ಸ್ಟಾರ್ ನಟರು ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಆಗ್ರಹ ಕೇಳಿ ಬರುತ್ತಲೇ ಇದೆ. ಈ ವಿಚಾರದಲ್ಲಿ ಶಿವರಾಜ್‌ಕುಮಾರ್ ಎಲ್ಲರಿಗಿಂತ ಮುಂದೆ ನಿಲ್ತಾರೆ. ಸದಾ ಅವರ ಕೈಯಲ್ಲಿ ನಾಲ್ಕೈದು ಸಿನಿಮಾ ಇರುತ್ತೆ. ವಯಸ್ಸು 60 ದಾಟಿದ್ರು 20ರ ಯುವಕರನ್ನು ನಾಚಿಸುವ ಎನರ್ಜಿ ಅವರದ್ದು. ಇದೇ ಅಕ್ಟೋಬರ್ ತಿಂಗಳಲ್ಲಿ ಅವರು ನಟಿಸಿರುವ 3 ಸಿನಿಮಾಗಳು ತೆರೆಗೆ ಬರ್ತಿದೆ.
ಹೌದು.. ಒಂದೇ ತಿಂಗಳಲ್ಲಿ ಸೆಂಚುರಿ ಸ್ಟಾರ್ ಪದೇ ಪದೆ ಪ್ರೇಕ್ಷಕರಿಗೆ ದರ್ಶನ ಕೊಡಲಿದ್ದಾರೆ. ಪವನ್ ಒಡೆಯರ್ ನಿರ್ದೇಶನದ 'ಬೇಲ್' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಇನ್ನು ತಮಿಳಿನ 'ಜೈಲರ್- 2' ಚಿತ್ರದಲ್ಲಿ ಮತ್ತೊಮ್ಮೆ ನರಸಿಂಹ ಆಗಿ ಅಬ್ಬರಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಕನ್ನಡಕ್ಕೂ ಡಬ್ ಆಗಿ ತೆರೆಗೆ ಬರಲಿದೆ. ಶಿವಣ್ಣನಿಗಾಗಿ ಸಾಕಷ್ಟು ಜನ ಈ ಚಿತ್ರಕ್ಕಾಗಿ ಕಾಯ್ತಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ 'ಬೇಲ್' ಸಿನಿಮಾ ಅಕ್ಟೋಬರ್ ಮೊದಲ ವಾರ ಬಿಡುಗಡೆ ಆಗ್ತಿದೆ. 15ರಂದು ರಜನಿಕಾಂತ್ ನಟನೆಯ 'ಜೈಲರ್-2' ತೆರೆಗೆ ಬರುತ್ತಿದ್ದು ಕುತೂಹಲ ಮೂಡಿಸಿದೆ. ಮೊದಲ ಭಾಗಕ್ಕಿಂತ ಸೀಕ್ವೆಲ್‌ನಲ್ಲಿ ನರಸಿಂಹ ಪಾತ್ರಕ್ಕೆ ಹೆಚ್ಚು ಅವಕಾಶ ಸಿಕ್ಕಿದೆ. ಹಾಗಾಗಿ ಸಹಜವಾಗಿಯೇ ಕುತೂಹಲ ಮೂಡಿದೆ.
ಶ್ರೀನಿ ನಿರ್ದೇಶನದ 'ಬೀರ್‌ಬಲ್-2' ಸಿನಿಮಾ ಅಕ್ಟೋಬರ್ 23ರಂದು ಪ್ರೇಕ್ಷಕರ ಮುಂದೆ ಬರಲಿದೆ. ಹೀಗೆ ಒಂದೇ ತಿಂಗಳಲ್ಲಿ ಶಿವಣ್ಣನ 3 ಚಿತ್ರಗಳಿಗೆ ಬಿಡುಗಡೆ ಭಾಗ್ಯ ಸಿಗಲಿದೆ. ಶ್ರೀನಿ ಸಿನಿಮ್ಯಾಟಿಕ್ ಯೂನಿವರ್ಸ್ ಭಾಗ 'ಬೀರ್‌ಬಲ್ ಟ್ರೈಲಜಿ ಕೇಸ್ -2' ಆಗಿದೆ. ಈ ಶ್ರೀನಿ ನಿರ್ದೇಶನದ 'ಘೋಸ್ಟ್' ಚಿತ್ರದಲ್ಲಿ ಸೆಂಚುರಿ ಸ್ಟಾರ್ ಅಬ್ಬರಿಸಿದ್ದರು. ಆ ಕಥೆಯನ್ನು ಇದಕ್ಕೆ ಲಿಂಕ್ ಮಾಡಿದ್ದಾರೆ. ಹಾಗಾಗಿ ಬೀರ್‌ಬಲ್ ಜೊತೆ ಬಿಗ್ ಡ್ಯಾಡಿಯ ದರ್ಶನವೂ ಆಗಲಿದೆ. ಬೇಲ್ ಹಾಗೂ 'ಬೀರ್‌ಬಲ್-2' ಎರಡೂ ಚಿತ್ರಗಳನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಿಸಿರುವುದು ವಿಶೇಷ.
ಮೊದಲಿನಿಂದಲೂ ಶಿವಣ್ಣ ಬಹುಬೇಡಿಕೆಯ ನಟ. ಕೆಲ ದಿನಗಳ ಹಿಂದೆ ಕ್ಯಾನ್ಸರ್ ಚಿಕಿತ್ಸೆಗಾಗಿ ನಾಲ್ಕೈದು ತಿಂಗಳು ಬಿಡುವು ಮಾಡಿಕೊಂಡಿದ್ದರು. ಚೇತರಿಸಿಕೊಳ್ಳುತ್ತಿದ್ದಂತೆ ಮತ್ತೆ ಬ್ಯುಸಿ ಬಿಟ್ಟರು. ಈಗ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಆರ್. ಚಂದ್ರು ನಿರ್ದೇಶನದ 'ಓರಿಜಿನಲ್ ಮಾನ್‌ಸ್ಟರ್' ಸಿನಿಮಾ ಮೂಲಕ ಬಾಲಿವುಡ್ ಅಂಗಳಕ್ಕೂ ಜಿಗಿಯುತ್ತಿದ್ದಾರೆ.
ಕೊನೆಯದಾಗಿ 'ಪೆದ್ದಿ' ಚಿತ್ರದ ಗೌರ್ನಾಯ್ಡು ಆಗಿ ಶಿವಣ್ಣ ಪ್ರೇಕ್ಷಕರ ಮುಂದೆ ಬಂದಿದ್ದರು. ತೆಲುಗಿನಲ್ಲಿ ಗುಮ್ಮಡಿ ನರಸಯ್ಯ ಬಯೋಪಿಕ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ತೆಲುಗಿನ 'ಕೂರ್ಮಾವತಾರ', ತಮಿಳಿನ 'ಪಿಕಾಸೋ', ಕನ್ನಡದಲ್ಲಿ '666 ಆಪರೇಷನ್ ಡ್ರೀಮ್ ಥಿಯೇಟರ್', 'ಡ್ಯಾಡ್', 'ಎ ಫಾರ್ ಆನಂದ್' ಹೀಗೆ ಹಲವು ಸಿನಿಮಾಗಳು ಅವರ ಕೈಯಲ್ಲಿವೆ.