ತೆಲುಗಿನ 'ಬೇಬಿ' ಸಿನಿಮಾ ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ. ಸಾಯಿ ರಾಜೇಶ್ ನೀಲಂ ನಿರ್ದೇಶನದ ಚಿತ್ರದಲ್ಲಿ ಆನಂದ್ ದೇವರಕೊಂಡ ಜೋಡಿಯಾಗಿ ವೈಷ್ಣವಿ ಚೈತನ್ಯಾ ನಟಿಸಿದ್ದರು. ಅದಕ್ಕೂ ಮುನ್ನ ಕೆಲ ಸಿನಿಮಾಗಳಲ್ಲಿ ಆಕೆ ಬಣ್ಣ ಹಚ್ಚಿದ್ರು ಈ ಚಿತ್ರದ ಪಾತ್ರದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. ಆದರೆ ಸಿನಿಮಾ ಬಳಿಕ ಸಾಕಷ್ಟು ಜನ ಟ್ರೋಲ್ ಮಾಡಿದ್ರು ಎಂದು ಆಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಆಟೋ ಡ್ರೈವರ್ ಒಬ್ಬನನ್ನು ಬಾಲ್ಯದಿಂದ ಪ್ರೀತಿಸುವ ವೈಷ್ಣವಿ ಬಳಿಕ ಶ್ರೀಮಂತ ಹುಡುಗನ ಮೋಹ ಪಾಶಕ್ಕೆ ಸಿಲುಕುವ ಕಥೆ 'ಬೇಬಿ' ಚಿತ್ರದಲ್ಲಿತ್ತು. ಇದೇ ಕಾರಣಕ್ಕೆ ವೈಷ್ಣವಿ ಕೆಲವರಿಂದ ಟೀಕೆ ಎದುರಿಸುವಂತಾಗಿತ್ತು. ವೈಷ್ಣವಿ ನಟನೆಯ 'ಎಪಿಕ್' ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾ ಪ್ರಚಾರದ ವೇಳೆ ಸಂದರ್ಶನವೊಂದರಲ್ಲಿ ಅವರು ಮಾತನಾಡಿದ್ದಾರೆ. ಕೆಲವರು ನನ್ನ ಪೋಸ್ಟರ್‌ಗೆ ಚಪ್ಪಲಿಯಲ್ಲಿ ಹೊಡೆದ್ರ, ಕೆಟ್ಟ ಕೆಟ್ಟದಾಗಿ ಬೈದು ಟ್ರೋಲ್ ಮಾಡಿದ್ರು ಎಂದು ಭಾವುಕರಾಗಿದ್ದಾರೆ.
'ಬೇಬಿ' ಸಿನಿಮಾಗೂ ಮುನ್ನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದೆ.. ಆ ಚಿತ್ರದಿಂದ ನನಗೆ ಸಿಕ್ಕ ಗೆಲುವಿಗೆ ಖುಷಿ ಪಡಬೇಕೋ, ನೆಗೆಟಿವ್ ಕಾಮೆಂಟ್ ನೋಡಿ ಅಳಬೇಕೋ ಗೊತ್ತಾಗಲಿಲ್ಲ ಎಂದು ವೈಷ್ಣವಿ ಹೇಳಿದ್ದಾರೆ. "ಇಷ್ಟು ದಿನ ನಟಿಯಾಗಬೇಕು, ಈ ಹಂತಕ್ಕೆ ಬರಬೇಕು ಅಂದುಕೊಂಡಿದ್ದು ಇದಕ್ಕೇನಾ? ಪೋಸ್ಟರ್‌ಗೆ ಚಪ್ಪಲಿಯಲ್ಲಿ ಹೊಡಿತ್ತಿದ್ದಾರೆ, ಗಲೀಜು ಪದಗಳನ್ನು ಬಳಸಿ ಬೈಯ್ತಿದ್ದಾರೆ. ನಿಜಕ್ಕೂ ನೋವಾಯ್ತು.. ಕೆಲ ದಿನ ಹೀಗೆ ಮುಂದುವರೀತು. ನಿಧಾನವಾಗಿ ಅದನ್ನು ಮರೆಯೋಕೆ ಪ್ರಯತ್ನಿಸಿದೆ. ನೆಗೆಟಿವ್ ಬದಲು ಪಾಸಿಟಿವ್ ಏನಿದೆ ಎಂದು ಹುಡುಕಲು ಆರಂಭಿಸಿದೆ. ಎಲ್ಲರೂ ಸಿನ್ಮಾ ಹಾಗೂ ನನ್ನ ನಟನೆ ಬಗ್ಗೆ ಮಾತನಾಡ್ತಿದ್ದಾರೆ. ಅದನ್ನು ಒಪ್ಪಿಕೊಳ್ಳಬೇಕು ಅಂತ ನಿರ್ಧರಿಸಿದೆ" ಎಂದು ವಿವರಿಸಿದ್ದಾರೆ.