ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಗೌಡ ಒಂದ್ಕಾಲದಲ್ಲಿ ಬಹಳ ಆತ್ಮೀಯ ಸ್ನೇಹಿತರಾಗಿದ್ದರು. ಆದರೆ ಕೆಲ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ದೂರಾಗಿಬಿಟ್ಟರು. ಉಮಾಪತಿ ಶ್ರೀನಿವಾಸ ಗೌಡ 25 ಕೋಟಿ ರೂ. ಲೋನ್ ವಂಚನೆ ಯತ್ನ ಪ್ರಕರಣ 6 ವರ್ಷಗಳ ಹಿಂದೆ ಭಾರೀ ಸದ್ದು ಮಾಡಿತ್ತು. ಅದೇ ಕಾರಣಕ್ಕೆ ಇಬ್ಬರ ಸ್ನೇಹದಲ್ಲಿ ಬಿರುಕು ಮೂಡಿತ್ತು. ಸಂದರ್ಶನವೊಂದರಲ್ಲಿ ದರ್ಶನ್ ಜೊತೆಗಿನ ಭಿನ್ನಾಭಿಪ್ರಾಯದ ಬಗ್ಗೆ ಉಮಾಪತಿ ಗೌಡ ಪರೋಕ್ಷವಾಗಿ ಮಾತನಾಡಿದ್ದಾರೆ.

ಮೂರನೇ ವ್ಯಕ್ತಿಯಿಂದ ಇದೆಲ್ಲಾ ಆಯ್ತು ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಹೇಳಿದ್ದಾರೆ. ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಈ ಸಂದರ್ಶನದಲ್ಲಿ ಉಮಾಪತಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಡುವೆ ದರ್ಶನ್ ಜೊತೆಗಿನ ಸ್ನೇಹ, ಭಿನ್ನಾಭಿಪ್ರಾಯದ ಬಗ್ಗೆಯೂ ಅವರು ಪ್ರತಿಕ್ರಿಯಿಸಿದ್ದಾರೆ. ಆ ವೀಡಿಯೋ ಸಖತ್ ವೈರಲ್ ಆಗ್ತಿದೆ.

"ಅವ್ರ ಮನೆಯಲ್ಲಿ ನಾನು ಅನ್ನ ತಿಂದಿದ್ದೆ.. ನನ್ನ ಮನೆಯಲ್ಲಿ ಅವ್ರು ಅನ್ನ ತಿಂದಿದ್ರು.. ಮೂರನೆಯವರನ್ನು ಬಿಟ್ಟು ನಾವು ಹಾಳು ಮಾಡ್ಕೊಂಡುಬಿಟ್ವಿ.. ಇಬ್ಬರೂ ಕೂತು ಮಾತನಾಡಲು ನಾನು ಅವತ್ತು ಸಿದ್ಧ ಇದ್ದೆ. ಆ ಕಡೆಯಿಂದ ಆ ಪ್ರಯತ್ನ ಆಗ್ಲಿಲ್ಲ. ಹಾಗಾಗಿ ನಾನು ಸುಮ್ಮನಾದೆ. ಭಗವಂತ ತೋರಿಸಿದ ದಾರಿಯಲ್ಲಿ ಸಾಗೋಣ ಅಂದುಕೊಂಡೆ.. ಮೂರನೆ ವ್ಯಕ್ತಿಯನ್ನು ನಾವು ಸೇರಿಸಿಕೊಳ್ಳಬಾರದಿತ್ತು. ನಾನು ಸಾಕಷ್ಟು ಬಾರಿ ಅವರಿಗೆ ಸಮಾಧಾನ ಮಾಡಿದ್ದೀನಿ. ನಾನು ದುಡುಕಿನ ನಿರ್ಧಾರ ತಗೊಂಡಾಗ ಅವ್ರು ಸಮಾಧಾನ ಮಾಡಿ ಹೇಳಿದ್ರು. ಸಮಯ, ಸಂದರ್ಭದಿಂದ ಆ ರೀತಿ ಆಯ್ತು.. ಉದಾಹರಣೆಗೆ ಹೆಣ್ಣು ನೋಡು ಅಂತ ಯಾರನ್ನೋ ಕಳ್ಸಿಕೊಡ್ತಾರೆ. ಅವ್ನು ನನಗೆ ಹೆಣ್ಣು ನೋಡೋದು ಬಿಟ್ಟು ಅವ್ನೆ ಕಟ್ಟಿಕೊಂಡ್ರೆ ಹೆಂಗೆ..?" ಎಂದು ಉಮಾಪತಿ ಹೇಳಿರುವುದು ವೈರಲ್ ಆಗ್ತಿದೆ.

'ಹೆಬ್ಬುಲಿ' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಉಮಾಪತಿ ಗೌಡ ಬಳಿಕ 'ರಾಬರ್ಟ್', 'ಮದಗಜ', 'ಉಪಾಧ್ಯಕ್ಷ' ಹಾಗೂ 'ಒಂದಲ್ಲ ಎರಡಲ್ಲ' ಸಿನಿಮಾಗಳನ್ನು ನಿರ್ಮಿಸಿದ್ದರು. ದರ್ಶನ್ ಆಪ್ತವಲಯದಲ್ಲಿ ಗುರ್ತಿಸಿಕೊಂಡಿದ್ದರು. ದರ್ಶನ್ ಹೀರೊ ಆಗಿ ಸಿಂಧೂರ ಲಕ್ಷ್ಮಣ ಸಿನಿಮಾ ಮಾಡೋಕು ಪ್ರಯತ್ನ ಮಾಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಇಬ್ಬರ ನಡುವಿನ ವೈಮನಸ್ಸು ದೊಡ್ಡದಾಗಿ ಸದ್ದು ಮಾಡಿತ್ತು.