ಚಿತ್ರರಂಗದಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲದೇ ಇದ್ದರೂ ಅಭಿಮಾನಿಗಳು ಸುಖಾಸುಮ್ಮನೆ ಪ್ರತಿಕ್ರಿಯಿಸುತ್ತಾರೆ. ಸ್ಟಾರ್ ವಾರ್ ಇಲ್ಲದಿದ್ರು ಸ್ಟಾರ್ ಫ್ಯಾನ್ಸ್ ವಾರ್ ನಡೆಯುತ್ತಲೇ ಇರುತ್ತದೆ. ಈ ಬಗ್ಗೆ ನಟರು ತಿಳಿ ಹೇಳುವ ಪ್ರಯತ್ನ ಮಾಡುವುದಿಲ್ಲ. ಹಾಗಾಗಿ ಇಂತಹ ಕಂದಕ ದೊಡ್ಡದಾಗುತ್ತಲೇ ಇರುತ್ತದೆ.

ದರ್ಶನ್ ಅಭಿಮಾನಿಗಳು ಹಾಗೂ ದೊಡ್ಮನೆ ಅಭಿಮಾನಿಗಳ ನಡುವಿನ ಶೀತಲ ಸಮರ ಹೊಸದೇನು ಅಲ್ಲ. ಅದಕ್ಕೆ ನಾನಾ ಕಾರಣಗಳಿವೆ. ಒಂದಷ್ಟು ಘಟನೆಗಳು ತಿಕ್ಕಾಟಕ್ಕೆ ತುಪ್ಪು ಸುರಿದಿದ್ದು ಇದೆ. ಹೊಸಪೇಟೆಯಲ್ಲಿ ನಟ ದರ್ಶನ್ ಮೇಲೆ ಕಿಡಿಗೇಡಿ ಒಬ್ಬ ಚಪ್ಪಲಿ ಎಸೆದ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ವೇಳೆ ಯುವ ರಾಜ್‌ಕುಮಾರ್ ಮಾಡಿದ್ದ ಪೋಸ್ಟ್ ಕೂಡ ಸದ್ದು ಮಾಡಿತ್ತು. ಇನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಗ್ಗೆ ಗಜ ಪಡೆ ಹೆಸರಿನ ಟ್ವಿಟರ್ ಖಾತೆಯಲ್ಲಿ ಹಾಕಿದ್ದ ಪೋಸ್ಟ್ ಚರ್ಚೆಗೆ ಗ್ರಾಸವಾಗಿತ್ತು. ಇಂತಹ ವಿಚಾರಗಳು ದರ್ಶನ್ ಹಾಗೂ ದೊಡ್ಮನೆ ಅಭಿಮಾನಿಗಳ ನಡುವೆ ಅಂತರ ಬೆಳೆಯುವಂತೆ ಮಾಡಿದ್ದು ಸುಳ್ಳಲ್ಲ.

ಸೋಶಿಯಲ್ ಮೀಡಿಯಾದಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಪರಸ್ಪರ ಕೆಸರೆರಚಾಟ ಮಾಡುತ್ತಲೇ ಇರುತ್ತಾರೆ. ಅತಿಯಾದ ಅಭಿಮಾನ ಕೂಡ ಕೆಲವೊಮ್ಮೆ ಇಂತಹ ಅಚಾತುರ್ಯಗಳಿಗೆ ಕಾರಣವಾಗುತ್ತದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಸದ್ಯ ಜೈಲಿನಲ್ಲಿದ್ದಾರೆ. ಅವರು ನಟಿಸಬೇಕಿದ್ದ ಸಿನಿಮಾಗಳೆಲ್ಲಾ ನಿಂತು ಹೋಗಿದೆ. ಇದೆಲ್ಲದರ ನಡುವೆ ಯುವ ರಾಜ್‌ಕುಮಾರ್ ನಟನೆಯ ಚಿತ್ರವನ್ನು ದರ್ಶನ್ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿರುವ ತರುಣ್ ಸುಧೀರ್ ನಿರ್ಮಾಣ ಮಾಡುತ್ತಿದ್ದಾರೆ.

ಜಡೇಶ್ ಹಂಪಿ ನಿರ್ದೇಶನದಲ್ಲಿ ಚಿತ್ರ ನಿರ್ಮಾಣವಾಗಲಿದೆ. ತರುಣ್ ಜೊತೆಗೆ ಜಗದೀಶ್ ಗೌಡ ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. 'ಪವರ್‌ಮ್ಯಾನ್' ಎಂದು ಚಿತ್ರಕ್ಕೆ ಟೈಟಲ್ ಇಟ್ಟು ಥೀಮ್ ಪೋಸ್ಟರ್ ಸಹ ಬಿಡುಗಡೆ ಮಾಡಿದ್ದಾರೆ. ಆದರೆ ಯುವ ರಾಜ್‌ಕುಮಾರ್ ನಟನೆಯ ಚಿತ್ರವನ್ನು ತರುಣ್ ನಿರ್ಮಾಣ ಮಾಡುತ್ತಿರುವುದು ಕೆಲ ದರ್ಶನ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಲು ಆರಂಭಿಸಿದ್ದಾರೆ. ಅಂದಹಾಗೆ ದರ್ಶನ್ ಹಾಗೂ ದೊಡ್ಮನೆ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ.

ಮೂರು ವರ್ಷಗಳ ಹಿಂದೆ 'ಯುವ' ಸಿನಿಮಾ ಚಿತ್ರೀಕರಣ ಸೆಟ್‌ಗೆ ದರ್ಶನ್ ಹಾಗೂ ತರುಣ್ ಸುಧೀರ್ ಭೇಟಿ ನೀಡಿದ್ದರು. ಆಗ 'ಕಾಟೇರ' ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ದರ್ಶನ್- ಯುವ ಪರಸ್ಪರ ಅಪ್ಪಿಕೊಂಡಿದ್ದರು. ಆ ಫೋಟೊ, ವೀಡಿಯೋ ವೈರಲ್ ಆಗಿತ್ತು. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಪರೋಕ್ಷವಾಗಿ ಸಾರಿ ಹೇಳಿದ್ದರು. ಆದರೂ ಫ್ಯಾನ್ಸ್ ವಾರ್ ಕಮ್ಮಿ ಆಗಿರಲಿಲ್ಲ. ಸದ್ಯ ಯುವ ಜೊತೆ ತರುಣ್ ಕೈ ಜೋಡಿಸುತ್ತಿದ್ದಂತೆ ಕೆಲವರು ಬೇಸರದಿಂದ ಕಾಮೆಂಟ್ ಮಾಡುತ್ತಿದ್ದಾರೆ.

ನಾವೇ ಸಿನಿಮಾ ಮಾಡಬೇಕು ಎನ್ನುವುದು ಬಿಟ್ಟು ಹೊಸ ಹೊಸ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡಬೇಕು, ಆಗ ಮಾತ್ರ ಸಿನಿಮಾಗಳು ಗೆಲ್ಲಲು ಸಾಧ್ಯ. ಚಿತ್ರರಂಗ ಉಳಿಯಲು ಸಾಧ್ಯ ಎಂದು ತರುಣ್ ಸುಧೀರ್ ಹೇಳಿದ್ದಾರೆ. ಅದೇ ರೀತಿ ಹೊಸ ಕಾಂಬಿನೇಷನ್‌ನಲ್ಲಿ ಸಿನಿಮಾ ಆರಂಭಿಸಿದ್ದಾರೆ. ಮುಂದಿನ ವರ್ಷ ಸಮ್ಮರ್‌ನಲ್ಲೇ 'ಪವರ್‌ಮ್ಯಾನ್' ಸಿನಿಮಾ ಬಿಡುಗಡೆ ಆಗುತ್ತದೆ ಎಂದು ಘೋಷಿಸಿದ್ದಾರೆ.

ಹೊಸಪೇಟೆ ಘಟನೆಗೆ ದೊಡ್ಮನೆ ಫ್ಯಾನ್ಸ್ ಕಾರಣ ಎಂದು ಆರೋಪ ಬಂದಾಗ ಯುವ ರಾಜ್‌ಕುಮಾರ್ ಒಂದು ಪೋಸ್ಟ್ ಮಾಡಿದ್ದರು. "ಯಾರೋ ಮಾಡಿದ ತಪ್ಪನ್ನು ಮತ್ತೊಬ್ಬರ ಮೇಲೆ ಹಾಕುವುದರಿಂದ ಸುಳ್ಳು ಸತ್ಯವಾಗುವುದಿಲ್ಲ. ಪೊಲೀಸ್‌ ತನಿಖೆ ನಡೆಯುತ್ತಿದೆ, ತಪ್ಪಿತಸ್ಥ ಯಾರೇ ಆಗಿದ್ದರೂ ಅವರಿಗೆ ಶಿಕ್ಷೆ ಖಂಡಿತ ಆಗುತ್ತದೆ.. ಕಾಣದ ಕೈಗಳು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದರೂ.. ಕಾಣುವ ಬುದ್ಧಿ ನಮ್ಮದಾಗಿರಲಿ.. ನನ್ನ ಚಿಕ್ಕಪ್ಪನ ಧ್ವನಿ ಎಂದಿಗೂ ಸತ್ಯದ ಪರವೇ, ಅವರ ಧ್ವನಿ ನಮ್ಮೆಲ್ಲರ ಶಕ್ತಿ." ಎಂದು ಅವರು ಪೋಸ್ಟ್ ಮಾಡಿದ್ದರು. 'ಪವರ್‌ಮ್ಯಾನ್' ಸಿನಿಮಾ ಘೋಷಣೆ ಬೆನ್ನಲ್ಲೇ ಈ ಪೋಸ್ಟ್ ಅನ್ನು ಕೆಲವರು ವೈರಲ್ ಮಾಡ್ತಿದ್ದಾರೆ.