'ಪ್ರೇಮದ ಊರಲಿ' ಸಿನಿಮಾ ನಟ ಶ್ರೀರಾಮ್ ಹೇಳಿಕೆಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. "ನಾವ್ಯಾರೋ ಬಂದು ಸಿನಿಮಾರಂಗವನ್ನು ಎತ್ತಿ ನಿಲ್ಲಿಸಿದ್ದೀವಿ ಅಥವಾ ಏನೋ ಮಾಡಿದ್ದೀವಿ ಅನ್ನೋದಲ್ಲ. ಅಣ್ಣಾವ್ರ ಕಾಲದಿಂದ ಸಿನಿಮಾರಂಗ ಬಹಳ ಎತ್ತರದಲ್ಲೇ ಇದೆ" ಎಂದಿದ್ದರು. ಈ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸಿದ್ದರು.
ನಟ ಯಶ್ ಕುರಿತು ಶ್ರೀರಾಮ್ ಈ ಹೇಳಿಕೆ ನೀಡಿದ್ದಾರೆ ಎಂದು ಕೆಲವರು ತಪ್ಪಾಗಿ ಭಾವಿಸಿದ್ದಾರೆ. ರಾಕಿಂಗ್ ಸ್ಟಾರ್ ಫ್ಯಾನ್ಸ್ ಕೂಡ ಶ್ರೀರಾಮ್ ಹೇಳಿಕೆಗೆ ಬೇಸರಗೊಂಡು ಟ್ರೋಲ್ ಮಾಡಲು ಆರಂಭಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೀತಿದೆ. ಇದೀಗ ಸ್ವತಃ ಶ್ರೀರಾಮ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಹಾಕಿದ್ದ ವೀಡಿಯೋಗೆ ಕಾಮೆಂಟ್ ಮಾಡಿ "ನಮಸ್ತೆ, ಹಾಕಿರೋ ಹೆಡ್ಲೆನ್ಸ್ ತಪ್ಪಾಗಿ ಬಿಂಬಿಸ್ತಾ ಇದೆ, ಯಾರ್ ಯಾರಿಗೂ ಟಾಂಗ್ ಕೋಟಿಲ್ಲ, ಕೊಡಲುಬಾರ್ದು. ಅದು ಕೇವಲ ನನ್ನ ಬಗ್ಗೆ ಹಾಗೂ ನಮ್ಮ ಚಿತ್ರದ ಬಗ್ಗೆ ಇದ್ದ ವಿಷಯ ಅಷ್ಟೆ. ಇದು ಪೂರ್ತಿ ವಿಡಿಯೋ ಅಲ್ಲ. ಅಣ್ಣಾವರ ಬಗ್ಗೆ ಇರುವ ಒಂದು ಪುಟ್ಟ ಅಭಿಮಾನದ ಮಾತು ಬಿಟ್ಟರೆ ಬೇರೆ ಯಾವ ಅರ್ಥವೂ ಎಲ್ಲ" ಎಂದು ಬರೆದುಕೊಂಡಿದ್ದಾರೆ.
ಒಂದು ವೇಳೆ ವಿಡಿಯೋತುಣುಕು ತಪ್ಪಾಗಿ ಕಂಡಿದ್ದರೆ ಕ್ಷಮೆ ಇರಲಿ,ಪೂರ್ತಿ ವಿಡಿಯೋ ಅಪ್ಲೋಡ್ ಮಾಡುತ್ತೇನೆ ಒಮ್ಮೆ ನೋಡಿ. ಧನ್ಯವಾದ ಎಂದು ಶ್ರೀರಾಮ್ ಕಾಮೆಂಟ್ ಮಾಡಿ ತಿಳಿಸಿದ್ದಾರೆ. ಬಳಿಕ ಬಿಹೆಚ್ಎಲ್ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾವು ಮಾತನಾಡಿರುವ ಸಂಪೂರ್ಣ ವೀಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಶ್ರೀರಾಮ್ ಪೋಸ್ಟ್ಗೆ ಕೂಡ ಕಾಮೆಂಟ್ ಬಾಕ್ಸ್ನಲ್ಲಿ ಯಶ್ ಅಭಿಮಾನಿಗಳೇ ಹೆಚ್ಚು ಕಾಮೆಂಟ್ ಮಾಡಿದ್ದಾರೆ. ಇದೆಲ್ಲಾ ಜಾಸ್ತಿ ಆಯ್ತು. ಆದರೂ ಸ್ವಲ್ಪ ನೋಡಿ ಮಾತನಾಡಿ ಎನ್ನುವಂತೆ ತಿಳಿ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ಶ್ರೀರಾಮ್ ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಸುಖಾಸುಮ್ಮನೆ ಅವರ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಬೇಡಿ ಎಂದು ಕೆಲವರು ಕಾಮೆಂಟ್ ಮಾಡ್ತಿದ್ದಾರೆ.