ಬಜೆಟ್ ಮುಖ್ಯ ಅಲ್ಲ, ಕಂಟೆಂಟ್ ಮುಖ್ಯ ಎಂದು ನಟ ಶಿವರಾಜ್‌ಕುಮಾರ್ ಹೇಳಿಕೆ ವೈರಲ್ ಆಗ್ತಿದೆ. ಸಣ್ಣ ಬಜೆಟ್ ಸಿನಿಮಾಗಳೇ ಈಗ ದೊಡ್ಡದಾಗಿ ಸದ್ದು ಮಾಡ್ತಿವೆ. ಒಳ್ಳೆ ಸಿನಿಮಾ ಮಾಡಬೇಕು, ಬಜೆಟ್ ಮುಖ್ಯ ಅಲ್ಲ. ಜನರಿಗೆ ಕಥೆ ಅರ್ಥ ಆಗಬೇಕು, ಏನೋ ಮಾಡಿ ಅದು ಹಾಗೆ ಇದು ಹೀಗೆ ಎನ್ನಬಾರದು ಎಂದಿದ್ದರು. ಯಶ್ ನಟನೆಯ 'ಟಾಕ್ಸಿಕ್' ಬಗ್ಗೆ ಶಿವಣ್ಣ ಪರೋಕ್ಷವಾಗಿ ಮಾತನಾಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದರು.

ಶಿವಣ್ಣ ಯಾರನ್ನು ಟಾರ್ಗೆಟ್ ಮಾಡುವವರು ಅಲ್ಲ. ಯಶ್ ಕೂಡ ನನ್ನ ತಮ್ಮ ಇದ್ದಂತೆ ಎಂದು ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಹಾಗಾಗಿ ಅವರ ಹೇಳಿಕೆಯನ್ನು 'ಟಾಕ್ಸಿಕ್' ಚಿತ್ರದ ಜೊತೆ ತಾಳೆ ಹಾಕಿ ನೋಡುವುದು ಸರಿಯಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಇದೀಗ 'A ಫಾರ್ ಆನಂದ್' ಸಿನಿಮಾ ಸೆಟ್‌ನಿಂದ ಯಶ್‌ ಜೊತೆ ವೀಡಿಯೋ ಕಾಲ್‌ನಲ್ಲಿ ಶಿವಣ್ಣ ಮಾತನಾಡಿದ್ದಾರೆ.

ಶ್ರೀನಿ ನಿರ್ದೇಶನದ 'A ಫಾರ್ ಆನಂದ್' ಸಿನಿಮಾ ಚಿತ್ರೀಕರಣ ಬೆಂಗಳೂರಿನಲ್ಲಿ ನಡೀತಿದೆ. ಬಾಲಿವುಡ್ ನಟಿ ರವೀನಾ ಟಂಡನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಆಕೆ ಸೆಟ್‌ಗೆ ಬಂದಿದ್ದಾರೆ. ರವೀನಾ ಪತಿ ಅನಿನ್ ಥಡಾನಿ ವಿತರಕರಾಗಿ ಗುರ್ತಿಸಿಕೊಂಡಿದ್ದಾರೆ. ಕೆಜಿಎಫ್ ಹಾಗೂ ಕಾಂತಾರ ಸರಣಿ ಸಿನಿಮಾಗಳನ್ನು ಉತ್ತರ ಭಾರತದಲ್ಲಿ ಬಿಡುಗಡೆ ಮಾಡಿದ್ದರು. 'ಟಾಕ್ಸಿಕ್' ಚಿತ್ರದ ಜವಾಬ್ದಾರಿ ಸಹ ವಹಿಸಿಕೊಂಡಿದ್ದರು. ಯಶ್ ಹಾಗೂ ಅನಿಲ್ ಥಡಾನಿ ನಡುವೆ ಆತ್ಮೀಯ ಒಡನಾಟವಿದೆ.

'A ಫಾರ್ ಆನಂದ್' ಸೆಟ್‌ಗೆ ಪತ್ನಿ ರವೀನಾ ಜೊತೆ ಅನಿತ್ ಥಡಾನಿ ಕೂಡ ಬಂದಿದ್ದಾರೆ. ಈ ವೇಳೆ ಯಶ್ ಜೊತೆ ವೀಡಿಯೋ ಕಾಲ್ ಮಾಡಿದ್ದು ಶಿವಣ್ಣ ಕೂಡ ಮಾತನಾಡಿರುವುದನ್ನು ನೋಡಬಹುದು. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗ್ತಿದೆ. ಯಲಹಂಕದ ಪ್ರೆಸಿಡೆನ್ಸಿ ಯೂನಿವರ್ಸಿಟಿಯಲ್ಲಿ ಸದ್ಯ ಚಿತ್ರೀಕರಣ ನಡೀತಿದೆ. ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಶಾಲಾ ಶಿಕ್ಷಕನ ಪಾತ್ರದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ.