ಕಿರುತೆರೆ ನಟ ರಾಜೇಶ್ ಧ್ರುವ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಸದ್ದಿಲ್ಲದೇ ನಟಿ ರಾಧಿಕಾ ಅಚ್ಯುತ ರಾವ್ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

"ಒಂದು ವಿಷ್ಯ ಹೇಳ್ಬೇಕಿತ್ತು ಅಂದ್ನಲ್ಲ...ಅದೇನಂದ್ರೆ...WE ARE ENGAGED" ಎಂದು ಬರೆದುಕೊಂಡಿದ್ದಾರೆ. ರಾಜೇಶ್ ಬಣ್ಣದ ಲೋಕಕ್ಕೆ ಬಂದು 15 ವರ್ಷ ಕಳೆದಿದೆ. ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳಲ್ಲಿ ನಟಿಸೋ ಪ್ರಯತ್ನ ಕೂಡ ನಿಂತಿಲ್ಲ. ರಾಜೇಶ್ ನಟಿಸಿದ್ದ 'ಪೀಟರ್' ಸಿನಿಮಾ ಸಖತ್ ಸದ್ದು ಮಾಡಿದ್ದು ಗೊತ್ತೇಯಿದೆ. ಇದೀಗ ಅವರ ವೈಯಕ್ತಿಕ ಜೀವನ ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ.

'ಹೀರೋ ನಂಬರ್ 1' ಶೋನಲ್ಲಿ ರಾಜೇಶ್ ಧ್ರುವ ಮೊದಲ ಬಾರಿ ಕಾಣಿಸಿಕೊಂಡಿದ್ದರು. ಡ್ಯಾನ್ಸರ್ ಆಗಿದ್ದ ಅವರು ಶಿರಸಿಯಲ್ಲಿ ಡಾನ್ಸ್‌ ಕ್ಲಾಸ್ ನಡೆಸುತ್ತಿದ್ದರು. 2013ರಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಟಿಸಿ ಗಮನ ಸೆಳೆದಿದ್ದರು. ಸಿದ್ದಾರ್ಥ್ ಸಹೋದರ ಅಖಿಲ್ ಪಾತ್ರದಲ್ಲಿ ಕಾಣಿಸಿಕೊಂಡು ವೀಕ್ಷಕರ ಮನ ಗೆದ್ದಿದ್ದರು. ಬಳಿಕ 'ಅರಮನೆ ಗಿಣಿ', 'ನಂದಿನಿ', 'ಸರಯೂ' ಧಾರಾವಾಹಿಗಳಲ್ಲಿ ಮಿಂಚಿದ್ದರು. ಇತ್ತಿಚಿನ ವರ್ಷಗಳಲ್ಲಿ 'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ನಟಿ ಕಮಾಲ್ ಮಾಡಿದ್ದರು.

ತಾವು ಕೈಹಿಡಿಯುವ ಹುಡುಗಿ ಯಾರು ಎಂದು ಸ್ವತಃ ರಾಜೇಶ್ ಮಾಹಿತಿ ಕೊಟ್ಟಿದ್ದಾರೆ. "ನನ್ನ ಮೊದಲ ಸಿನೆಮಾ "ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ" ಚಿತ್ರಕ್ಕೆ ನಾಯಕ ನಟಿಯ ಹುಡುಕಾಟದ ಸಂದರ್ಭದಲ್ಲಿ ಸಿಕ್ಕವರೇ ಮುಂದೆ ನನ್ನ ಬಾಳ ಸಂಗಾತಿ ಆಗ್ತಾರೆ ಅಂತ ಅಂದುಕೊಂಡಿರ್ಲಿಲ್ಲ. ಆಗ ನನ್ನ ಚಿತ್ರದಲ್ಲಿ ನಾಯಕಿ ಆಗಿ ಪರಿಚಯಿಸಿದ "ರಾಧಿಕಾ ಅಚ್ಯುತ ರಾವ್" ರವರನ್ನು ಈಗ ನನ್ನ ಬಾಳ ಸಂಗಾತಿಯಾಗಿ ನಿಮ್ಮೆಲ್ಲರಿಗೂ ಮರು ಪರಿಚಯಿಸುತ್ತಿದ್ದೇನೆ. ಗುರು ಹಿರಿಯರ ಸಮ್ಮತಿ ಹಾಗೂ ಆಶೀರ್ವಾದದೊಂದಿಗೆ ನಮ್ಮಿಬ್ಬರ ನಿಶ್ಚಿತಾರ್ಥ ನೆರವೇರಿದೆ. ಈ ಖುಷಿಯ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಸಂತಸ ನಮ್ಮದು. ಸಿನಿಪಯಣ to ಬಾಳಪಯಣ. ನಿಮ್ಮ ಹಾರೈಕೆ - ಆಶೀರ್ವಾದ ಎಂದಿನಂತೆ ನಮ್ಮೊಂದಿಗೆ ಇರಲಿ" ಎಂದು ಬರೆದುಕೊಂಡಿದ್ದಾರೆ.

ಎಂಗೇಜ್‌ಮೆಂಟ್‌ನಲ್ಲಿ ಪೀಚ್ ಕಲರ್ ಕುರ್ತಾ ಪೈಜಾಮದಲ್ಲಿ ರಾಜೇಶ್ ಧ್ರುವ ಕಾಣಿಸಿಕೊಂಡಿದ್ದಾರೆ. ಮರೂನ್ ಕಲರ್ ಲಂಗಾ ದಾವಣಿಯಲ್ಲಿ ರಾಧಿಕಾ ಮಿಂಚಿದ್ದಾರೆ. ಜೋಡಿಗೆ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ಶೀಘ್ರದಲ್ಲೇ ರಾಜೇಶ್-ರಾಧಿಕಾ ಮದುವೆ ನಡೆಯಲಿದೆ.