ಸಿನಿಮಾ ತಾರೆಯರಿಗೆ ಚಿತ್ರವಿಚಿತ್ರ ಅಭಿಮಾನಿಗಳಿರುತ್ತಾರೆ. ಕೆಲವರು ದೂರದಿಂದಲೇ ನೆಚ್ಚಿನ ನಟ-ನಟಿಯರನ್ನು ನೋಡಿ ಖುಷಿಪಡುತ್ತಾರೆ. ಅಭಿಮಾನ ತೋರಿಸುತ್ತಾರೆ. ಈಗ ಸೋಶಿಯಲ್ ಮೀಡಿಯಾ ಜಮಾನ. ತಮ್ಮ ಅಭಿಮಾನವನ್ನು ತೋರಿಸಲು ಒಳ್ಳೆ ಅವಕಾಶ ಸಿಕ್ಕಿದೆ. 15 ವರ್ಷಗಳ ಹಿಂದೆ ತಾರೆಯರಿಗೆ ಅಭಿಮಾನಿಗಳು ಪತ್ರ ಬರೆಯುತ್ತಿದ್ದರು. ಇದೇ ರೀತಿ ಅಭಿಮಾನಿಯೊಬ್ಬ ಬರೆಯುತ್ತಿದ್ದ ಪತ್ರಗಳನ್ನು ನೋಡಿ ತೆಲುಗು ನಟಿ ಉದಯಭಾನು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ನಿರೂಪಕಯಾಗಿ ನಟಿಯಾಗಿ ಉದಯಭಾನು ತೆಲುಗು ಬಣ್ಣದ ಲೋಕದಲ್ಲಿ ಗುರ್ತಿಸಿಕೊಂಡವರು. ಮದುವೆ ಬಳಿಕ ವಿಶ್ರಾಂತಿ ಪಡೆದಿದ್ದಾರೆ. ಒಂದ್ಕಾಲದಲ್ಲಿ ದೊಡ್ಡ ಅಭಿಮಾನಿ ಬಳಗ ಅವರಿಗಿತ್ತು. ಆದರೆ ನೆಲ್ಲೂರು ಮೂಲದ ಅಭಿಮಾನಿಯೊಬ್ಬ ತಾಳಿಬೊಟ್ಟು ಪಾರ್ಸೆಲ್ ಕಳುಹಿಸಿದ್ದ. ಅಷ್ಟೇ ಅಲ್ಲ ಪ್ರತಿದಿನ 'ನನ್ನ ಶ್ರೀಮತಿ ಉದಯಭಾನು' ಎಂದು ಪತ್ರ ಬರೆಯುತ್ತಿದ್ದ. ಈ ವಿಚಾರವನ್ನು NTV ನ್ಯೂಸ್ ಪಾಡ್‌ಕಾಸ್ಟ್‌ನಲ್ಲಿ ಆಕೆ ನೆನಪಿಸಿಕೊಂಡಿದ್ದಾರೆ.
ಆಗ ಅಭಿಮಾನಿಗಳು ಬರೆಯುತ್ತಿದ್ದ ಪತ್ರಗಳು ಸೊಗಸಾಗಿ ಇರ್ತಿತ್ತು. ಅದಕ್ಕಂತೆ ಸಮಯ ವ್ಯಯಿಸಿ ಎಲ್ಲವನ್ನು ಓದುತ್ತಿದ್ದೆ. ಆದರೆ ಆತ ನಿಜವಾದ ಚಿನ್ನದ ತಾಳಿಬೊಟ್ಟು ಕಳುಹಿಸಿದ್ದು ನೋಡಿ ಭಯವಾಗಿತ್ತು. ನನ್ನ ಶ್ರೀಮತಿ ಎಂದು ಪತ್ರ ಬರೆಯುತ್ತಿದ್ದದ್ದು ಮಾನಸಿಕ ಕಿರುಕುಳ ಕೊಡುತ್ತಿತ್ತು. ಅಯ್ಯೋ ಏನಾಗ್ತಿದೆ. ಆತ ಯಾಕೆ ಹೀಗೆ ಮಾಡ್ತಿದ್ದಾನೆ. ನನಗೆ ಏನಾದರೂ ಮಾಡಿಬಿಟ್ರೆ ಎಂದು ಮನೆಯಿಂದ ಹೊರ ಬರಲು ಹೆದರುತ್ತಿದ್ದೆ. ಆ ಟಾರ್ಚರ್ ಸಹಿಸೋಕೆ ಆಗದೇ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದೆ ಎಂದು ನಟಿ ಉದಯಭಾನು ತಿಳಿಸಿದ್ದಾರೆ.
ಹಲವು ತೆಲುಗು ಕಿರುತೆರೆ ಕಾರ್ಯಕ್ರಮ ಹಾಗೂ ವೇದಿಕೆ ಕಾರ್ಯಕ್ರಮಗಳನ್ನು ಉದಯಭಾನು ನಿರೂಪಣೆ ಮಾಡಿದ್ದರು. ಕೆಲ ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದರು. 'ಅಳಿಯ ಅಲ್ಲ ಮಗಳ ಗಂಡ' ಚಿತ್ರದಲ್ಲಿ ಜಗ್ಗೇಶ್ ಜೋಡಿಯಾಗಿ ಆಕೆ ನಟಿಸಿದ್ದರು. ಮದುವೆಯಾಗಿ ಫ್ಯಾಮಿಲಿ, ಮಕ್ಕಳು ಎಂದು ಕೆಲ ವರ್ಷ ಬ್ರೇಕ್ ಪಡೆದಿದ್ದ ಉದಯಭಾನು ಮತ್ತೆ ಬಣ್ಣ ಹಚ್ಚಲು ಆರಂಭಿಸಿದ್ದಾರೆ.