ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಓಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಈ ವೀಕೆಂಡ್ ಸಿನಿಮಾ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಆಗಬಹುದು ಎನ್ನುವ ನಿರೀಕ್ಷೆಯಿದೆ. ಇದೆಲ್ಲದರ ನಡುವೆ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಮುಕ್ತಾಯವಾಗಿದೆ. ಆಗಸ್ಟ್ 26ರಂದು ತೆರೆಗೆ ಬಂದಿದ್ದ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಬಳಿಕ ಬಾಕ್ಸಾಫೀಸ್‌ನಲ್ಲಿ ಕುಂಟುಂತ್ತಾ ಸಾಗಿತ್ತು.
ಗೀತು ಮೋಹನ್ ದಾಸ್ ನಿರ್ದೇಶನದ ಗ್ಯಾಂಗ್‌ಸ್ಟರ್ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದರು. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿತ್ತು. ಕೆವಿಎನ್ ಪ್ರೊಡಕ್ಷನ್ ಜೊತೆ ಸೇರಿ ಯಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ನಯನತಾರಾ, ಹುಮಾ ಖುರೇಷಿ, ಕಿಯಾರಾ ಅಡ್ವಾನಿ 'ಟಾಕ್ಸಿಕ್' ಚಿತ್ರದ ತಾರಾಗಣದಲ್ಲಿದ್ದರು. ಬಹಳ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ.
ಭಾರೀ ಅಡ್ವಾನ್ಸ್ ಬುಕ್ಕಿಂಗ್ ಜೊತೆ ಭರ್ಜರಿ ಓಪನಿಂಗ್ ಪಡೆದಿದ್ದ 'ಟಾಕ್ಸಿಕ್' ಸಿನಿಮಾ ಎರಡನೇ ದಿನದಿಂದಲೇ ನಿಧಾನವಾಗಿ ಕುಸಿಯಲು ಆರಂಭಿಸಿತ್ತು. ನೆಗೆಟಿವ್ ರಿವ್ಯೂಸ್, ಪೈರಸಿ ಹೊಡೆತಕ್ಕೆ ಚಿತ್ರ ನಲುಗಿ ಹೋಗಿತ್ತು. ಕೆಲವರು ಸಿನಿಮಾ ಅದ್ಭುತ ಎಂದು ಪದೇ ಪದೆ ನೋಡಿದ್ರೆ, ಬಹುತೇಕರು ಸಿನಿಮಾ ಚೆನ್ನಾಗಿಲ್ಲ ಎಂದು ವಾದಿಸಿದರು. ಹಾಗಾಗಿ ಸಹಜವಾಗಿಯೇ ದೊಡ್ಡಮಟ್ಟದಲ್ಲಿ ಚಿತ್ರಕ್ಕೆ ಹಿನ್ನಡೆ ಆಗಿತ್ತು. ಆದರೂ 300 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಸಿನಿಮಾ ಸದ್ದು ಮಾಡಿದೆ. ಉತ್ತರ ಭಾರತ ಹಾಗೂ ಕರ್ನಾಟಕದಲ್ಲಿ ಚಿತ್ರ ಒಳ್ಳೆ ಕಲೆಕ್ಷನ್ ಮಾಡಿದೆ.
'ಟಾಕ್ಸಿಕ್' ಕಲೆಕ್ಷನ್
ನಾಲ್ಕನೇ ಶನಿವಾರ ಒಟ್ಟಾರೆ 13 ಲಕ್ಷ ರೂ. ಕಲೆಕ್ಷನ್ ಮಾಡಿದ್ದ 'ಟಾಕ್ಸಿಕ್' ಭಾನುವಾರ ಕೂಡ 10 ಲಕ್ಷ ರೂ.ವರೆಗೆ ಗಳಿಕೆ ಕಂಡಿದೆ. ಬುಕ್‌ಮೈ ಶೋನಲ್ಲಿ ಟಿಕೆಟ್ ಬುಕ್ಕಿಂಗ್ ನಿಂತಿದೆ. ಬಹುತೇಕ ಎಲ್ಲಾ ಕಡೆಗಳಲ್ಲಿ ಸಿನಿಮಾ ಪ್ರದರ್ಶನ ನಿಲ್ಲಿಸಲಾಗಿದೆ. ಒಟ್ಟಾರೆ ಭಾರತದಲ್ಲಿ 289.81 ಕೋಟಿ ರೂ. ಗ್ರಾಸ್ ಕಲೆಕ್ಷನ್ ಜೊತೆಗೆ ಓವರ್‌ಸೀಸ್‌ನಲ್ಲಿ 43.3 ಕೋಟಿ ರೂ. ಸೇರಿ 333.11 ಕೋಟಿ ರೂ. ಗಳಿಕೆ ಕಂಡಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ.
ಜೀ-5ನಲ್ಲಿ ಸಿನಿಮಾ
'ಟಾಕ್ಸಿಕ್' ಸಿನಿಮಾ ಓಟಿಟಿ ರೈಟ್ಸ್ ಬಗ್ಗೆ ಭಾರೀ ಗೊಂದಲ ಇತ್ತು. ಆರಂಭದಲ್ಲಿ ರೈಟ್ಸ್ ಕೊಂಡುಕೊಂಡಲು ದೊಡ್ಡ ಓಟಿಟಿ ಸಂಸ್ಥೆಗಳು ಭಾರೀ ಆಫರ್ ಇಟ್ಟಿದ್ದವು. ಆದರೆ ಆಗ ಚಿತ್ರತಂಡ ಒಪ್ಪಿರಲಿಲ್ಲ. ಸಿನಿಮಾ ಫಲಿತಾಂಶ ನೋಡಿದ ಮೇಲೆ ಓಟಿಟಿ ರೈಟ್ಸ್ ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಬಹಳ ಕಮ್ಮಿ ಮೊತ್ತಕ್ಕೆ ಕೇಳ್ತಿದ್ದಾರೆ ಎನ್ನಲಾಗಿತ್ತು. ಅಂತಿಮವಾಗಿ ಜೀ5 ಸಂಸ್ಥೆ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಸ್ವಂತ ಮಾಡಿಕೊಂಡಿರುವುದಾಗಿ ಹೇಳಲಾಗ್ತಿದೆ. ಸೆಪ್ಟೆಂಬರ್ 25ಕ್ಕೆ ಸಿನಿಮಾ ಸ್ಟ್ರೀಮಿಂಗ್ ಆಗುತ್ತದೆ ಎಂದು ನಿರೀಕ್ಷಿಸಲಾಗ್ತಿದೆ.