳೆ ಬಿಗ್‌ಬಾಸ್ ಮನೆಯಲ್ಲಿ ಸ್ಪಂದನಾ ಅವರನ್ನು ನೋಡಿ ಗಿಲ್ಲಿ ತಮಾಷೆ ಮಾಡಿದ್ದ ವೀಡಿಯೋವೊಂದು ವೈರಲ್ ಆಗ್ತಿದೆ.

ಬಿಗ್‌ಬಾಸ್ ಮನೆಯಲ್ಲಿ ಸ್ಪಂದನಾ ಹಾಗೂ ಗಿಲ್ಲಿ ಇಬ್ಬರಿಗೂ ಕಸ ಗುಡಿಸುವ ಟಾಸ್ಕ್ ಸಿಕ್ಕಿತ್ತು. ಆಗ ಸ್ಪಂದನಾ ಕೂತು ಕಸ ಗುಡಿಸುವ ಬಗ್ಗೆ ಗಿಲ್ಲಿ ತಮಾಷೆ ಮಾಡಿದ್ದರು. "ಸ್ಪಂದನಾ ಕಸ ಗುಡಿಸಲು ಕೂತಿಲ್ಲ. ಮದುವೆ ಟೈಮಲ್ಲಿ ಅರಿಶಿನ ನೀರು ಹಾಕಿಸಿಕೊಂಡು ಕೂರ್ತಾರಲ್ಲ ಆ ತರ ಕೂತಿದ್ದಾಳೆ" ಎಂದು ಗಿಲ್ಲಿ ನಗೆ ಚಟಾಕಿ ಹಾರಿಸಿದ್ದರು. ಇದೀಗ ಸ್ಪಂದನಾ ತಮ್ಮ ಮದುವೆ ಅರಿಶಿನ ಶಾಸ್ತ್ರದ ವೇಳೆ ಅದೇ ರೀತಿ ಕೂತಿರುವ ಫೋಟೊ ವೈರಲ್ ಆಗ್ತಿದೆ. ಎರಡನ್ನು ಲಿಂಕ್ ಮಾಡಿ ಗಿಲ್ಲಿ ಅವತ್ತು ಹೇಳಿದ್ದೇ ನಿಜವಾಯ್ತು ಎಂದು ಅಭಿಮಾನಿಗಳು ತಮಾಷೆಯಾಗಿ ಟ್ರೋಲ್ ಮಾಡ್ತಿದ್ದಾರೆ.

ಒಂದೇ ಕಾಲೇಜಿನಲ್ಲಿ ಓದಿದ್ರು ವರುಣ್ ಹಾಗೂ ಸ್ಪಂದನಾ ಎಂದೂ ಮಾತನಾಡಿರಲಿಲ್ಲ. ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಶುರುವಾದ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಕಿರುತೆರೆಯಲ್ಲಿ ಅವಕಾಶ ಪಡೆಯಲು ಸ್ಪಂದನಾ ಸಾಕಷ್ಟು ಕರಸತ್ತು ಮಾಡಿದ್ದರು. ಆಗ ವರುಣ್ ಬೆಂಬಲವಾಗಿ ನಿಂತಿದ್ದರು. ಸದ್ಯ ವಿದೇಶದಲ್ಲಿ ವರುಣ್ ಕೆಲಸ ಮಾಡ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೆ ತಮ್ಮ ಮದುವೆ ವಿಚಾರವನ್ನು ಸ್ಪಂದನಾ ಹಂಚಿಕೊಂಡಿದ್ದರು. ಇದೀಗ ರೆಸಾರ್ಟ್‌ವೊಂದರಲ್ಲಿ ಮದುವೆ ಶಾಸ್ತ್ರಗಳು ನಡೆದಿದೆ.

ಇನ್ನು ಜೋಡಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದ್ದರು. ಅದಕ್ಕೆಲ್ಲಾ ಸ್ಪಂದನಾ ತಲೆ ಕೆಡಿಸಿಕೊಂಡಿರಲಿಲ್ಲ. ವರುಣ್ ಹಾಗೂ ಸ್ಪಂದನಾ ಜೋಡಿಗೆ ಆಪ್ತರು, ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.