ಚಿತ್ರ: ದಿ ಪ್ಯಾರಡೈಸ್

ನಿರ್ದೇಶಕ: ಶ್ರೀಕಾಂತ್ ಒಡೆಲ

ಕಲಾವಿದರು: ನಾನಿ, ಮೋಹನ್ ಬಾಬು, ಕಯಾದು ಮುಂತಾದವರು

ಸಂಗೀತ: ಅನಿರುದ್ದ್ ರವಿಚಂದರ್

ದೊಡ್ಡ ಸಿನಿಮಾಗಳಲ್ಲಿ ದೊಡ್ಡ ಎಮೋಷನಲ್ ಅಂಶ ಕೂಡ ಇರಬೇಕು ಎನ್ನುವ ಮಾತುಗಳು ಪದೇ ಪದೆ ಕೇಳಿಬರುತ್ತದೆ. ಭಾವನಾತ್ಮಕವಾಗಿ ಸಿನಿಮಾ ಕನೆಕ್ಟ್ ಆಗದೇ ಇದ್ದರೆ ಎಷ್ಟೇ ದೊಡ್ಡ ಸಿನಿಮಾ ಆಗಿದ್ರು ಗೆಲ್ಲುವುದು ಕಷ್ಟ. ನಾನಿ ನಟನೆಯ 'ದಿ ಪ್ಯಾರಡೈಸ್' ಸಿನಿಮಾ ಈ ವಾರ ಪ್ರೇಕ್ಷಕರ ಮುಂದೆ ಬಂದಿದೆ.

ಒಂದ್ಕಾಲದಲ್ಲಿ ರೊಮ್ಯಾಂಟಿಕ್ ಹೀರೊ ಆಗಿ ನಟಿಸುತ್ತಿದ್ದ ನಾನಿ ಇತ್ತೀಚೆಗೆ ಮಾಸ್ ಹಾದಿ ಹಿಡಿದಿದ್ದಾರೆ. ಆಕ್ಷನ್, ಆರ್ಭಟ ಅವರ ಸಿನಿಮಾಗಳಲ್ಲಿ ಹೆಚ್ಚಾಗಿದೆ. 'ದಿ ಪ್ಯಾರಡೈಸ್' ಚಿತ್ರದಲ್ಲೂ ಅದೇ ಹೈಲೆಟ್ ಆಗಿದೆ. ಟ್ರೈಲರ್ ಬಿಡದೇ ಇದ್ದರೂ ಎರಡು ಹಾಡುಗಳಿಂದಲೇ ಸಿನಿಮಾ ಸಖತ್ ಹೈಪ್ ಕ್ರಿಯೇಟ್ ಆಗಿತ್ತು. ಸದ್ಯ ಸಿನಿಮಾ ತೆರೆಗೆ ಬಂದಿದೆ. ಅಷ್ಟಕ್ಕೂ ಕಥೆ ಏನು? ಸಿನಿಮಾ ಹೇಗಿದೆ ? ಮುಂದೆ ಓದಿ.

'ದಿ ಪ್ಯಾರಡೈಸ್' ಕಥೆ

ದೇಶಕ್ಕೆ ಸ್ವಾತಂತ್ರ್ಯ ಬಂದ್ರು ಪ್ಯಾರಡೈಸ್ ಪ್ರಾಂತ್ಯದ ಜನರಿಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿರುವುದಿಲ್ಲ. ಅಲ್ಲಿನ ಸವರಿ ಬುಡಕಟ್ಟು ಜನಾಂಗ ತಮ್ಮ ಐಡೆಂಟಿಟಿಗಾಗಿ ಹೋರಾಡುತ್ತಲೇ ಇರುತ್ತದೆ. ಶಿಕಿಂಜ ಮಾಲೀಕ್ (ಮೋಹನ್ ಬಾಬು) ಫ್ಯಾಮಿಲಿ ಸವರಿ ಬುಡಕಟ್ಟು ಜನಾಂಗದವರನ್ನು ಶೋಷಣೆ ಮಾಡುತ್ತಾ ಬರ್ತಿರ್ತಾರೆ. ತಿರುಗಿಬಿದ್ದವರಿಗೆ ಸಾಯುವುದು ಮಾತ್ರ ದಾರಿ ಎನ್ನುವಂತಾಗಿರುತ್ತದೆ. ಅದೇ ಜನಾಂಗದ ಸಮಕ್ಕ(ಸೋನಾಲಿ ಕುಲಕರ್ಣಿ) ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿರುತ್ತಾಳೆ. ಆಕೆಯ ಮಗನೇ ಜಡಲ್(ನಾನಿ). ತಾಯಿ ತನ್ನ ಕನಸನ್ನು ಮಗ ನನಸು ಮಾಡ್ತಾನೆ ಎಂದುಕೊಂಡಿರುತ್ತಾಳೆ. ಆದರೆ ಮಗನಿಗೆ ಅಮ್ಮನ ಮೇಲೆ ದ್ವೇಷ. ಪ್ರಕರಣವೊಂದರಲ್ಲಿ 14 ವರ್ಷ ಜೈಲು ಸೇರುವ ಜಡಲ್ ಮತ್ತೆ ಬಂದು ತನ್ನವರ ಐಡೆಂಟಿಟಿಗೆ ಹೋರಾಡಿ ಗೆಲ್ತಾನಾ ? ಇಲ್ವಾ ? ಎನ್ನುವುದು ಸಿನಿಮಾ ಕಥೆ.

ಸಿನಿಮಾ ಹೇಗಿದೆ ?

ಐಡೆಂಟಿಟಿಗೆ ಹೋರಾಟ ಎನ್ನುವುದು ಸಿದ್ಧಸೂತ್ರದ ಕಥೆ. ಈಗಾಗಲೇ ಇಂತಹ ಸಾಕಷ್ಟು ಸಿನಿಮಾಗಳು ಬಂದಿವೆ. ಇತ್ತೀಚೆಗೆ 'ಕೆಜಿಎಫ್', 'ಪುಷ್ಪ' ಸರಣಿ ಸೇರಿದಂತೆ ಇಂಥದ್ದೇ ಕಥೆ ಆಧರಿಸಿ ಸಿನಿಮಾಗಳು ಬರ್ತಿವೆ. ಒಂದು ಅದ್ಭುತ ಪ್ರಪಂಚವನ್ನು ಸೃಷ್ಟಿಸಿ ಅಲ್ಲಿ ಹೇಳುವ ಪ್ರಯತ್ನ ಮಾಡಲಾಗ್ತಿದೆ. ನರಾಚಿಯಲ್ಲಿ ರಾಕಿ ಯಶೋಗಾಥೆ, ಖಾನ್‌ಸರ್‌ನಲ್ಲಿ ಸಲಾರ್ ಸಾಹಸಗಾಥೆಯನ್ನು ನೋಡಿದ್ದೇವೆ. ಅದೇ ರೀತಿ ಇಲ್ಲಿ ಪ್ಯಾರಡೈಸ್ ಎಂಬ ಪ್ರಪಂಚವಿದೆ. ಅಲ್ಲಿನ ಜನರ ನೋವು ನಲಿವು. ನಾಯಕನ ಹೋರಾಟ, ಆತನ ಭಾವನಾತ್ಮಕ ಸಂಬಂಧಗಳು ಇದೇ ಚಿತ್ರದ ಹೂರಣ.

ಕಥೆ ಹಳೆಯದ್ದೇ ಆದರೂ ಹೊಸ ರೀತಿಯಲ್ಲಿ ಕಟ್ಟಿಕೊಡಲು ನಿರ್ದೇಶಕ ಶ್ರೀಕಾಂತ್ ಒಡೆಲ ಸೋತಿದ್ದಾರೆ. ನಾನಿ ಜೊತೆ ಈ ಹಿಂದೆ 'ದಸರಾ' ರೀತಿಯ ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟವರು ಇಲ್ಲಿ ನಿರಾಸೆ ಮೂಡಿಸಿದ್ದಾರೆ. ಬರೀ ಆಕ್ಷನ್ ಸನ್ನಿವೇಶಗಳಿಂದ ಸಿನಿಮಾ ತುಂಬಿದೆ. ಜಡಲ್ ಜೈಲ್ ಫೈಟ್ ಜೊತೆ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತದೆ. ಬಳಿಕ ನೋಡ್ತಾ ನೋಡ್ತಾ ಹಳಿ ತಪ್ಪುತ್ತದೆ. ಶಿಕಿಂಜ ಮಾಲೀಕ್ ಆಗಿ ಮೋಹನ್ ಬಾಬು ಪಾತ್ರ ಪರಿಚಯದ ಸನ್ನಿವೇಶ ಸಖತ್ತಾಗಿದೆ. ಇನ್ನುಳಿದಂತೆ ಫಸ್ಟ್‌ ಹಾಫ್‌ನಲ್ಲಿ ಆಯಾ ಶೇರ್ ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ಕುಣಿದು ಕುಪ್ಪಳಿಸುವಂತೆ ಮಾಡುತ್ತದೆ.

ಸಣ್ಣ ಸಣ್ಣ ಚಾಪ್ಟರ್‌ಗಳ ರೀತಿ 'ದಿ ಪ್ಯಾರಡೈಸ್' ಕಥೆ ಹೇಳುವ ಪ್ರಯತ್ನ ಮಾಡಿರುವುದು ಗಮನ ಸೆಳೆಯುತ್ತದೆ. ಅತಿಯಾದ ಕ್ರೌರ್ಯ ಕಸಿವಿಸಿ ಉಂಟು ಮಾಡುವಂತಿದೆ. ಅಂತೂ ಇಂತೂ ಇಂಟರ್‌ವಲ್‌ ಒಂದು ಹಂತಕ್ಕೆ ಪ್ರೇಕ್ಷಕರಿಗೆ ಮಜಾ ಕೊಡುತ್ತದೆ. ಆದರೆ ಸೆಕೆಂಡ್ ಹಾಫ್ ಮತ್ತೆ ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡುತ್ತದೆ.

ಕಲಾವಿದರ ನಟನೆ

ಅಭಿನಯದ ವಿಚಾರದಲ್ಲಿ ನಾನಿ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ. ಜಡಲ್ ಪಾತ್ರದಲ್ಲಿ ವಿಭಿನ್ನ ಅವತಾರದಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಆದರೆ ಆಕ್ಷನ್ ಸೀಕ್ವೆನ್ಸ್ ಅತಿಯಾಯ್ತು ಎನಿಸುತ್ತದೆ. ಇಷ್ಟು ಮಾಸ್ ದೃಶ್ಯಗಳು ನಾನಿ ಇಮೇಜ್‌ಗೆ ಕಂಡಿತ ಸೂಟ್ ಆಗುವುದಿಲ್ಲ ಎನಿಸುತ್ತದೆ. ನಾಯಕಿ ಕಯಾದುಗೆ ತೆರೆಮೇಲೆ ಹೆಚ್ಚು ಅವಕಾಶ ಸಿಕ್ಕಿಲ್ಲ. ವಿಲನ್ ಆಗಿ ಮೋಹನ್ ಬಾಬು ಅಬ್ಬರಿಸಿ ಬೊಬ್ಬಿರಿದಿದ್ದಾರೆ. ತಮ್ಮ ಹಳೇ ಖದರ್ ಮತ್ತೆ ತೋರಿಸಿದ್ದಾರೆ. ಶಿಕಂಜಾನ ಮಗ ವಿಕ್ರಮ್ ಮಲಿಕ್ ಪಾತ್ರದಲ್ಲಿ ರಾಘವ್ ಜುಯೆಲ್ ಒಳ್ಳೆ ಅಂಕ ಗಿಟ್ಟಿಸಿದ್ದಾರೆ. ಇನ್ನುಳಿದಂತೆ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಟೆಕ್ನಿಕಲಿ 'ಪ್ಯಾರಡೈಸ್'

ಮೊದಲೇ ಹೇಳಿದಂತೆ 'ಪ್ಯಾರಡೈಸ್' ಲೋಕ ಸೃಷ್ಟಿಸುವಲ್ಲಿ ನಿರ್ದೇಶಕರು ಯಶಸ್ಸು ಕಂಡಿದ್ದಾರೆ. ಆದರೆ ಅದಕ್ಕೆ ತಕ್ಕ ಕಥೆ ಹೇಳುವಲ್ಲಿ ವಿಫಲವಾಗಿದ್ದಾರೆ. ಅವರ ಸ್ಕ್ರೀನ್‌ಪ್ಲೇ ಕೈ ಕೊಟ್ಟಿದೆ. ಅನಿರುದ್ಧ್ ಹಾಡುಗಳು ಮಾತ್ರವಲ್ಲ ಹಿನ್ನೆಲೆ ಸಂಗೀತದ ಮೂಲಕವೂ ಚಿತ್ರಕ್ಕೆ ಬಲ ತುಂಬಿದ್ದಾರೆ. ಎಡಿಟಿಂಗ್ ಇನ್ನಷ್ಟು ಚೆನ್ನಾಗಿ ಇರಬಹುದಿತ್ತು. ಹೆಚ್ಚು ಕಮ್ಮಿ 3 ಗಂಟೆ ಕಾಲಾವಧಿ ಕೂಡ ಜಾಸ್ತಿ ಆಯ್ತು.

ಲಾಸ್ಟ್‌ ಪಂಚ್

ಟಿಕೆಟ್ ಬುಕ್ ಮಾಡೋ ಮುಂಚೆ ಯೋಚ್ನೆ ಮಾಡಿ..

ರೇಟಿಂಗ್: 2/5