ತೆಲುಗಿನ 'ದಿ ಪ್ಯಾರಡೈಸ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗ್ತಿದೆ. ಶ್ರೀಕಾಂತ್ ಒಡೆಲ ನಿರ್ದೇಶನದ ಚಿತ್ರದಲ್ಲಿ ನಾನಿ ಹೀರೊ ಆಗಿ ಅಬ್ಬರಿಸಿದ್ದಾರೆ. ಟ್ರೈಲರ್ ಬಿಡದೇ ಎರಡು ಹಾಡುಗಳಿಂದ ಸಿನಿಮಾ ಇನ್ನಿಲ್ಲದ ಹೈಪ್ ಕ್ರಿಯೇಟ್ ಮಾಡಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ಕಲಾವಿದರು, ತಂತ್ರಜ್ಞರು ಭರ್ಜರಿ ಸಂಭಾವನೆ ಪಡೆದಿದ್ದಾರೆ.

ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'ಎ' ಸರ್ಟಿಫಿಕೆಟ್ ಸಿಕ್ಕಿದೆ. ಒಂದ್ಕಾಲದಲ್ಲಿ 'ಎ' ಸರ್ಟಿಫಿಕೆಟ್ ಅಂದ್ರೆ ಫಿಲ್ಮ್ ಮೇಕರ್ಸ್ ಹೆದರುತ್ತಿದ್ದರು. ಹೆಣ್ಣುಮಕ್ಕಳು ಬರಲ್ಲ ಎಂದುಕೊಳ್ಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಇನ್ನು ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿ ಭರ್ಜರಿ ಕಲೆಕ್ಷನ್ ಮಾಡಿದೆ. ದೊಡ್ಡಮಟ್ಟದ ಓಪನಿಂಗ್ ನಿರೀಕ್ಷೆ ಮಾಡಲಾಗ್ತಿದೆ. ಕರ್ನಾಟಕದಲ್ಲಿ ಕೂಡ ಗ್ರ್ಯಾಂಡ್ ರಿಲೀಸ್ ಆಗ್ತಿದೆ.

ನಾನಿ ಸಂಭಾವನೆ

ಅಂದಾಜು 90 ಕೋಟಿ ರೂ. ಬಜೆಟ್‌ನಲ್ಲಿ 'ದಿ ಪ್ಯಾರಡೈಸ್' ಸಿನಿಮಾ ನಿರ್ಮಾಣವಾಗಿದೆ ಎನ್ನಲಾಗ್ತಿದೆ. ಚಿತ್ರಕ್ಕಾಗಿ ನಟ ನಾನಿ 30-35 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ. 'ದಸರಾ', 'ಹಾಯ್ ನಾನ್ನ', 'ಸರಿಪೋದ ಶನಿವಾರಂ' ಹಾಗೂ 'ಹಿಟ್- 3' ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಸಹಜವಾಗಿಯೇ ಈ ಸಿನಿಮಾ ನಿರೀಕ್ಷೆ ಮೂಡಿಸಿದೆ. ಪಾತ್ರಕ್ಕಾಗಿ ವಿಭಿನ್ನ ಅವತಾರ ತಾಳಿದ್ದಾರೆ. ಎರಡು ಜಡೆ ಹಾಕಿಕೊಂಡು ಗಮನ ಸೆಳೆದಿದ್ದಾರೆ.

ಮೋಹನ್ ಬಾಬು

ಹಿರಿಯ ನಟ ಮೋಹನ್ ಬಾಬು ವಿಲನ್ ಆಗಿ ಅಬ್ಬರಿಸಿದ್ದಾರೆ. ಸಿಕಂಜಾ ಮಾಲಿಕ್ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅದಕ್ಕಾಗಿ 5 ಕೋಟಿ ರೂ. ಸಂಭಾವನೆ ಜೇಬಿಗಿಳಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಒಂದ್ಕಾಲದಲ್ಲಿ ವಿಲನ್ ಆಗಿ ನಟಿಸಿ ಗೆದ್ದಿದ್ದ ಮೋಹನ್ ಬಾಬು ಬಳಿಕ ಹೀರೊ ಆಗಿ ಮಿಂಚಿದ್ದರು. ಕಲೆಕ್ಷನ್ ಕಿಂಗ್ ಬಿರುದು ಪಡೆದಿದ್ದರು. ಇದೀಗ ಮತ್ತೆ ವಿಲನ್ ಆಗಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.

ಅನಿರುದ್ಧ್ ಮ್ಯಾಜಿಕ್

ನಾನಿ ಬಿಟ್ಟರೆ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ 'ದಿ ಪ್ಯಾರಡೈಸ್' ಚಿತ್ರಕ್ಕೆ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ. ಕಾಲಿವುಡ್ ರಾಕ್‌ಸ್ಟಾರ್ ಸಂಗೀತ ಹಾಡುಗಳೆಲ್ಲಾ ಹಿಟ್ ಆಗ್ತಿದೆ. ಈಗಾಗಲೇ 'ಆಯಾ ಶೇರ್' ಸಾಂಗ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.

ಇನ್ನುಳಿದಂತೆ ನಾಯಕಿ ಕಯಾದು ಲೋಹರ್ 1.50 ಕೋಟಿ ರೂ. ಬಾಲಿವುಡ್ ನಟ ರಾಘವ್ ಜುಯೆಲ್ 2.50 ಕೋಟಿ ಹಾಗೂ ಸ್ಪೆಷಲ್ ಸಾಂಗ್‌ನಲ್ಲಿ ಕುಣಿದಿರುವ ಕೀರ್ತಿ ಸುರೇಶ್ 1 ಕೋಟಿ ರೂ. ಸಂಭಾವನೆ ಗಿಟ್ಟಿಸಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಒಂದು ದಿನ ಮುನ್ನ ಚಿತ್ರದ ಪ್ರೀಮಿಯರ್‌ ಶೋಗಳು ಶುರುವಾಗ್ತಿದೆ.