ಹಿರಿಯ ವಾದ್ಯ ಕಲಾವಿದ ಡ್ರಮ್ಮರ್‌ದೇವ (63) ಶನಿವಾರ(ಸೆಪ್ಟೆಂಬರ್ 26) ಕೊನೆಯುಸಿರೆಳೆದಿದ್ದಾರೆ. ಮೂರುವರೆ ವರ್ಷದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಗ್ಯಾಂಗ್ರೀನ್ ಆಗಿ ದೇವ ಅವರ ಬಲಗಾಲನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಗಿತ್ತು. ಜೂನ್ ತಿಂಗಳಲ್ಲಿ ಸ್ಟ್ರೋಕ್ ಆಗಿ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಆರ್ ಆರ್ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ಮೊದಮೊದಲು ಡ್ರಮ್ ಒರೆಸುವ ಕೆಲಸ ಮಾಡುತ್ತಿದ್ದ ದೇವ ಮುಂದೆ ಡ್ರಮ್ಮರ್ ದೇವ ಎಂದೇ ಚಿತ್ರರಂಗದಲ್ಲಿ ಹೆಸರು ಮಾಡಿದರು. ನೂರಾರು ಸಿನಿಮಾಗಳ ಸಂಗೀತಕ್ಕೆ ಡ್ರಮ್ ನುಡಿಸುವ ಮೂಲಕ ಗಮನ ಸೆಳೆದಿದ್ದರು. ಇಳಯರಾಜಾ ಸೇರಿದಂತೆ ಖ್ಯಾತ ಸಂಗೀತ ನಿರ್ದೇಶಕರ ಸಿನಿಮಾಗಳಿಗೆ ಕೆಲಸ ಮಾಡಿದ್ದರು.
'ಪ್ರೀತಿ ನೀ ಹಿಂಗ್ಯಾಕೆ' ಹಾಗೂ '5 ಈಡಿಯಟ್ಸ್' ಎಂಬ ಸಿನಿಮಾಗಳಿಗೆ ಡ್ರಮ್ಮರ್ ದೇವ ಸಂಗೀತ ಸಂಯೋಜನೆ ಕೂಡ ಮಾಡಿದ್ದರು. ಆರ್‌ಸಿಬಿ ಪಂದ್ಯಗಳ ವೇಳೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಡ್ರಮ್ ಬಾರಿಸುತ್ತಾ ದೇವ ಕಾಣಿಸಿಕೊಳ್ಳುತ್ತಿದ್ದರು. ತಮ್ಮ ವಿಭಿನ್ನ ಶೈಲಿಯಲ್ಲಿ ಡ್ರಮ್ ನುಡಿಸುವ ಮೂಲಕ ಕಮಾಲ್ ಮಾಡುತ್ತಿದ್ದರು. ತಂಡದ ಆಟಗಾರರು, ಅಭಿಮಾನಿಗಳನ್ನು ಹುರಿದುಂಬಿಸುತ್ತಿದ್ದರು. ದೇವ ಅಗಲಿಕೆಗೆ ಚಿತ್ರರಂಗ ಕಂಬನಿ ಮಿಡಿದಿದೆ.
ಒಬ್ಬ ಮಗ ಹಾಗೂ ಒರ್ವ ಮಗಳನ್ನು ಡ್ರಮ್ಮರ್ ದೇವ ಅಗಲಿದ್ದಾರೆ. 'ಕನ್ನಡದ ಶಿವಮಣಿ' ಎಂದು ದೇವ ಖ್ಯಾತಿ ಗಳಿಸಿದ್ದರು. ಡ್ರಮ್ ಒರೆಸುವ ಕೆಲಸ ಆರಂಭಿಸಿದರೂ ತಮ್ಮ ಅತೀವ ಆಸಕ್ತಿ, ಸಂಗೀತದ ಮೇಲಿನ ಪ್ರೀತಿಯಿಂದ ಹಂತ ಹಂತವಾಗಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದರು. ಡ್ರಮ್ ಬಾರಿಸುವುದನ್ನೇ ತಮ್ಮ ವೃತ್ತಿಯಾಗಿ ಮಾಡಿಕೊಂಡಿದ್ದರು.