ಹಿರಿಯ ನಟಿ ರಾಧ ಕೌಟುಂಬಿಕ ಕಲಹ ಬೀದಿಗೆ ಬಂದಿದೆ. ಸಹೋದರಿ ಅಂಬಿಕಾ ವಿರುದ್ಧವೇ ರಾಧಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನನ್ನ ಸಹೋದರಿ ಅಂಬಿಕಾ ಹಾಗೂ ಸಹೋದರ ಮಲ್ಲಿಕಾರ್ಜುನ್ ವಿರುದ್ಧ ವಂಚನೆ ಆರೋಪ ಮಾಡಿದ್ದಾರೆ. ನಾನು ಸಹಿ ಮಾಡಿದ್ದ ಖಾಲಿ ಚೆಕ್‌ಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
ಗ್ರೇಟರ್ ಚೆನ್ನೈ ಪೊಲೀಸ್ ಕಮೀಷನರ್ ಕಚೇರಿಗೆ ಇಂದು(ಸೆಪ್ಟೆಂಬರ್ 21) ಭೇಟಿ ನೀಡಿ ನಟಿ ರಾಧಾ ಮಾಹಿತಿ ನೀಡಿದ್ದಾರೆ. ನಾನು ಸಹಿ ಮಾಡಿದ್ದ ಖಾಲಿ ಚೆಕ್ ಬಳಸಿ 46 ಕೋಟಿ ರೂ.ಗಳನ್ನು ಲಪಟಾಯಿಸಲು ಸಹೋದರ, ಸಹೋದರಿ ಯತ್ನಿಸಿದ್ದಾರೆ ಎಂದು ಆಕೆ ದೂರಿನಲ್ಲಿ ಆರೋಪಿಸಿದ್ದಾರೆ. 'ARS ಗಾರ್ಡನ್ ಸ್ಟುಡಿಯೋ' ಹೆಸರಿನಲ್ಲಿ ಆ ಬ್ಯಾಂಕ್ ಖಾತೆಯನ್ನು ನಿರ್ವಹಿಸಲಾಗ್ತಿತ್ತು. ಕಳೆದ ವರ್ಷ ಜನವರಿಯಲ್ಲಿ ಬ್ಯುಸಿನೆಸ್ ಅನ್ನು 'RR ಗಾರ್ಡನ್ಸ್' ಎಂದು ಬದಲಿಸಲಾಗಿತ್ತು. ಹಾಗಾಗಿ ಹಳೇ ಚೆಕ್ ಬುಕ್ ಬಳಸುತ್ತಿರಲಿಲ್ಲ. ಮರೆತೇಬಿಟ್ಟಿದ್ದೆ. ನಾಲ್ಕು ದಿನಗಳ ಹಿಂದೆ ಈ ವಿಷಯ ಗೊತ್ತಾಗಿ ಎಚ್ಚೆತ್ತುಕೊಂಡಿದ್ದಾಗಿ ತಿಳಿಸಿದ್ದಾರೆ.
ಅಂಬಿಕಾಗೆ ನಾನು ಯಾವುದೇ ಚೆಕ್ ನೀಡಿಲ್ಲ. ಆದರೆ 46 ಕೋಟಿ ರೂಪಾಯಿ ಪಡೆಯಲು ಐದು ಚೆಕ್ ಅನ್ನು ಬ್ಯಾಂಕ್‌ನಲ್ಲಿ ಕೊಟ್ಟಿರುವುದಾಗಿ ಬ್ಯಾಂಕ್ ಕಡೆಯಿಂದ ಮಾಹಿತಿ ಸಿಕ್ಕಿದೆ. ಆ ಚೆಕ್‌ಗಳನ್ನು ಸಹೋದರ ಮಲ್ಲಿಕಾರ್ಜುನ್ ಭರ್ತಿ ಮಾಡಿದ್ದಾನೆ. ಇಬ್ಬರೂ ಸೇರಿ ಕಾನೂನುಬಾಹಿರ ಆರ್ಥಿಕ ಲಾಭಕ್ಕಾಗಿ ಆ ದಾಖಲೆಗಳನ್ನು ಬಳಸಲು ಪ್ರಯತ್ನಿಸಿದರು ಎಂದು ರಾಧಾ ಆರೋಪಿಸಿದ್ದಾರೆ. ತಮ್ಮ ಆಸ್ತಿ ವಿಚಾರದಲ್ಲೂ ಅಂಬಿಕಾ ಹಾಗೂ ಮಲ್ಲಿಕಾರ್ಜುನ್ ಅವರಿಗೆ ಯಾವುದೇ ಹಕ್ಕಿಲ್ಲ ಎಂದು ತಿಳಿಸಿದ್ದಾರೆ.