ಭಾರತೀಯ ಚಿತ್ರರಂಗ ಕಂಡ ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ಕೊನೆಯುಸಿರೆಳೆದಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ಹಲವು ಹಿಟ್ ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.
ವಿವಿಧ ಭಾಷೆಗಳಲ್ಲಿ ಹಲವು ವಿಭಿನ್ನ ಸಿನಿಮಾಗಳನ್ನು ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶನ ಮಾಡಿದ್ದರು. ಕನ್ನಡದಲ್ಲಿ ಅಪರೂಪದ ಚಿತ್ರಗಳನ್ನು ಅವರು ಕಟ್ಟಿಕೊಟ್ಟಿದ್ದರು. 1972ರಲ್ಲಿ ತೆಲುಗಿನ 'ನೀತಿ ನಿಜಾಯಿತಿ' ಎಂಬ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಸಿಂಗೀತಂ ಶ್ರೀನಿವಾಸ ರಾವ್ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದರು. ಅದಕ್ಕೂ ಮುನ್ನ ಒಂದಷ್ಟು ಸಿನಿಮಾಗಳಿಗೆ ಸಹಾಯಕರಾಗಿ ಕೆಲಸ ಮಾಡಿದ್ದರು. ಕನ್ನಡದಲ್ಲಿ ಅವರು ಆಕ್ಷನ್ ಕಟ್ ಹೇಳಿದ್ದ ಮೊದಲ ಸಿನಿಮಾ ಅಣ್ಣಾವ್ರು ನಟಿಸಿದ 'ಹಾಲುಜೇನು' .
'ಚಲಿಸುವ ಮೋಡಗಳು', 'ಎರಡು ನಕ್ಷತ್ರಗಳು', 'ಶ್ರಾವಣ ಬಂತು', 'ವಸಂತ ಗೀತ', 'ಜ್ವಾಲಾಮುಖಿ', 'ಭಾಗ್ಯದ ಲಕ್ಷ್ಮಿ ಬಾರಮ್ಮ', 'ಆನಂದ್', 'ಶ್ರುತಿ ಸೇರಿದಾಗ', 'ದೇವತಾ ಮನುಷ್ಯ', 'ಚಿರಂಜೀವಿ ಸುಧಾಕರ', 'ಸಂಯುಕ್ತಾ', 'ಬೆಳ್ಳಿಯಪ್ಪ ಬಂಗಾರಪ್ಪ', 'ಟುವ್ವಿ ಟುವ್ವಿ ಟುವ್ವಿ', 'ಮೇಕಪ್' ಹೀಗೆ ಹಲವು ಕನ್ನಡ ಸಿನಿಮಾಗಳನ್ನು ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶನ ಮಾಡಿದ್ದರು. ಡಾ. ರಾಜ್ ಕಾಂಬಿನೇಷನ್‌ನಲ್ಲಿ ಬಂದ ಸಿನಿಮಾಗಳೆಲ್ಲಾ ಸೂಪರ್ ಹಿಟ್ ಆಗಿತ್ತು. ಶಿವಣ್ಣ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಹೀರೊ ಆಗಿ ನಟಿಸಿದ ಮೊದಲ ಚಿತ್ರಗಳಿಗೆ ಇವರೇ ಸಾರಥ್ಯ ವಹಿಸಿದ್ದರು. ದೊಡ್ಮನೆಗೆ ಇವರ ಪ್ರತಿಭೆ ಮೇಲೆ ಅಷ್ಟು ನಂಬಿಕೆಯಿತ್ತು.
ಜಗ್ಗೇಶ್ ನಟಿಸಿದ 'ಮೇಕಪ್' ಬಳಿಕ ಕನ್ನಡದಲ್ಲಿ ಅವರು ಸಿನಿಮಾ ಮಾಡಲೇ ಇಲ್ಲ. ಡಾ. ರಾಜ್ ಹಾಗೂ ಅವರ ಮೂವರು ಮಕ್ಕಳನ್ನು ನಿರ್ದೇಶಿಸಿದ ಕೀರ್ತಿ ಸಿಂಗೀತಂ ಶ್ರೀನಿವಾಸ ರಾವ್ ಅವರದ್ದು. 'ಪುಷ್ಪಕ ವಿಮಾನ', 'ಅಪೂರ್ವ ಸಹೋದರಂಗಳ್', 'ಆದಿತ್ಯಾ 369', 'ಭೈರವ ದ್ವೀಪಂ', 'ಹಾಲುಜೇನು', 'ಭಾಗ್ಯದ ಲಕ್ಷ್ಮಿಬಾರಮ್ಮ', 'ಚಲಿಸುವ ಮೋಡಗಳು', 'ರಾಜಾ ಪಾರ್ವೈ', 'ಮಯೂರಿ', 'ಮೈಕಲ್ ಮದನ್ ಕಾಮರಾಜನ್' ಅವರು ನಿರ್ದೇಶನ ಮಾಡಿದ್ದ ಟಾಪ್ 10 ಸಿನಿಮಾಗಳು.
ಸಿಂಗೀತಂ ಶ್ರೀನಿವಾಸ ರಾವ್ ಅಗಲಿಕೆ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ. ದಕ್ಷಿಣ ಭಾರತದ ಭಾಷೆಗಳಲ್ಲಿ ಮಾತ್ರವಲ್ಲ ಹಿಂದಿ, ಇಂಗ್ಲೀಷ್ ಭಾಷೆಗಳಲ್ಲಿ ಕೂಡ ಅವರು ಸಿನಿಮಾ ನಿರ್ದೇಶನ ಮಾಡಿದ್ದರು. ಇದೇ ವರ್ಷ ಬಂದ 'ಸಿಂಗೀತಂ' ಅವರು ಆಕ್ಷನ್ ಕಟ್ ಹೇಳಿದ ಕೊನೆಯ ಸಿನಿಮಾ. ಬಹುಮುಖ ಪ್ರತಿಭೆಯಾಗಿದ್ದ ಅವರು ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. 'ಭಾಗ್ಯದ ಲಕ್ಷ್ಮಿಬಾರಮ್ಮ' ಹಾಗೂ 'ಸಂಯುಕ್ತಾ' ಚಿತ್ರಗಳಿಗೆ ಸ್ವತಃ ಟ್ಯೂನ್ ಹಾಕಿದ್ದರು.