ಬಣ್ಣದಲೋಕದಲ್ಲಿ ಸಂಭ್ರಮ ಮಾತ್ರವಲ್ಲ. ಕೆಲ ದುರಂತಗಳು ನಡೆದಿವೆ. ಕೆಲ ಕಲಾವಿದರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ನಿಮಗೆ ಗೊತ್ತಾ ಖ್ಯಾತ ಸಂಗೀತ ನಿರ್ದೇಶಕನ ಮನೆಗೆ ಅನಾಮಧೇಯ ವ್ಯಕ್ತಿಯಿಂದ ದೀಪಾವಳಿ ಉಡುಗೊರೆಯಾಗಿ ಒಂದು ಪಾರ್ಸೆಲ್ ಬಂದಿತ್ತು. ಬಳಿಕ ಅದು ಸ್ಫೋಟಗೊಂಡು ಆ ಸಂಗೀತ ನಿರ್ದೇಶಕ ಗಂಭೀರವಾಗಿ ಗಾಯಗೊಂಡಿದ್ದರು. ಇವತ್ತಿಗೂ ಆ ದುರಂತದ ನೋವಿನಿಂದ ಅವರು ಹೊರ ಬಂದಿಲ್ಲ.

ಶಂಕರ್-ಗಣೇಶ್ ದಕ್ಷಿಣ ಭಾರತ ಚಿತ್ರರಂಗದಲ್ಲಿ ಜನಪ್ರಿಯ ಸಂಗೀತ ನಿರ್ದೇಶಕರಾಗಿ ಗುರ್ತಿಸಿಕೊಂಡ ಜೋಡಿ. ಇವರಿಬ್ಬರು ಒಟ್ಟಾಗಿ ಸಾಕಷ್ಟು ಸೂಪರ್ ಹಿಟ್ ಗೀತೆಗಳನ್ನು ನೀಡಿದ್ದಾರೆ. ತಮಿಳು, ಕನ್ನಡ, ತೆಲುಗು ಸಿನಿಮಾಗಳಿಗೆ ದಶಕಗಳ ಕಾಲ ಮ್ಯೂಸಿಕ್ ಕಂಪೋಸ್ ಮಾಡಿ ಕಮಾಲ್ ಮಾಡಿದ್ದರು. ಶಂಕರ್ ನಿಧನದ ಬಳಿಕ ಗಣೇಶ್ ಮ್ಯೂಸಿಕ್ ಜರ್ನಿ ಮುಂದುವರೆಸಿದರು. ಇದೇ ಗಣೇಶ್ 1986ರಲ್ಲಿ ಬಾಂಬ್ ಬ್ಲಾಸ್ಟ್ ಆಗಿ ಗಾಯಗೊಂಡಿದ್ದರು. ಇವತ್ತಿಗೂ ಆ ಘಟನೆಗೆ ಕಾರಣ ಏನು ಎನ್ನುವುದು ಬಹಿರಂಗವಾಗಿಲ್ಲ. ಗಣೇಶ್ ಕೂಡ ಅದು ತಮ್ಮ ಜೀವನದ ಕಹಿ ಘಟನೆ ಎಂದು ಹೇಳಿ ಸುಮ್ಮನಾಗುತ್ತಾರೆ.

ತಮಿಳುನಾಡು ಮೂಲದ ಶಂಕರ್- ಗಣೇಶ್ ಕನ್ನಡ ಸಿನಿಮಾಗಳಿಗೂ ಸಂಗೀತ ನಿರ್ದೇಶನ ಮಾಡಿದ್ದಾರೆ. 'ಕದೀಮ ಕಳ್ಳರು', 'ಚಕ್ರವ್ಯೂಹ', 'ನಾನು ನನ್ನ ಹೆಂಡ್ತಿ', 'ಆನಂದ್' ಹೀಗೆ ಹಲವು ಸೂಪರ್ ಹಿಟ್ ಕನ್ನಡ ಸಿನಿಮಾಗಳಿಗೆ ಟ್ಯೂನ್ ಹಾಕಿದ್ದರು. ಅಂಬರೀಶ್ ಹಾಗೂ ಅಂಬಿಕಾ ಹೆಜ್ಜೆ ಹಾಕಿದ್ದ ಎವರ್‌ಗ್ರೀನ್ 'ಚಳಿ ಚಳಿ ತಾಳೆನು ಈ ಚಳಿಯ' ಸಾಂಗ್ ಮರೆಯೋಕ್ಕಾಗುತ್ತಾ..? 1994ರ ಬಳಿಕ ಇವರು ಕನ್ನಡ ಸಿನಿಮಾಗಳಿಗೆ ಮ್ಯೂಸಿಕ್ ಮಾಡಲಿಲ್ಲ. ಅದೊಂದು ದೀಪಾವಳಿ ಗಣೇಶ್ ಜೀವನದಲ್ಲಿ ಮರೆಯಲಾಗದ ನೆನಪಾಗಿ ಉಳಿದುಬಿಟ್ಟಿದೆ.

1986ರ ನವೆಂಬರ್ 17ರಂದು ಸಂಗೀತ ನಿರ್ದೇಶಕ ಗಣೇಶ್ ಮನೆಗೆ ಪೋಸ್ಟ್‌ಮ್ಯಾನ್ ಒಂದು ಪಾರ್ಸೆಲ್ ತಂದು ಕೊಟ್ಟಿದ್ದ. ಅದರಲ್ಲಿ ಒಂದು ಟೇಪ್ ರೆಕಾರ್ಡರ್ ಇತ್ತು. ಹೊಸ ಹಾಡು ಇದರಲ್ಲಿದೆ, ಕೇಳಿ ಇಷ್ಟವಾದರೆ ನನಗೆ ಸಿನಿಮಾದಲ್ಲಿ ಅವಕಾಶ ಕೊಡಿ ಎಂದು ಅನಾಮಧೇಯ ವ್ಯಕ್ತಿ ಪತ್ರ ಬರೆದಿದ್ದ. ಗಣೇಶ್ ಅವರು ಟೇಪ್ ರೆಕಾರ್ಡರ್ ಆನ್ ಮಾಡಿ 'ಪ್ಲೇ' (play) ಬಟನ್ ಒತ್ತುತ್ತಿದ್ದಂತೆ ಅದು ಸ್ಫೋಟಗೊಂಡಿತ್ತು. ಮುಖದ ಎದುರೇ ಸ್ಫೋಟ ಸಂಭವಿಸಿದ್ದರಿಂದ ಅವರ ಕೈಗಳು ಮತ್ತು ಕಣ್ಣುಗಳಿಗೆ ಗಂಭೀರವಾಗಿ ಪೆಟ್ಟಾಗಿತ್ತು. ಪ್ಲಾಸ್ಟಿಕ್ ಸರ್ಜರಿ ಮೂಲಕ ಬಳಿಕ ಕೈಗಳಿಗೆ ಚಿಕಿತ್ಸೆ ನೀಡಲಾಗಿತ್ತು. ನಂತರ ಕೈಗಳಿಗೆ ಗ್ಲೌಸ್ ಧರಿಸಿ ಅವರು ಕಾಣಿಸಿಕೊಳ್ಳಲು ಆರಂಭಿಸಿದ್ದರು. ಬಲಗಣ್ಣಿನ ದೃಷ್ಟಿ ಸಂಪೂರ್ಣವಾಗಿ ಹೋಗಿತ್ತು, ಎಡಗಣ್ಣಿಗೂ ಭಾರೀ ಪೆಟ್ಟಾಗಿತ್ತು.

ಕೆಲ ವರ್ಷಗಳ ಹಿಂದೆ ತಮಿಳು ಹಾಸ್ಯನಟ ಮನೋಬಲ ಅವರ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಗಣೇಶ್ ಮಾತನಾಡಿದ್ದರು. ಆಗ ಬಾಂಬ್ ಬ್ಲಾಸ್ಟ್ ಘಟನೆ ಬಗ್ಗೆ ಪ್ರಶ್ನೆ ಎದುರಾಗಿತ್ತು. "ಅದೊಂದು ಕೆಟ್ಟ ಗಳಿಗೆ. ಬ್ಲಾಸ್ಟ್ ಆಯ್ತು ಅಷ್ಟೆ.. ನಮ್ಮ ಮೇಲೆ ಯಾರಿಗೆ ದ್ವೇಷ ಇತ್ತೋ ಗೊತ್ತಿಲ್ಲ.. ಕಾಲವೇ ಎಲ್ಲದ್ದಕ್ಕೂ ಕಾರಣ ಅನ್ನಿಸುತ್ತೆ.. ಯಾರ ಮೇಲೆ ಕೂಡ ನಾನು ಆರೋಪ ಮಾಡಲ್ಲ.. ಎಲ್ಲಾ ನನ್ನ ಕರ್ಮ.. ಎಂಜಿಆರ್ ಅವತ್ತು ನನ್ನ ಬೆಂಬಲಕ್ಕೆ ನಿಂತ್ರು.. ಇವತ್ತು ನಾನು ಹೀಗೆ ನಡೆಯುವುದಕ್ಕೆ ಮಾತನಾಡುವುದಕ್ಕೆ ಮ್ಯೂಸಿಕ್ ಮಾಡುವುದಕ್ಕೂ ಎಂಜಿಆರ್ ಕಾರಣ.. ಆಸ್ಪತ್ರೆಯಲ್ಲಿ ವೈದ್ಯರು ನನ್ನ ಕಾಲುಗಳನ್ನು ತೆಗೆದುಬಿಡಬೇಕು ಅಂದ್ರು.. ಆದ್ರೆ ಎಂಜಿಆರ್ ಒಪ್ಪಲಿಲ್ಲ.. ಬಳಿಕ ವೈದ್ಯರು ಸವಾಲಾಗಿ ಸ್ವೀಕರಿಸಿ ಚಿಕಿತ್ಸೆ ನೀಡಿ ಇವತ್ತು ನಾನು ಹೀಗೆ ಇದ್ದೀನಿ" ಎಂದ ಗಣೇಶ್ ಹೇಳಿದ್ದರು.