ಆತ್ಮೀಯರಾಗಿದ್ದವರು ದೂರಾಗಲು ಚಿಕ್ಕ ಕಾರಣ ಸಾಕು. ಒಂದ್ಕಾಲದಲ್ಲಿ ಸ್ನೇಹಿತರಾಗಿದ್ದವರು ಭಿನ್ನಾಭಿಪ್ರಾಯಗಳಿಂದ ದೂರಾಗೋದು, ಮತ್ತೆ ಮುನಿಸು ಮರೆತು ಒಂದಾಗುವುದು ಹೊಸದೇನು ಅಲ್ಲ. ಚಿತ್ರರಂಗದಲ್ಲಿ ಕೂಡ ಇದು ಸರ್ವೇ ಸಾಮಾನ್ಯ. ತಮಿಳು ನಟ ಧನುಷ್ ಹಾಗೂ ಹಾಸ್ಯನಟ ವಡಿವೇಲು 18 ವರ್ಷಗಳಿಂದ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ.
'ಪಡಿಕ್ಕಾದವನ್' ಸಿನಿಮಾ ಸಮಯದಲ್ಲಿ ಧನುಷ್ ಹಾಗೂ ವಡಿವೇಲು ಕೆಲ ಭಿನ್ನಾಭಿಪ್ರಾಯಗಳಿಂದ ದೂರಾಗಿದ್ದರು. ಬಳಿಕ ಒಟ್ಟಿಗೆ ನಟಿಸಲೇ ಇಲ್ಲ. ಅಂತೂ ಇಂತೂ ಹೊಸ ಚಿತ್ರದಲ್ಲಿ ಇಬ್ಬರೂ ಬಣ್ಣ ಹಚ್ಚುತ್ತಿದ್ದಾರೆ. ತಮಿಳರಸನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಇಳಯಂಗುಡಿ ಬಳಿಯ ಮರನಾಡು ಗ್ರಾಮದ ಮರನಾಡು ಕರುಪ್ಪನಸಾಮಿ ದೇವಸ್ಥಾನದಲ್ಲಿ ಹೊಸ ಚಿತ್ರ ಸೆಟ್ಟೇರಿದೆ.
ಮುಹೂರ್ತ ಸಮಾರಂಭದಲ್ಲಿ ನಟ ವಡಿವೇಲು ಸಹ ಭಾಗಿ ಆಗಿದ್ದರು. 18 ವರ್ಷಗಳಿಂದ ನಾನು ಹಾಗೂ ಧನುಷ್ ಯಾಕೆ ಒಟ್ಟಿಗೆ ನಟಿಸಲಿಲ್ಲ ಎನ್ನುವುದನ್ನು ಹೇಳಿದ್ದಾರೆ. "ಬಹಳ ವರ್ಷಗಳ ನಾನು, ಧನುಷ್ ಸರ್ ಒಟ್ಟಿಗೆ ನಟಿಸ್ತಿದ್ದೀವಿ. ಇಷ್ಟು ದಿನ ಯಾಕೆ ನಟಿಸ್ಲಿಲ್ಲ ಎಂದು ಕೇಳಬಹುದು. ಚಿತ್ರರಂಗದಲ್ಲಿ ಇಬ್ಬರ ನಡುವೆ ತಂದಿಡುವವರು ಹೆಚ್ಚು. ನಮ್ಮಿಬ್ಬರ ನಡುವೆ ಯಾರೋ ಬೆಂಕಿ ಹಂಚಿದ್ರು. ಹಂಗಾಗಿ ಇಷ್ಟು ವರ್ಷ ಜೊತೆಯಾಗಿ ಕೆಲಸ ಮಾಡಲಿಲ್ಲ" ಎಂದು ವಡಿವೇಲು ಹೇಳಿದ್ದಾರೆ.
ಧನುಷ್ ಹಾಗೂ ವಡಿವೇಲು ಇಬ್ಬರೂ 'ಪಡಿಕ್ಕಾದವನ್' ಚಿತ್ರದಲ್ಲಿ ನಟಿಸಬೇಕಿತ್ತು. ಎರಡು ದಿನಗಳ ಕಾಲ ಚಿತ್ರೀಕರಣದಲ್ಲಿ ವಡಿವೇಲು ಭಾಗವಹಿಸಿದ್ದರು. ಅವರು ಚಿತ್ರದಿಂದ ಹೊರ ಬಂದಮೇಲೆ ಆ ಪಾತ್ರ ಮತ್ತೊಬ್ಬ ಹಾಸ್ಯನಟ ವಿವೇಕ್ ಪಾಲಾಗಿತ್ತು. ಮೂರನೇ ವ್ಯಕ್ತಿ ಕಾರಣಕ್ಕೆ ಹೀಗಾಯ್ತು ಎಂದು ವಡಿವೇಲು ಈಗ ಹೇಳಿರುವುದು ವೈರಲ್ ಆಗ್ತಿದೆ.