'ಪ್ರೇಮದ ಊರಲಿ' ಸಿನಿಮಾ 25 ದಿನ ಪೂರೈಸಿ ಮುನ್ನುಗ್ಗುತ್ತಿದೆ. 150 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಚಿತ್ರದಲ್ಲಿ ನಟಿಸಿದ ಪ್ರತಿಯೊಬ್ಬರು ಪ್ರೇಕ್ಷಕರ ಮನ ಗೆದ್ದಿದ್ದಾರೆ. ನಾಯಕನಾಗಿ ಶ್ರೀರಾಮ್ ಕೂಡ ಒಳ್ಳೆ ಅಂಕ ಗಿಟ್ಟಿಸಿಕೊಂಡಿದ್ದಾರೆ. ಹೋದಲ್ಲಿ ಬಂದಲ್ಲಿ ಜನ ಈಗ ಅವರನ್ನು ಗುರ್ತಿಸುತ್ತಿದ್ದಾರೆ.
ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಶ್ರೀರಾಮ್ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಿ ಮಾತನಾಡಿದ್ದಾರೆ. ಆ ವೀಡಿಯೋ ಸಖತ್ ವೈರಲ್ ಆಗ್ತಿದೆ. ಜನರ ಅಭಿಮಾನ ಕಂಡು ಶ್ರೀರಾಮ್ ಸಂತಸಗೊಂಡಿದ್ದಾರೆ. ಆದರೆ ಯಾರು ಮಾಡದೇ ಇರುವುದು ನಾನು ಮಾಡಿಲ್ಲ ಎಂದು ವಿನಮ್ರವಾಗಿ ಹೇಳಿ ಗಮನ ಸೆಳೆದಿದ್ದಾರೆ.
"ನಾವ್ಯಾರೋ ಬಂದು ಸಿನಿಮಾರಂಗವನ್ನು ಎತ್ತಿ ನಿಲ್ಲಿಸಿದ್ದೀವಿ ಅಥವಾ ಏನೋ ಮಾಡಿದ್ದೀವಿ ಅನ್ನೋದಲ್ಲ. ಅಣ್ಣಾವ್ರ ಕಾಲದಿಂದ ಸಿನಿಮಾರಂಗ ಬಹಳ ಎತ್ತರದಲ್ಲೇ ಇದೆ. ಅಣ್ಣಾವ್ರು, ದೊಡ್ಡವ್ರು ಎಲ್ಲಾ ದೊಡ್ಡ ಹೆಸ್ರು ಮಾಡಿ ಹೋಗಿದ್ದಾರೆ. ನಾವು ಚಿಕ್ಕದಾಗಿ ಪುಟ್ಟದಾಗಿ ಒಂದು ಅಳಿಲು ಸೇವೆ ಮಾಡ್ತಿದ್ದೀವಿ ಅಷ್ಟೆ. ಅದಕ್ಕೆ ನಿಮ್ಮ ಬೆಂಬಲ, ಪ್ರೀತಿ ಯಾವಾಗಲೂ ಹೀಗೆ ಇರಲಿ" ಎಂದು ಶ್ರೀರಾಮ್ ಹೇಳಿದ್ದಾರೆ.
ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳಿಂದ ಎಲ್ಲರ ಕನ್ನಡ ಚಿತ್ರರಂಗವನ್ನು ನೋಡ್ತಿದ್ದಾರೆ. ಯಶ್ ಹಾಗೂ ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗವನ್ನು ಎಲ್ಲಿಗೋ ತೆಗೆದುಕೊಂಡು ಹೋಗಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. 'ಟಾಕ್ಸಿಕ್' ಸಿನಿಮಾ ಮೂಲಕ ಕನ್ನಡ ಚಿತ್ರವನ್ನು ಯಶ್ ಗ್ಲೋಬಲ್ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎನ್ನುತ್ತಿದ್ದಾರೆ. ಯಶ್ ಅಭಿಮಾನಿಗಳಂತೂ ಈ ಬಗ್ಗೆ ಬಹಳ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ನಟ ಯಶ್ಗೆ ಪರೋಕ್ಷವಾಗಿ ಶ್ರೀರಾಮ್ ಟಾಂಗ್ ಕೊಟ್ಟಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಶ್ರೀರಾಮ್ ಹೇಳಿಕೆಗೆ ಕೆಲ ಯಶ್ ಅಭಿಮಾನಿಗಳು ಅಸಮಾಧಾನದಿಂದ ಕಾಮೆಂಟ್ ಮಾಡುತ್ತಿದ್ದಾರೆ. "ಒಂದೇ ಒಂದು ಸಿನಿಮಾ ಹಿಟ್ ಆಗಿದ್ದಕ್ಕೆ ಇದೆಲ್ಲಾ ಜಾಸ್ತಿ ಆಯ್ತು, ನಿಮ್ಮ ನೆಕ್ಸ್ಟ್ ಸಿನಿಮಾ ಏನಾಗುತ್ತೋ ನೋಡೋಣ" ಎನ್ನುತ್ತಿದ್ದಾರೆ. ಒಟ್ಟಾರೆ ಸೋಶಿಯಲ್ ಮೀಡಿಯಾದಲ್ಲಿ ಇದು ಚರ್ಚೆಗೆ ಗ್ರಾಸವಾಗಿದೆ. ಶ್ರೀರಾಮ್ ಇರುವ ಸತ್ಯ ಮಾತನಾಡುತ್ತಿದ್ದಾರೆ. ಇದಕ್ಕೆ ಯಶ್ ಫ್ಯಾನ್ಸ್ ಯಾಕೆ ತಲೆ ಕೆಡಿಸಿಕೊಳ್ಳಬೇಕು ಎಂದು ಕೆಲವರು ಹೇಳುತ್ತಿದ್ದಾರೆ.
'ಪ್ರೇಮದ ಊರಲಿ' ಚಿತ್ರದ ಗೆಲುವಿನ ಬಗ್ಗೆ ಯಶ್ ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಚಿತ್ರತಂಡವನ್ನು ಭೇಟಿ ಮಾಡಿ ಅಭಿನಂದನೆ ತಿಳಿಸಿದ್ದರು. ರಾಮಾಯಣ ಚಿತ್ರದ ಕಾರ್ಯಕ್ರಮದಲ್ಲಿ ಯಶ್ ಮಾತನಾಡಿ "ಕನ್ನಡ ಚಿತ್ರರಂಗದಲ್ಲಿ ಇವತ್ತು 'ಪ್ರೇಮದ ಊರಲಿ' ಸಿನ್ಮಾ ಇಷ್ಟು ದೊಡ್ಡದಾಗಿ ಸಕ್ಸಸ್ ಆಗಿದೆ.. ಈಗಷ್ಟೆ ತಂಡವನ್ನು ಭೇಟಿ ಮಾಡ್ದೆ. ಅವ್ರ ಕಣ್ಣುಗಳಲ್ಲಿ ಆ ಖುಷಿ ನೋಡ್ದೆ.. ಒಂದು ಹೊರಗಡೆ ಹೋಗಿ ಎಲ್ಲೆಲ್ಲಿ ಬೇಲಿ, ಗೋಡೆಗಳಿದ್ಯೋ ಅದನ್ನು ಒಡೆಯುವ ಕೆಲಸ ಮಾಡಬೇಕು. ಅದೇ ರೀತಿ ನಮ್ಮ ಅಡಿಪಾಯ ಗಟ್ಟಿಮಾಡಿಕೊಳ್ಳಬೇಕು. ಹೊಸ ಪ್ರತಿಭೆಗಳು ಬರಬೇಕು, ಚಿಕ್ಕ ಬಜೆಟ್ ಸಿನಿಮಾ ಕೂಡ ನಿರ್ಮಾಣವಾಗಬೇಕು" ಎಂದಿದ್ದರು.
'ಪ್ರೇಮದ ಊರಲಿ' ನಟ ಶ್ರೀರಾಮ್ ಹೇಳಿಕೆ ವೈರಲ್#sriram #PremadaOorali pic.twitter.com/da6XP4mX68
— Cinesamachara 🌊 (@cinesamachara26) November 10, 2026