ಸೋಷಿಯಲ್ ಮೀಡಿಯಾದಲ್ಲಿ ದಿಢೀರನೆ ಟಾಲಿವುಡ್ vs ಸ್ಯಾಂಡಲ್‌ವುಡ್ ಎನ್ನುವ ವಿವಾದ ಶುರುವಾಗಿದೆ. ಅದಕ್ಕೆ ಕಾರಣವಾಗಿದ್ದು ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಬಿಡುಗಡೆಯಾದ ದಿನ ನಡೆದ ವಿದ್ಯಮಾನ. ಗೀತು ಮೋಹನ್ ದಾಸ್ ನಿರ್ದೇಶನದ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿತ್ತು. ಆದರೆ ಕೆಲವರು ಬೇಕೆಂದೇ ಟಾರ್ಗೆಟ್ ಮಾಡಿ ಸಿನಿಮಾ ಸೋಲಿಸುವ ಪ್ರಯತ್ನ ಮಾಡಿದ್ದು ಸುಳ್ಳಲ್ಲ.

ತೆಲುಗಿನಲ್ಲಿ ರವಿತೇಜಾ ನಟನೆಯ 'ಇರುಮುಡಿ' ಸಿನಿಮಾ ತೆರೆಕಂಡ 5 ದಿನಕ್ಕೆ 'ಟಾಕ್ಸಿಕ್' ಸಿನಿಮಾ ತೆರೆಗಪ್ಪಳಿಸಿತ್ತು. ಆಂಧ್ರ, ತೆಲಂಗಾಣದಲ್ಲಿ ಕೂಡ ಕೂಡ ಯಶ್ ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇತ್ತು. ಹಾಗಾಗಿ ದೊಡ್ಡಮಟ್ಟದಲ್ಲಿ ಸಿನಿಮಾ ಅಲ್ಲಿ ತೆರೆಗಪ್ಪಳಿಸಿತ್ತು. 'ಇರುಮುಡಿ' ಸಿನಿಮಾ ಸ್ಕ್ರೀನ್‌ಗಳನ್ನು ಕಬಳಿಸಿತ್ತು. ಇದೇ ಸಮಯದಲ್ಲಿ ಟಾಲಿವುಡ್‌ನಲ್ಲಿ ಕೆಲವರು ಯಶ್ ಸಿನಿಮಾ ತುಳಿಯುವ ಪ್ರಯತ್ನ ಮಾಡಿದ್ರು ಎನ್ನುವ ಆರೋಪ ಕೇಳಿ ಬಂದಿತ್ತು. ಬೆಳಗ್ಗೆ ಮೊದಲ ಪ್ರದರ್ಶನ ಮುಗಿಯುವ ಮುನ್ನ ಸಿನಿಮಾ ಚೆನ್ನಾಗಿಲ್ಲ, ಸುಮ್ನೆ ಹಣ ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಕೆಲ ಪೇಜ್‌ಗಳಲ್ಲಿ ನೆಗೆಟಿವ್ ರಿವ್ಯೂ ಮಾಡಿದ್ದರು. ಕೇವಲ 1.5 ರೇಟಿಂಗ್ ಕೊಟ್ಟು ಕೆಲ ಪೇಜ್‌ಗಳಲ್ಲಿ ಕಾಮೆಂಟ್ ಮಾಡಿದ್ದರು.

ಇಂತಹ ಕೆಲ ರಿವ್ಯೂಗಳು ಆಂಧ್ರ, ತೆಲಂಗಾಣದಲ್ಲಿ 'ಟಾಕ್ಸಿಕ್' ಚಿತ್ರಕ್ಕೆ ಹಿನ್ನಡೆ ಆಗುವಂತೆ ಮಾಡಿದ್ದು ಸುಳ್ಳಲ್ಲ. ಬರೀ ರಿವ್ಯೂ ಮಾತ್ರವಲ್ಲ, ಯಾವುದೋ ಸಿನಿಮಾ ಥಿಯೇಟರ್ ರೆಸ್ಪಾನ್ಸ್ ಎಡಿಟ್ ಮಾಡಿ 'ಟಾಕ್ಸಿಕ್' ಸಿನಿಮಾ ಚೆನ್ನಾಗಿಲ್ಲ ಎಂದು ಪ್ರೇಕ್ಷಕರು ಹೇಳಿರುವಂತೆ ಯೂಟ್ಯೂಬ್‌ನಲ್ಲಿ ಕೆಲ ವೀಡಿಯೋಗಳು ವೈರಲ್ ಮಾಡಿದ್ದರು. ಇದೆಲ್ಲವೂ ಚಿತ್ರಕ್ಕೆ ಹಿನ್ನಡೆ ಉಂಟು ಮಾಡಿತ್ತು. ಇದು ಸಹಜವಾಗಿಯೇ ಯಶ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಾ ಬರ್ತಿದ್ದಾರೆ. ತೆಲುಗು ಸಿನಿಮಾಗಳು ಕರ್ನಾಟಕದಲ್ಲಿ ದೊಡ್ಡದಾಗಿ ಬಿಡುಗಡೆ ಆಗುತ್ತವೆ. ಒಳ್ಳೆ ಬ್ಯುಸಿನೆಸ್ ಮಾಡುತ್ತವೆ. ಮುಂದಿನ ದಿನಗಳಲ್ಲಿ ಅವರ ಸಿನಿಮಾಗಳಿಗೆ ನಾವು ಹೀಗೆ ಮಾಡ್ತೀವಿ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಸದ್ಯ ಟಾಲಿವುಡ್ vs ಸ್ಯಾಂಡಲ್‌ವುಡ್ ಎನ್ನುವ ಟ್ರೆಂಡ್ ಶುರುವಾಗಿದೆ. ನಮ್ಮ ಚಿತ್ರರಂಗವೇ ಗ್ರೇಟ್, ನಮ್ಮ ಸಿನಿಮಾಗಳು, ನಮ್ಮ ಕಲಾವಿದರ ನಟನೆ ಅದ್ಭುತ ಎಂದು ಪರಸ್ಪರ ಪರ ವಿರೋಧ ಚರ್ಚೆ ತಾರಕಕ್ಕೇರಿಸಿದೆ. ಅಲ್ಲಿನ ಕಲಾವಿದರ ನಟನೆಯನ್ನು ಟ್ರೋಲ್ ಮಾಡಿ ಕನ್ನಡ ನೆಟ್ಟಿಗರು, ಅದೇ ರೀತಿ ನಮ್ಮ ಕಲಾವಿದರ ಬಗ್ಗೆ ಅಲ್ಲಿನವರು ಕಾಮೆಂಟ್ ಮಾಡುತ್ತಿರುವುದು ವೈರಲ್ ಆಗ್ತಿದೆ. ಮುಖ್ಯವಾಗಿ ಕನ್ನಡದಿಂದ ತೆಲುಗಿಗೆ ರೀಮೆಕ್ ಆಗಿರುವ ಸಿನಿಮಾಗಳಲ್ಲಿ ಕಲಾವಿದರ ನಟನೆಯನ್ನು ಹೋಲಿಕೆ ಕಾಮೆಂಟ್ ಮಾಡುತ್ತಿದ್ದಾರೆ.

'ಬಂಗಾರದ ಮನುಷ್ಯ', 'ಜೋಗಿ', 'ಮುಂಗಾರು ಮಳೆ' ಸಿನಿಮಾಗಳು ತೆಲುಗಿಗೆ ರೀಮೆಕ್ ಆಗಿದ್ದವು. ಆದರೆ ಮೂಲ ಸಿನಿಮಾಗಳ ಮ್ಯಾಜಿಕ್ ಅಲ್ಲಿ ಕ್ರಿಯೇಟ್ ಮಾಡಲಿಲ್ಲ. ಇನ್ನು ನಟನೆಯ ವಿಚಾರದಲ್ಲೂ ನಮ್ಮ ಕಲಾವಿದರ ಮುಂದೆ ಅಲ್ಲಿನವರ ನಟನೆ ಏನೇನು ಅಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ.