ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಭುದೇವ 22 ವರ್ಷಗಳ ಹಿಂದೆ 'H2O' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಅದು ಉಪ್ಪಿ ವಿಭಿನ್ನ ಪ್ರಯತ್ನ ಆಗಿತ್ತು. ಇದೀಗ ಮತ್ತೆ ಇಬ್ಬರೂ ಒಟ್ಟಿಗೆ ನಟಿಸುತ್ತಿದ್ದಾರೆ. ಈಗಾಗಲೇ ಒಂದು ಶೆಡ್ಯೂಲ್ ಚಿತ್ರೀಕರಣ ಕೂಡ ಮುಗಿಸಿದ್ದಾರೆ. ಅಂದಹಾಗೆ ಇದು ಕನ್ನಡ ಸಿನಿಮಾ ಅಲ್ಲ ಬದಲಿಗೆ ತಮಿಳು ಸಿನಿಮಾ.
ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಇನ್ನು ಹೆಸರಿಡದ ಚಿತ್ರ ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ತಮಿಳಿನ ಮತ್ತೊಬ್ಬ ನಟ ಅಥರ್ವ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಕಾರ್ತಿಕ್ ಸುಬ್ಬರಾಜ್ ಸಾರಥ್ಯದ ಚಿತ್ರದಲ್ಲಿ ಉಪ್ಪಿ ನಟಿಸುವ ಬಗ್ಗೆ ಕೆಲ ದಿನಗಳ ಹಿಂದೆಯೇ ಮಾಹಿತಿ ಸಿಕ್ಕಿತ್ತು. ಇದೇ ಚಿತ್ರದಲ್ಲಿ ಈಗ ಪ್ರಭುದೇವ ಸಹ ನಟಿಸುತ್ತಾರೆ ಎನ್ನುವ ಮಾಹಿತಿ ನೀಡಿದ್ದಾರೆ ನಿರ್ದೇಶಕರು.
ಒಂದು ಕಾದಂಬರಿ ಆಧರಿಸಿ ಕಾರ್ತಿಕ್ ಸುಬ್ಬರಾಜ್ ಈ ಸಿನಿಮಾ ಕಥೆ ಮಾಡಿದ್ದಾರೆ. ನೆಟ್‌ಫ್ಲಿಕ್ಸ್ ಅವ್ರು ಈ ಕಥೆ ಇಷ್ಟಪಟ್ರು. ಹಾಗಾಗಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡದೇ ನೇರವಾಗಿ ಈ ಸಿನಿಮಾ ಓಟಿಟಿಗೆ ಬರಲಿದೆ ಎಂದಿದ್ದಾರೆ. ಇದೊಂದು ಹಳ್ಳಿ ಸೊಗಡಿನ ಸಿನಿಮಾ ಆಗಿದ್ದು ಅಕ್ಟೋಬರ್ 3ನೇ ವಾರ ಎರಡನೇ ಶೆಡ್ಯೂಲ್ ಚಿತ್ರೀಕರಣ ನಡೆಯಲಿದೆ. ಇನ್ನು ಹೆಸರಿಡದ ಸಿನಿಮಾ ಕುತೂಹಲ ಮೂಡಿಸಿದೆ.
ಉಪೇಂದ್ರ ಅವರಿಗೆ ತಮಿಳು ಚಿತ್ರರಂಗ ಹೊಸದಲ್ಲ. ಬಹಳ ಹಿಂದೆಯೇ ವಿಶಾಲ್ ಜೊತೆ 'ಸತ್ಯಂ' ಎಂಬ ಚಿತ್ರದಲ್ಲಿ ಉಪ್ಪಿ ನಟಿಸಿದ್ದರು. ಕಳೆದ ವರ್ಷ ರಜನಿಕಾಂತ್ ನಟನೆಯ 'ಕೂಲಿ' ಚಿತ್ರದಲ್ಲಿ ಸಣ್ಣದೊಂದು ಮಾಡಿದ್ದರು. ಇದೀಗ ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಚಿತ್ರಕ್ಕೆ ಕೈ ಜೋಡಿಸಿದ್ದಾರೆ. ಅಣ್ಣಾವ್ರು ಹಾಗೂ ರಜನಿಕಾಂತ್ ಅವರನ್ನು ಮನಸ್ಸಿನಲ್ಲಿಟ್ಟುಕೊಂಡು 'H2O' ಸಿನಿಮಾ ಕಥೆ ಮಾಡಿದ್ದರು ಉಪೇಂದ್ರ. ಅಂತಿಮವಾಗಿ ಪ್ರಭುದೇವ ಜೊತೆ ಸೇರಿ ತಾವೇ ನಟಿಸಿದ್ದರು. ಈಗ ಮತ್ತೆ ಅವರೊಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
Karthick Subbaraj Next - OTT film starring Atharvaa Prabhudeva, Upendra.
— Entertainment (@sivakumar3787) September 30, 2026
Then #Mahaan2 💥👌#BiggBossTamil pic.twitter.com/TQztUAQtXB