ಬಣ್ಣದಲೋಕದಲ್ಲಿರುವ ಎಲ್ಲರ ನಿಜ ಜೀವನ ಕೂಡ ಬಣ್ಣಗಳಿಂದ ಕೂಡಿರುತ್ತದೆ ಎಂದುಕೊಳ್ಳುವುದು ತಪ್ಪು. ತೆರೆಮೇಲೆ ಬಣ್ಣ ಹಚ್ಚಿ ನಟಿಸುವವರು ವೈಯಕ್ತಿಕವಾಗಿ ಸಾಕಷ್ಟು ಸಮಸ್ಯೆ ಎದುರಿಸುತ್ತಿರುತ್ತಾರೆ. ರಂಗಭೂಮಿ ಹಾಗೂ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದ ಹಿರಿಯ ನಟಿ ಸುಂದರಶ್ರೀ ಈಗ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗಾಗಿ ಹಣಕಾಸಿನ ನೆರವಿಗೆ ಕೈಚಾಚಿದ್ದಾರೆ.
ವಯೋಸಹಜ ಕಾಯಿಲೆಯಿಂದ ನಟಿ ಸುಂದರಶ್ರೀ ಬಳಲುತ್ತಿದ್ದಾರೆ. ಅವರಿಗೆ ಈಗ 65 ವರ್ಷ ವಯಸ್ಸು. ವೈದ್ಯಕೀಯ ಚಿಕಿತ್ಸೆ ವೆಚ್ಚ ಭರಿಸಲು ಪರದಾಡುವಂತಾಗಿದ್ದು ಸಹಾಯಕ್ಕಾಗಿ ವಿನಂತಿ ಮಾಡಿದ್ದಾರೆ. ಅವರು ಆಸ್ಪತ್ರೆ ಬೆಡ್ ಮೇಲೆ ಕುಳಿತು ಮಾತನಾಡಿರುವ ವೀಡಿಯೋ ವೈರಲ್ ಆಗ್ತಿದೆ. "ನಾನು ಸುಂದರಶ್ರೀ.. ಹುಷಾರಿಲ್ಲದೇ ಆಸ್ಪತ್ರೆಗೆ ದಾಖಲಾಗಿ ಮೂರು ತಿಂಗಳಾಯ್ತು. ನನಗೆ ಹಣ ಸಹಾಯ ಬೇಕಿದೆ. ಯಾರಾದರೂ ಸಹಾಯ ಮಾಡಬಹುದು" ಎಂದು ಅವರು ಕೇಳಿಕೊಂಡಿದ್ದಾರೆ. ಆಪ್ತರು ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ದೆಹಲಿಯ ಪ್ರತಿಷ್ಠಿತ 'ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ' ಸಂಸ್ಥೆಯಲ್ಲಿ ಸುಂದರಶ್ರೀ ನಟನೆ ಕಲಿತವರು. ಇಬ್ಬರು ಸಹೋದರರು ಹಾಗೂ ಒಬ್ಬ ಸಹೋದರಿ, ಓರ್ವ ಮಗಳು, ಮೊಮ್ಮಗ ಸುಂದರಶ್ರೀ ಅವರಿಗಿದ್ದಾರೆ. 'ಜೊತೆ ಜೊತೆಯಲಿ', 'ಗುಪ್ತಗಾಮಿನಿ', 'ಪುಟ್ಟಕ್ಕನ ಮಕ್ಕಳು', 'ಸೂರ್ಯವಂಶ' ಸೇರಿ ಸಾಕಷ್ಟು ಕಿರುತೆರೆ ಧಾರಾವಾಹಿಗಳಲ್ಲಿ ಆಕೆ ನಟಿಸಿದ್ದಾರೆ. ಕೆಲ ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ.
ಗುಬ್ಬಿ ವೀರಣ್ಣ ಅವರ ಮೊಮ್ಮಗಳಾದ ಹಿರಿಯ ನಟಿ ಸುಂದರಶ್ರೀ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಅವರು ನೆರವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.#Sundarashree #GubbiVeeranna #KannadaCinema #SeniorActress #KarnatakaNews #DigitalSanchari pic.twitter.com/Pk20WTBqRl
— Digital Sanchari (@DigitalSan41) September 29, 2026