ನ್ಯಾಚುರಲ್ ಸ್ಟಾರ್ ನಾನಿ ನಟನೆಯ 'ದಿ ಪ್ಯಾರಡೈಸ್' ಸಿನಿಮಾ ಮಿಶ್ರ ಪ್ರತಿಕ್ರಿಯೆ ನಡುವೆ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ದೊಡ್ಡಮಟ್ಟದಲ್ಲಿ ಅಡ್ವಾನ್ಸ್ ಬುಕ್ಕಿಂಗ್ ನಡೆದಿತ್ತು. ಮೊದಲ ದಿನ ಕೂಡ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದರು. ಹಾಗಾಗಿ ಸಹಜವಾಗಿಯೇ ಸಿನಿಮಾ ಕಲೆಕ್ಷನ್ ಹೆಚ್ಚಾಗಿದೆ. ನೆಗೆಟಿವ್ ಟಾಕ್ ಬಳಿಕ ಚಿತ್ರದ ಬಾಕ್ಸಾಫೀಸ್ ಲೆಕ್ಕಾಚಾರ ಏನಾಗುತ್ತೋ ಕಾದು ನೋಡಬೇಕಿದೆ.

ಶ್ರೀಕಾಂತ್ ಒಡೆಲ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಎಡವಿದೆ. ಆದರೂ ನಾನಿ ಅಭಿಮಾನಿಗಳಿಗೆ ಇಷ್ಟವಾಗಿದೆ. 90 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಿರುವುದಾಗಿ ಹೇಳಲಾಗ್ತಿದೆ. ನಾನಿ ಸೇರಿದಂತೆ ಚಿತ್ರದಲ್ಲಿ ಕೆಲಸ ಮಾಡಿರುವ ಎಲ್ಲರಿಗೂ ಭರ್ಜರಿ ಸಂಭಾವನೆ ಕೂಡ ಸಿಕ್ಕಿದೆ. ಆದರೆ ಮೊದಲ ದಿನವೇ ಚಿತ್ರಕ್ಕೆ ಹಿನ್ನಡೆಯಾಗಿದ್ದು ಮುಂದೆ ಭವಿಷ್ಯ ಏನಾಗುತ್ತೋ ಗೊತ್ತಿಲ್ಲ.

ಫಸ್ಟ್ ಡೇ ಕಲೆಕ್ಷನ್

'ದಿ ಪ್ಯಾರಡೈಸ್' ಸಿನಿಮಾ ಮೊದಲ ದಿನ ವಿಶ್ವದಾದ್ಯಂತ 74.90 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. Sacnilk.com ವರದಿ ಪ್ರಕಾರ ಭಾರತದಲ್ಲಿ 9,732 ಶೋಗಳಲ್ಲಿ ಪ್ರದರ್ಶನ ಕಂಡ ಸಿನಿಮಾ 34.65 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ಇದರಲ್ಲಿ ಬುಧವಾರ ರಾತ್ರಿ ಪ್ರೀಮಿಯರ್ ಶೋಗಳ ಕಲೆಕ್ಷನ್ ಕೂಡ ಸೇರಿದೆ. ಇನ್ನು ಭಾರತದಲ್ಲಿ ಗ್ರಾಸ್ ಕಲೆಕ್ಷನ್ 46.25 ಕೋಟಿ ರೂ. ದಾಟಿದೆ. ಪ್ರೀಮಿಯರ್ ಹಾಗೂ ಮೊದಲ ದಿನದ ಗಳಿಕೆ ಸೇರಿ 88 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಘೋಷಿಸಿದೆ.

ಓವರ್‌ಸೀಸ್ ಮಾರ್ಕೆಟ್‌ನಿಂದ ಚಿತ್ರಕ್ಕೆ 20 ಕೋಟಿ ರೂ. ಹರಿದು ಬಂದಿದೆ. ಆಂಧ್ರ, ತೆಲಂಗಾಣ ಸೇರಿ 31.50 ರೂ. ಕಲೆಕ್ಷನ್ ಆಗಿದ್ದರೆ ಕರ್ನಾಟಕದ ಪಾಲು 4 ಕೋಟಿ ರೂ ಎನ್ನಲಾಗ್ತಿದೆ. ಇನ್ನುಳಿದಂತೆ ತಮಿಳುನಾಡಿನಲ್ಲಿ 1.75 ಕೋಟಿ ರೂ. ಹಾಗೂ ಕೇರಳದಲ್ಲಿ 40 ಲಕ್ಷ ರೂ. ಗಳಿಕೆ ಕಂಡಿರುವುದಾಗಿ ಹೇಳಲಾಗ್ತಿದೆ.

ನಾನಿ ಹಿಂದಿನ ದಾಖಲೆ

ನಟ ನಾನಿ ದಿನದಿಂದ ದಿನಕ್ಕೆ ಆಕ್ಷನ್ ಹೀರೊ ಆಗಿ ಪ್ರೇಕ್ಷಕರಿಗೆ ಹತ್ತಿರವಾಗ್ತಿದ್ದಾರೆ. ಈ ಹಿಂದೆ ಬಂದಿದ್ದ ಹಿಟ್: ದಿ ಥರ್ಡ್ ಕೇಸ್ ಸಿನಿಮಾ ಮೊದಲ ದಿನ 38 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ನಾನಿ ಹಾಗೂ ಶ್ರೀಕಾಂತ್ ಒಡೆಲ ಕಾಂಬಿನೇಷನ್‌ನಲ್ಲೇ ತೆರೆಗೆ ಬಂದಿದ್ದ 'ದಸರಾ' ಚಿತ್ರದ 36.25 ಕೋಟಿ ರೂ. ಗಳಿಕೆ ಕಂಡಿತ್ತು. ಎರಡು ಸಿನಿಮಾಗಳು ಹಿಟ್ ಲಿಸ್ಟ್ ಸೇರಿದ್ದವು.