ಬಾಲಿವುಡ್ ನಟ ವಿದ್ಯುತ್ ಜಮ್ವಾಲ್ ದಕ್ಷಿಣದ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ತಮ್ಮ ಫಿಟ್ನೆಸ್ ಹಾಗೂ ಮಾರ್ಷಲ್ ಆರ್ಟ್ಸ್ ಸ್ಟಂಟ್ಸ್ ಮೂಲಕ ಸದಾ ಗಮನ ಸೆಳೆಯುತ್ತಾರೆ. ಇದೀಗ 'ಸ್ಟ್ರೀಟ್ ಫೈಟರ್' ಎಂಬ ಹಾಲಿವುಡ್ ಚಿತ್ರದಲ್ಲಿ ವಿದ್ಯುತ್ ನಟಿಸಿದ್ದಾರೆ. ಸಿನಿಮಾ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ 15 ನಿಮಿಷ ಉಸಿರು ಬಿಗಿ ಹಿಡಿದು ಅವರು ಎಲ್ಲರ ಹುಬ್ಬೇರಿಸಿದ್ದಾರೆ.

ನಾವು ನೀವು ಎರಡ್ಮೂರು ನಿಮಿಷ ಉಸಿರು ಬಿಗಿ ಹಿಡಿಯುವುದು ಕಷ್ಟ. ಅಂಥಾದ್ರಲ್ಲಿ 15 ನಿಮಿಷ ಅಂದ್ರೆ ತಮಾಷೆ ಮಾತಲ್ಲ. ಮುಂಬೈನಲ್ಲಿ ನಡೆದ 'ಸ್ಟ್ರೀಟ್ ಫೈಟರ್' ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಈ ಸಾಹಸ ಮಾಡಿದ್ದಾರೆ. ಆ ವೀಡಿಯೋ ವೈರಲ್ ಆಗ್ತಿದೆ. ಕಣ್ಣಿನಲ್ಲಿ ನೀರು ಬರುತ್ತಿದ್ದರು ತದೇಕಚಿತ್ತರಾಗಿ ವಿದ್ಯುತ್ ಉಸಿರು ಬಿಗಿಹಿಡಿದು ನಿಂತುಬಿಟ್ಟಿದ್ದರು.

ಬಳಿಕ ಮಾತನಾಡಿ ವಿದ್ಯುತ್ "ಇದೇನು ಮ್ಯಾಜಿಕ್ ಅಲ್ಲ. ಪ್ರಾಚೀನ ಭಾರತೀಯ ಜ್ಞಾನ. ಪತಂಜಲಿ ಯೋಗ ಪದ್ಧತಿ, ಪ್ರಾಣಾಯಾಮದ ಸಹಾಯದಿಂದ ತಾವು ಉಸಿರು ಬಿಗಿಹಿಡಿದು ಅಷ್ಟು ಹೊತ್ತು ಇದ್ದಿದ್ದಾಗಿ ಅವರು ತಿಳಿಸಿದ್ದಾರೆ. ಚಿಕ್ಕಂದಿನಿಂದ ಕಲರಿಪಯಟ್ಟು, ಯೋಗಭ್ಯಾಸ ಮಾಡಿದ್ದು ಶಾರೀರಿಕವಾಗಿ ಮಾನಸಿಕವಾಗಿ ತಾವು ಸದೃಢರಾಗುವಂತೆ ಮಾಡಿದೆ. ನಾನು ಇಂತಹ ಪ್ರಾಚೀನ ಕಲೆಗಳನ್ನು ಕಲಿಸಲು ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದಾರೆ.

ಅಂದಹಾಗೆ 'ಸ್ಟ್ರೀಟ್ ಫೈಟರ್' ಸಿನಿಮಾ ಹಿಂದಿ, ತೆಲುಗು, ಇಂಗ್ಲೀಷ್ ಸೇರಿ 16 ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಧಲ್ಸಿಮ್ ಪಾತ್ರದಲ್ಲಿ ವಿದ್ಯುತ್ ಜಮ್ವಾಲ್ ನಟಿಸಿದ್ದಾರೆ. ಕಿಟಾವ್ ಸಕುರಾಯ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜಮ್ಮು& ಕಾಶ್ಮೀರದಲ್ಲಿ ಹುಟ್ಟಿಬೆಳೆದ ನಟ ವಿದ್ಯುತ್ ತೆಲುಗಿನ 'ಶಕ್ತಿ' ಸಿನಿಮಾ ಮೂಲಕ ಬಣ್ಣದಲೋಕಕ್ಕೆ ಬಂದರು. ಬಳಿಕ 'ಬಿಲ್ಲಾ', 'ತುಫಾಕಿ', 'ಅಂಜಾನ್', 'ಜಂಗ್ಲಿ', 'ಮದರಾಸಿ' ಹೀಗೆ ಒಂದಷ್ಟು ಸಿನಿಮಾಗಳಲ್ಲಿ ಮಿಂಚಿದ್ದಾರೆ.