ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರಲ್ಲ ಎನ್ನುವ ಮಾತು ಪದೇ ಪದೆ ಸುಳ್ಳಾಗುತ್ತಿದೆ. ಮತ್ತೆ ಚಿತ್ರಮಂದಿರಗಳು ತುಂಬಿ ತುಳುಕುಕ್ಕಿವೆ. ಕನ್ನಡದಲ್ಲಿ 'ಸಿಟಿಲೈಟ್ಸ್', 'ಪ್ರೇಮದ ಊರಲಿ' ಚಿತ್ರಗಳು ಯಶಸ್ವಿ ಪ್ರದರ್ಶನ ಕಾಣ್ತಿವೆ. ಈ ವಾರ ಮತ್ತಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿದೆ. ಶಿವರಾಜ್‌ಕುಮಾರ್ ನಟನೆಯ 'ಬೇಲ್' ಸಿನಿಮಾ ಕೂಡ ಈ ಲಿಸ್ಟ್‌ನಲ್ಲಿದೆ.
ಇತ್ತೀಚೆಗೆ 'ಟಾಕ್ಸಿಕ್', 'ಇರುಮುಡಿ', 'ಹನುಮಾನ್ ಅಂಶ್', 'ಬೆತ್ಲೆಹೇಮ್ ಕುಡುಂಬ ಯೂನಿಟ್' ರೀತಿಯ ಚಿತ್ರಗಳು ಸಖತ್ ಸದ್ದು ಮಾಡಿದ್ದು ಗೊತ್ತೇಯಿದೆ. ಮಿಶ್ರಪ್ರತಿಕ್ರಿಯೆ ನಡುವೆಯೂ 'ದಿ ಪ್ಯಾರಡೈಸ್' ಸಿನಿಮಾ 100 ಕೋಟಿ ರೂ. ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಮುಂದೆ ಮತ್ತಷ್ಟು ದೊಡ್ಡ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿವೆ. ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಶುಕ್ರವಾರ ರಜೆ ಜೊತೆಗೆ ಈ ವೀಕೆಂಡ್ ಸಿನಿಮಾ ಗಳಿಕೆಗೆ ಒಳ್ಳೆ ಅವಕಾಶ ಸಿಕ್ಕಿದೆ.
ಬೇಲ್
ಪವನ್ ಒಡೆಯರ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಬೇಲ್' ಸಿನಿಮಾ ಈ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ಸಾಯಿಕುಮಾರ್, ಜಯರಾಂ, ಲೂಸ್ ಮಾದ ಯೋಗಿ, ಸಂಜನಾ ಆನಂದ್, ಸಂಗೀತ ಹೀಗೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ನಿವೃತ್ತ ಪೊಲೀಸ್ ಆಫೀಸರ್ ಪಾತ್ರದಲ್ಲಿ ಶಿವಣ್ಣ ಅಬ್ಬರಿಸಿದ್ದಾರೆ. ವಿಲನ್ ಆಗಿ ಯೋಗಿ ಸವಾಲಾಕಿದ್ದಾರೆ. ಈಗಾಗಲೇ ಟ್ರೈಲರ್, ಸಾಂಗ್ಸ್ ಬಂದು ಸದ್ದು ಮಾಡ್ತಿದೆ. ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.
ಸಿಗ್ಮಾ
ತಮಿಳುನಾಡು ಸಿಎಂ ವಿಜಯ್ ಪುತ್ರ ಜೇಸನ್ ಸಂಜಯ್ ನಿರ್ದೇಶನದ 'ಸಿಗ್ಮಾ' ಚಿತ್ರಕ್ಕೂ ಈ ವಾರವೇ ಬಿಡುಗಡೆ ಭಾಗ್ಯ. ಸಂದೀಪ್ ಕಿಶನ್ ಹೀರೊ ಆಗಿ ಚಿತ್ರದಲ್ಲಿ ನಟಿಸಿದ್ದಾರೆ. ಎಸ್. ತಮನ್ ಸಂಗೀತದಲ್ಲಿ ಕಿಚ್ಚ ಸುದೀಪ್ ಮಗಳು ಸಾನ್ವಿ ಒಂದು ಸ್ಪೆಷಲ್ ಸಾಂಗ್ ಸಹ ಹಾಡಿದ್ದಾರೆ. ತೆಲುಗಿನಲ್ಲೂ ದೊಡ್ಡದಾಗಿ ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ. ದರೋಡೆ ಸುತ್ತಾ ಸುತ್ತವ ಆಕ್ಷನ್ ಅಡ್ವೆಂಚರಸ್ ಸಿನಿಮಾ ಇದಾಗಿದೆ.
ಡೋಂಟ್ ಟ್ರಬಲ್ ದಿ ಟ್ರಬಲ್
ಫಹಾದ್ ಫಾಸಿಲ್ ನಟನೆಯ 'ಡೋಂಟ್ ಟ್ರಬಲ್ ದಿ ಟ್ರಬಲ್' ಸಿನಿಮಾ ಕುತೂಹಲ ಮೂಡಿಸಿದೆ. ಮಲಯಾಳಂ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಈ ಫ್ಯಾಂಟಸಿ ಸಿನಿಮಾ ತೆರೆಗೆ ಬರ್ತಿದೆ. ಶಶಾಂಕ್ ಏಲೆಟಿ ಆಕ್ಷನ್ ಕಟ್ ಹೇಳಿದ್ದು ರಾಜಮೌಳಿ ಮಗ ಕಾರ್ತಿಕೇಯ ಬಂಡವಾಳ ಹೂಡಿದ್ದಾರೆ. ತೆಲುಗಿನಲ್ಲೂ ಭರ್ಜರಿ ಪ್ರಚಾರ ಮಾಡಿ ಸಿನಿಮಾ ತೆರೆಗೆ ತರಲಾಗ್ತಿದೆ. ಇತ್ತೀಚೆಗೆ ನಡೆದ ಚಿತ್ರದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಜ್ಯೂ. ಎನ್‌ಟಿಆರ್ ಸಹ ಭಾಗಿ ಆಗಿದ್ದರು.
ದೃಶ್ಯಂ: ದಿ ಕನ್‌ಕ್ಲೂಷನ್
ಸೂಪರ್ ಹಿಟ್ 'ದೃಶ್ಯಂ' ಸರಣಿಯ 3ನೇ ಭಾಗ ಹಿಂದಿಯಲ್ಲಿ ಬಿಡುಗಡೆ ಆಗ್ತಿದೆ. ಅಜಯ್ ದೇವಗನ್, ಶ್ರೇಯಾ, ತಬು ನಟನೆಯ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. 'ದೃಶ್ಯಂ: ದಿ ಕನ್‌ಕ್ಲೂಷನ್' ಹೆಸರಿನಲ್ಲಿ ಮೂರನೇ ಭಾಗ ತೆರೆಗೆ ತರಲಾಗ್ತಿದೆ. 'ದೃಶ್ಯಂ'- 3 ಸಿನಿಮಾ ಮಲಯಾಳಂನಲ್ಲಿ ನಿರಾಸೆ ಮೂಡಿಸಿತ್ತು. ಆದರೆ ಸಾಕಷ್ಟು ಬದಲಾವಣೆ ಮಾಡಿಕೊಂಡು ಹಿಂದಿಯಲ್ಲಿ ಸಿನಿಮಾ ಕಟ್ಟಿಕೊಡಲಾಗಿದೆ. ಅಡ್ವಾನ್ಸ್ ಬುಕ್ಕಿಂಗ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಈಗಾಗಲೇ 10 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಆಗಿದೆ.