ನಾನಿ ನಟನೆಯ ತೆಲುಗಿನ 'ದಿ ಪ್ಯಾರಡೈಸ್' ಸಿನಿಮಾ ಈ ವಾರ ದೊಡ್ಡದಾಗಿ ಬಿಡುಗಡೆಯಾಗಿದೆ. ಆದರೆ ಮೊದಲ ಶೋನಿಂದಲೇ ನೆಗೆಟಿವ್ ಟಾಕ್ ಶುರುವಾಗಿ ಚಿತ್ರಕ್ಕೆ ಹಿನ್ನಡೆಯಾಗಿದೆ. ಬುಧವಾರ ರಾತ್ರಿಯಿಂದಲೇ ಪ್ರೀಮಿಯರ್ ಶೋಗಳು ಆರಂಭವಾಗಿತ್ತು. ಅಡ್ವಾನ್ಸ್ ಬುಕ್ಕಿಂಗ್ ಚೆನ್ನಾಗಿ ಇದ್ದಿದ್ರಿಂದ ಗುರುವಾರ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಆದರೆ ಮಿಶ್ರಪ್ರತಿಕ್ರಿಯೆ ಚಿತ್ರದ ಕಲೆಕ್ಷನ್ ಮೇಲೆ ಪರಿಣಾಮ ಬೀರಿದೆ. 2ನೇ ದಿನ ಸಿನಿಮಾ ಕಲೆಕ್ಷನ್ ಅರ್ಧಕರ್ಧ ಕಮ್ಮಿ ಆಗಿದೆ.

ಶ್ರೀಕಾಂತ್ ಒಡೆಲ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ದಿ ಪ್ಯಾರಡೈಸ್' ಚಿತ್ರ ನೋಡಿ ತೆಲುಗು ಪ್ರೇಕ್ಷಕರೇ ಬೇಸರಗೊಂಡಿದ್ದಾರೆ. ಯಾವುದೇ ಹಂತದಲ್ಲೂ ಸಿನಿಮಾ ರಂಜಿಸುವುದಿಲ್ಲ ಎನ್ನುತ್ತಿದ್ದಾರೆ. ಆದರೂ ದೊಡ್ಡ ಸಿನಿಮಾ ಎನ್ನುವ ಕಾರಣಕ್ಕೆ ಕೆಲವರು ಒಮ್ಮೆ ನೋಡಲು ಚಿತ್ರಮಂದಿರಕ್ಕೆ ಹೋಗುತ್ತಿದ್ದಾರೆ. ಆಂಧ್ರ, ತೆಲಂಗಾಣ ಬಿಟ್ಟರೆ ಕರ್ನಾಟಕದಲ್ಲಿ ಚಿತ್ರಕ್ಕೆ ರೆಸ್ಪಾನ್ಸ್ ಚೆನ್ನಾಗಿದೆ.

ಫಸ್ಟ್‌ ಡೇ ಕಲೆಕ್ಷನ್

'ದಿ ಪ್ಯಾರಡೈಸ್' ಸಿನಿಮಾ ಪ್ರೀಮಿಯರ್ ಶೋಗಳು ಹಾಗೂ ಮೊದಲ ದಿನ ಸೇರಿ 74 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕಿದ್ದರು. ಆದರೆ ವಿಶ್ವದಾದ್ಯಂತ ಚಿತ್ರಕ್ಕೆ 88 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಘೋಷಿಸಿತ್ತು.

2ನೇ ದಿನ ಏನಾಯ್ತು ?

ಮಿಶ್ರ ಪ್ರತಿಕ್ರಿಯೆ ಸಿನಿಮಾ ಗಳಿಕೆಗೆ ಅಡ್ಡಗಾಲು ಹಾಕಿದೆ. ಶುಕ್ರವಾರ 'ದಿ ಪ್ಯಾರಡೈಸ್' ಸಿನಿಮಾ ಕಲೆಕ್ಷನ್ 57%ರಷ್ಟು ಕುಸಿದಿರುವುದಾಗಿ ವರದಿಯಾಗಿದೆ. ಆದರೆ 2ನೇ ದಿನದ ಕಲೆಕ್ಷನ್ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಇನ್ನು ಮಾಹಿತಿ ನೀಡಿಲ್ಲ. 2ನೇ ದಿನ ಭಾರತದಲ್ಲಿ 14.90 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ sacnilk ವೆಬ್‌ಸೈಟ್ ವರದಿ ಮಾಡಿದೆ. ವಿಶ್ವದಾದ್ಯಂತ ಗ್ರಾಸ್ 25 ಕೋಟಿ ರೂ. ದಾಟಿರುವ ನಿರೀಕ್ಷೆಯಿದೆ. ಹಾಗಾಗಿ ಚಿತ್ರ 100 ಕೋಟಿ ರೂ. ಕ್ಲಬ್ ಸೇರಿದೆ.

'ಸಿಟಿಲೈಟ್ಸ್' ಪೈಪೋಟಿ

ಕರ್ನಾಟಕದಲ್ಲಿ 'ದಿ ಪ್ಯಾರಡೈಸ್' ಚಿತ್ರಕ್ಕೆ ದುನಿಯಾ ವಿಜಯ್ ನಿರ್ದೇಶನದ 'ಸಿಟಿಲೈಟ್ಸ್' ಚಿತ್ರ ಪೈಪೋಟಿ ಕೊಡ್ತಿದೆ. ನಾನಿ ಚಿತ್ರಕ್ಕಾಗಿ ಕನ್ನಡ ಚಿತ್ರದ ಶೋಗಳನ್ನು ತೆಗೆಯಲಾಗಿತ್ತು. ಆದರೆ 'ದಿ ಪ್ಯಾರಡೈಸ್' ಚಿತ್ರಕ್ಕೆ ಹಿನ್ನಡೆ ಆಗುತ್ತಿದ್ದಂತೆ ಮತ್ತೆ 'ಸಿಟಿಲೈಟ್ಸ್' ಚಿತ್ರ ಶೋಗಳನ್ನು ಮರಳಿ ವಾಪಸ್ ಪಡೆದಿದೆ. ಎರಡನೇ ವಾರ ಚಿತ್ರ ಯಶಸ್ವಿ ಪ್ರದರ್ಶನ ಕಾಣ್ತಿದೆ.