ಶ್ರೀಕಾಂತ್ ಒಡೆಲ ನಿರ್ದೇಶನದ 'ದಿ ಪ್ಯಾರಡೈಸ್' ಸಿನಿಮಾ ತೆರೆಗಪ್ಪಳಿಸಿದೆ. ಒಂದು ದಿನ ಮೊದ್ಲೆ ಪ್ರೀಮಿಯರ್‌ ಶೋಗಳಲ್ಲಿ ಸಿನಿಮಾ ಭರ್ಜರಿ ಪ್ರದರ್ಶನ ಕಂಡಿದೆ. ನಾನಿ ಜೊತೆ ಕಯಾದು ಲೋಹರ್ ನಾಯಕಿಯಾಗಿ ನಟಿಸಿದ್ದು ಅನಿರುದ್ದ್ ಸಂಗೀತದಿಂದ ಸಿನಿಮಾ ಸಖತ್ ಸದ್ದು ಮಾಡಿತ್ತು.

ಭಾರೀ ನಿರೀಕ್ಷೆ ಮೂಡಿಸಿದ್ದ 'ದಿ ಪ್ಯಾರಡೈಸ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದೆ. ಬುಧವಾರ ರಾತ್ರಿ ಪ್ರೀಮಿಯರ್‌ ಶೋಗಳು ಮಾತ್ರವಲ್ಲ ಗುರುವಾರ ಬೆಳ್ಳಂಬೆಳಗ್ಗೆ ಸಿನಿಮಾ ಬಿಡುಗಡೆಯಾಗಿ ಸದ್ದು ಮಾಡ್ತಿದೆ. ಟ್ರೈಲರ್ ಇಲ್ಲದೇ ಸಿನಿಮಾ ತೆರೆಗೆ ತಂದಿದೆ ಚಿತ್ರತಂಡ. ಈಗಾಗಲೇ ಸಿನಿಮಾ ನೋಡಿದವರು ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ತಾಳ್ಮೆ ಪರೀಕ್ಷಿಸುವ ಚಿತ್ರ

ಫಸ್ಟ್‌ ಹಾಫ್‌ನಲ್ಲಿ ಆರಂಭ ಚೆನ್ನಾಗಿದೆ. ಬಿಟ್ಟರೆ ಇಂಟರ್‌ವಲ್‌ ಪರವಾಗಿಲ್ಲ. ಸೆಕೆಂಡ್ ಹಾಫ್ ಅರ್ಥಹೀನ ಬರವಣಿಗೆ, ಬೇಸರದ ನಿರೂಪಣೆ ಮತ್ತು ಯಾವುದೇ ಭಾವನಾತ್ಮಕ ಸಂಪರ್ಕವಿಲ್ಲದೆ ಇನ್ನೂ ಕೆಟ್ಟದಾಗಿದೆ. ಆಕ್ಷನ್ ಕೃತಕ ಎನಿಸುತ್ತೆ, ಎಡಿಟಿಂಗ್ ಚೆನ್ನಾಗಿಲ್ಲ, ಹಾಡುಗಳನ್ನು ಹೊರತುಪಡಿಸಿ, ಅನಿರುದ್ಧ್ ಸಂಗೀತ ಬೇಸರ ಮೂಡಿಸುತ್ತದೆ. ನಾನಿ ಪ್ರಯತ್ನ ಚೆನ್ನಾಗಿದೆ. ಆದರೆ ಚಿತ್ರಕ್ಕೆ ಅವ್ರು ಸೂಕ್ತ ಅಲ್ಲ ಅನ್ನಿಸುತ್ತೆ. ನಾನಿ ಕೆಟ್ಟ ಸಿನಿಮಾಗಳಲ್ಲಿ ಒಂದಾಗಿದೆ ಎಂದು ವೆಂಕಿ (ರಿವ್ಯೂಸ್) ಎಂಬುವವರು ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ರೇಟಿಂಗ್ 1.75/5..

ನೋಡದೇ ಇರುವುದು ವಾಸಿ

"ಅನಗತ್ಯ ಹಿಂಸೆ ಮತ್ತು ಕಳಪೆ ಚಿತ್ರಕಥೆಯಿಂದ ಕೂಡಿದ ಕೆಟ್ಟ ಸಿನಿಮಾ. ರಾಜಮೌಳಿ ಮತ್ತು ಪ್ರಶಾಂತ್ ನೀಲ್ ರೀತಿ ಒಡೆಲ ಪ್ರಯತ್ನಿಸಿದರೂ ಅದರಲ್ಲಿ ವಿಫಲರಾಗಿದ್ದಾರೆ. ನಾನಿ ಉತ್ತಮ ಅಭಿನಯ ನೀಡಿದ್ದರೂ, ಉಳಿದ ಕಲಾವಿದರ ನಟನೆ ಕಿರಿಕಿರಿ ಉಂಟುಮಾಡುತ್ತದೆ. 'ಪ್ಯಾರಡೈಸ್' ಚಿತ್ರವನ್ನು ನೋಡಿದ್ದರೂ ಪರವಾಗಿಲ್ಲ. ನಾನಿಗಾಗಿ ಒಮ್ಮೆ ನೋಡಬಹುದು, ಅದು ನಿಮ್ಮ ರಿಸ್ಕ್" ಎಂದು ವಿಕ್ರಮ್ ರೆಡ್ಡಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ಸೆಕೆಂಡ್ ಹಾಫ್ ಕಳಪೆ

"ನಿರಾಶದಾಯಕ ಸಿನಿಮಾ, ಸ್ವತಃ ನಾನಿ ಕೂಡ ಚಿತ್ರವನ್ನು ಉಳಿಸಲು ಸಾಧ್ಯವಾಗಿಲ್ಲ. ದೊಡ್ಡ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ ಎಂದು ನಾನಿ ಹೇಳಿದ್ದರೂ, ಇದು ನಾನಿ ಅವರ ಸಿನಿಮಾ ಆಗಿರುವುದರಿಂದ ಸಹಜವಾಗಿಯೇ ನಿರೀಕ್ಷೆಗಳು ಇರುತ್ತವೆ. ಫಸ್ಟ್ ಹಾಫ್ ಪರವಾಗಿಲ್ಲ ಎನ್ನಬಹುದಾದರೂ, ಸೆಕೆಂಡ್ ಹಾಫ್ ಮಾತ್ರ ಕಳಪೆಯಾಗಿದೆ" ಎನ್ನುವುದು ಮತ್ತೊಬ್ಬರ ರಿವ್ಯೂ.

ಒಟ್ಟಾರೆ ಪರವಾಗಿಲ್ಲ

ಫಸ್ಟ್ ಹಾಫ್‌ನಲ್ಲಿ ಜೈಲ್ ಫೈಟ್, ಆಯಾ ಶೇರ್ ಸಾಂಗ್, ಅನಿರುದ್ದ್ ಬಿಜಿಎಂ, ಇಂಟರ್‌ವಲ್ ಸೀನ್ಸ್ ಚಿಂದಿ.. ಸೆಕೆಂಡ್ ಹಾಫ್‌ನಲ್ಲಿ ಮದರ್ ಸೆಂಟಿಮೆಂಟ್, ನಾನಿ ಆರ್ಭಟ, ಕ್ಲೈಮ್ಯಾಕ್ಸ್ ಫೈಟ್ ಸೂಪರ್. ಆದರೆ ಪ್ರೀ ಕ್ಲೈಮ್ಯಾಕ್ಸ್, ಎಡಿಟಿಂಗ್ ಚೆನ್ನಾಗಿಲ್ಲ. ಒಟ್ಟಾರೆ ಪರವಾಗಿಲ್ಲ ಎನ್ನಬಹುದು ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ಸ್ಲೋ ಪಾಯ್ಸನ್

'ದಿ ಪ್ಯಾರಡೈಸ್' ಸ್ಲೋ ಪಾಯ್ಸನ್.. ಇದು ಮಕ್ಕಳಿಗಾಗಿ ಅಲ್ಲ, ಸರಾಸರಿ ಭಾರತೀಯ ಪ್ರೇಕ್ಷಕರಿಗಂತೂ ಅಲ್ಲವೇ ಅಲ್ಲ. ಜಾಗತಿಕ ಮಟ್ಟದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಇದನ್ನು ಎರಡನೇ ಬಾರಿ ವೀಕ್ಷಿಸಿದಾಗ, ಮೊದಲ ಬಾರಿ ನೋಡಿದಾಗ ನೀವು ಎಷ್ಟೆಲ್ಲಾ ಆಳವಾದ ವಿಷಯಗಳನ್ನು ತಪ್ಪಿಸಿಕೊಂಡಿದ್ದೀರಿ ಎಂಬುದು ನಿಮಗೆ ಅರಿವಾಗುತ್ತದೆ" ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.