ಸಾಮಾನ್ಯವಾಗಿ ಚಿತ್ರಮಂದಿರಗಳಲ್ಲಿ 4 ಪ್ರದರ್ಶನಗಳಿಗೆ ಮಾತ್ರ ಅವಕಾಶವಿದೆ. ದೊಡ್ಡ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾದಾಗ ಬೆಳ್ಳಂಬೆಳಗ್ಗೆ 3 ಗಂಟೆ 4 ಗಂಟೆ ಅಷ್ಟೇ ಯಾಕೆ ಮಧ್ಯರಾತ್ರಿ 12 ಗಂಟೆಗೆ ವಿಶೇಷ ಪ್ರದರ್ಶನಗಳನ್ನು ಏರ್ಪಡಿಸುವುದನ್ನು ನೋಡಿದ್ದೇವೆ. ಆದರೆ ಕೆಲ ವರ್ಷಗಳಿಂದ ತಮಿಳುನಾಡಿನಲ್ಲಿ ಇದಕ್ಕೆ ಬ್ರೇಕ್ ಬಿದ್ದಿತ್ತು. ಸಿಎಂ ವಿಜಯ್ ಸರ್ಕಾರ ಬೆಳಗ್ಗೆ 6 ಗಂಟೆಗೆ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಿದೆ.

ತಮಿಳುನಾಡಿನಲ್ಲಿ ಇನ್ನು ಮುಂದೆ ಮೊದಲ ವಾರ 6 ಶೋಗಳ ಪ್ರದರ್ಶನಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದ್ದೆ. ಬೆಳಗ್ಗೆ 6 ಗಂಟೆ ಶೋ ಹಾಕಬಹುದು ಎಂದು ಹೇಳಿರುವುದು ಸಿನಿರಸಿಕರ ಸಂತಸಕ್ಕೆ ಕಾರಣವಾಗಿದೆ. ರಾತ್ರಿ 2.30ರವರೆಗೆ ಸಿನಿಮಾ ಪ್ರದರ್ಶನಕ್ಕೂ ಒಪ್ಪಿದೆ. ಈ ಹಿಂದೆ ತಮಿಳುನಾಡಿನಲ್ಲಿ ಕೂಡ ಬೆಳಗ್ಗೆ ಫ್ಯಾನ್ಸ್ ಶೋಗಳಿಗೆ ಅವಕಾಶ ಇತ್ತು. ಆದರೆ 3 ವರ್ಷಗಳ ಹಿಂದೆ ಅಜಿತ್ ನಟನೆಯ 'ಥುನಿವು' ಸಿನಿಮಾ ವೇಳೆ ನಡೆದ ದುರಂತದಿಂದ ಸರ್ಕಾರ ಅದಕ್ಕೆ ಬ್ರೇಕ್ ಹಾಕಿತ್ತು.

'ಥುನಿವು' ಸಿನಿಮಾ ಬಿಡುಗಡೆ ದಿನ ಬೆಳ್ಳಂಬೆಳಗ್ಗೆ ಸಿನಿಮಾ ಪ್ರದರ್ಶನ ಆರಂಭವಾಗಿತ್ತು. ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತ್ತು. ಚಲಿಸುತ್ತಿದ್ದ ಟ್ಯಾಂಕರ್ ಮೇಲೆ ಅಭಿಮಾನಿಯೊಬ್ಬ ಸಂಭ್ರಮದಿಂದು ಕುಣಿಯುತ್ತಿದ್ದ. ಆಯತಪ್ಪಿ ಬಿದ್ದ ಕಾರಣ ಆತ ಮೃತಪಟ್ಟಿದ್ದ. ಹಾಗಾಗಿ ಸರ್ಕಾರ ಅರ್ಲಿ ಮಾರ್ನಿಂಗ್ ಶೋಗಳನ್ನು ರದ್ದುಪಡಿಸಿತ್ತು. ತಮಿಳಿನ ದೊಡ್ಡ ಸ್ಟಾರ್‌ಗಳ ಸಿನಿಮಾಗಳು ಬೆಂಗಳೂರಿನಲ್ಲಿ ಬೆಳಗ್ಗೆ 6 ಗಂಟೆಗೆ ಪ್ರದರ್ಶನ ಆರಂಭಿಸಿದರೂ ತಮಿಳುನಾಡಿನಲ್ಲಿ ಸಿನಿಮಾ ನೋಡಲು 9 ಗಂಟೆವರೆಗೆ ಕಾಯಬೇಕಿತ್ತು. ಅರೇ, ಕರ್ನಾಟಕದಲ್ಲಿ ಎಲ್ಲರೂ ನಮ್ಮ ಸಿನಿಮಾ ಬೆಳಗ್ಗೆ ಎಲ್ಲರಿಗಿಂತ ಬೇಗ ನೋಡ್ತಾರೆ, ನಮಗೆ ಆ ಅವಕಾಶ ಇಲ್ಲ ಎಂದು ತಮಿಳುನಾಡು ಪ್ರೇಕ್ಷಕರು ಬೇಸರಗೊಳ್ಳುತ್ತಿದ್ದರು. ಕೆಲವರು ಬೆಂಗಳೂರಿಗೆ ಬಂದು ಬೆಳಗ್ಗೆ 6 ಗಂಟೆಗೆ ಸಿನಿಮಾ ನೋಡುವ ಪ್ರಯತ್ನ ಮಾಡುತ್ತಿದ್ದರು. ಆದರೆ ಈಗ ಆ ಸಮಸ್ಯೆ ಇಲ್ಲ ಎನ್ನುವಂತಾಗಿದೆ.

ತಮಿಳುನಾಡಿನಲ್ಲೇ ತಮಿಳು ಸಿನಿಮಾ ಪ್ರದರ್ಶನ 9 ಗಂಟೆಗೆ ಶುರುವಾಗುತ್ತೆ. ಕರ್ನಾಟಕದಲ್ಲಿ ಬೆಳಗ್ಗೆ 6 ಗಂಟೆಗೆ ಶೋ ಯಾಕೆ ? ಟಿಕೆಟ್ ದರ ಅಲ್ಲಿ 250 ರೂ. ಇದ್ದರೂ ಇಲ್ಲಿ 1000 ರೂ. ಯಾಕೆ ಎಂದು ಕೆಲವರು ಕೇಳುತ್ತಲೇ ಇದ್ದಾರೆ. ನಟ ವಿಜಯ್ ಸಿಎಂ ಆಗಿರುವುದರಿಂದ ತಮಿಳು ಚಿತ್ರರಂಗಕ್ಕೆ ಅನುಕೂಲವಾಗುತ್ತದೆ ಎಂದು ಕೆಲವರು ಭಾವಿಸಿದ್ದರು. ಸದ್ಯ ಸರ್ಕಾರ ಹೊಸ ನಿರ್ಧಾರಕ್ಕೆ ಚಿತ್ರರಂಗದವರು ಬೆಂಬಲ ಸೂಚಿಸಿದ್ದಾರೆ.

ಸರ್ಕಾರದ ಈ ನಿಯಮ ದೀಪಾವಳಿ ಸಂಭ್ರಮದಲ್ಲಿ ಬಿಡುಗಡೆ ಆಗುತ್ತಿರುವ ಚಿತ್ರಗಳಿಗೆ ಅನ್ವಯವಾಗಲಿದೆ. ಸೂರ್ಯ ನಟನೆಯ 'ಸೀನ್', ನಯನತಾರಾ ನಟನೆಯ 'ಮೂಕುಟ್ಟಿ ಅಮ್ಮನ್- 2' ಹಾಗೂ 'ರಾಮಾಯಣ' ಚಿತ್ರಗಳನ್ನು ತಮಿಳುನಾಡಿನಲ್ಲಿ ಬೆಳಗ್ಗೆ 6 ಗಂಟೆಗೆ ನೋಡಬಹುದು.