ಶ್ರೀಕಾಂತ್ ಒಡೆಲ ನಿರ್ದೇಶನದ 'ದಿ ಪ್ಯಾರಡೈಸ್' ಸಿನಿಮಾ 5ನೇ ದಿನಕ್ಕೆ ಕಾಲಿಟ್ಟಿದೆ. ಗುರುವಾರ(ಸೆಪ್ಟೆಂಬರ್ 24) ಸಿನಿಮಾ ತೆರೆಗೆ ಬರುವ ಮುನ್ನ ಪ್ರೀಮಿಯರ್ ಶೋಗಳಲ್ಲಿ ಪ್ರದರ್ಶನ ಕಂಡಿತ್ತು. ಆದರೆ ಮೊದಲ ಶೋನಿಂದಲೇ ಸಿನಿಮಾ ನೆಗೆಟಿವ್ ರೆಸ್ಪಾನ್ಸ್ ಪಡೆದುಕೊಂಡಿತ್ತು. ತೆಲುಗು ಪ್ರೇಕ್ಷಕರೇ ಸಿನಿಮಾ ನೋಡಿ ಬೇಸರ ವ್ಯಕ್ತಪಡಿಸಿದ್ದರು. ಆದರೂ ಭರ್ಜರಿ ಓಪನಿಂಗ್ ಸಿಕ್ಕಿತ್ತು.
ಪ್ರೀಮಿಯರ್ ಶೋಗಳು ಸೇರಿ ಮೊದಲ ದಿನ ವಿಶ್ವದಾದ್ಯಂತ 'ದಿ ಪ್ಯಾರಡೈಸ್' ಸಿನಿಮಾ 88 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಘೋಷಿಸಿತ್ತು. ಬಳಿಕ ನಿಧಾನವಾಗಿ ಸಿನಿಮಾ ಗಳಿಕೆ ಕುಸಿಯಲು ಆರಂಭವಾಗಿತ್ತು. ದೊಡ್ಡ ಸಿನಿಮಾ ಎನ್ನುವ ಕಾರಣಕ್ಕೆ ಪ್ರೇಕ್ಷಕರು ನೆಗೆಟಿವ್ ರಿವ್ಯೂಸ್ ಪಕ್ಕಕ್ಕಿಟ್ಟು ಸಿನಿಮಾ ನೋಡುತ್ತಿದ್ದಾರೆ. ನಾನಿ ಅಭಿಮಾನಿಗಳಿಗೆ ಸಿನಿಮಾ ಇಷ್ಟವಾಗಿದೆ. ಆದರೂ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿಲ್ಲ. ಭಾನುವಾರ ಕೂಡ ಅಂತಹ ಮ್ಯಾಜಿಕ್ ಏನೂ ನಡೀಲಿಲ್ಲ.
ಭಾನುವಾರ ಕಲೆಕ್ಷನ್
'ದಿ ಪ್ಯಾರಡೈಸ್' ಸಿನಿಮಾ ಭಾನುವಾರ ಭಾರತದಲ್ಲಿ 15.70 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ www.sacnilk.com ವೆಬ್ ಸೈಟ್ ವರದಿ ಮಾಡಿದೆ. ಒಟ್ಟಾರೆ ನಾಲ್ಕು ದಿನಕ್ಕೆ ಭಾರತದಲ್ಲಿ 109 ಕೋಟಿ ರೂ. ಗ್ರಾಸ್ ಕಲೆಕ್ಷನ್ ಜೊತೆಗೆ 92.10 ಕೋಟಿ ರೂ. ನೆಟ್ ಕಲೆಕ್ಷನ್ ಆಗಿದೆ ಎಂದು ಹೇಳಲಾಗ್ತಿದೆ. ವಿಶ್ವದಾದ್ಯಂತ ಮೊದಲ ನಾಲ್ಕು ದಿನಕ್ಕೆ 155 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡವೇ ಘೋಷಿಸಿದೆ.
ಕರ್ನಾಟಕ ಬಾಕ್ಸಾಫೀಸ್
ರಾಜ್ಯದಲ್ಲಿ 'ದಿ ಪ್ಯಾರಡೈಸ್' ಚಿತ್ರಕ್ಕೆ ಒಳ್ಳೆ ಓಪನಿಂಗ್ ಸಿಕ್ಕಿತ್ತು. ಮೊದಲ ದಿನ ಸಿನಿಮಾ 6.18 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಬಳಿಕ ಕ್ರಮವಾಗಿ ಶುಕ್ರವಾರ 1.39 ಕೋಟಿ ರೂ. ಶನಿವಾರ 1.82 ಕೋಟಿ ರೂ. ಹಾಗೂ ಭಾನುವಾರ 1.38 ಕೋಟಿ ರೂ. ಗಳಿಕೆ ಕಂಡಿರುವ ಅಂದಾಜಿದೆ. ಆಂಧ್ರ, ತೆಲಂಗಾಣ ಬಿಟ್ಟರೆ ಕರ್ನಾಟಕದಲ್ಲೇ ಸಿನಿಮಾ ಒಳ್ಳೆ ಆದಾಯ ಗಳಿಸ್ತಿದೆ.
ಸೋಮವಾರದ ಪರೀಕ್ಷೆ
ಯಾವುದೇ ದೊಡ್ಡ ಚಿತ್ರಕ್ಕೆ ಆದ್ರು ಫಸ್ಟ್ ವೀಕೆಂಡ್ ಕಳೆದು ಬರುವ ಸೋಮವಾರ ಬಹಳ ನಿರ್ನಾಯಕವಾಗುತ್ತದೆ. ವಾರದ ದಿನದಲ್ಲಿ ಕೂಡ ಜನ ಚಿತ್ರಮಂದಿರಕ್ಕೆ ಬರಲು ಮನಸ್ಸು ಮಾಡಿದ್ರೆ ಆ ಸಿನಿಮಾ ಗೆದ್ದಂತೆ. 'ದಿ ಪ್ಯಾರಡೈಸ್' ಸಿನಿಮಾ ಕೂಡ ಇದೇ ಪರೀಕ್ಷೆಯಲ್ಲಿದೆ. ಆದರೆ ಭಾನುವಾರ ಗಳಿಕೆ ನೋಡಿದ್ರೆ, ಸೋಮವಾರ ಯಾವುದೇ ಬದಲಾವಣೆ ಆಗಲ್ಲ ಎನಿಸುತ್ತಿದೆ.