ದುನಿಯಾ ವಿಜಯ್ ನಿರ್ದೇಶನದಲ್ಲಿ ವಿನಯ್ ರಾಜ್‌ಕುಮಾರ್ ಹಾಗೂ ಮೋನಿಷಾ ನಟನೆಯ 'ಸಿಟಿಲೈಟ್ಸ್' ಸಿನಿಮಾ ಹಿಟ್ ಲಿಸ್ಟ್ ಸೇರಿತ್ತು. ಕಡಿಮೆ ಬಜೆಟ್ ಸಿನಿಮಾ ಆಗಿದ್ದರಿಂದ ಯಶಸ್ಸು ಸಿಕ್ಕಿತ್ತು. ವಿಜಯ್ ನಿರ್ದೇಶಕರಾಗಿ ಹ್ಯಾಟ್ರಿಕ್ ಬಾರಿಸಿದ್ದರು. ಇದೀ ಸಿನಿಮಾ ಓಟಿಟಿಗೆ ಬಂದಿದೆ.

ಪ್ರೈಂ ವೀಡಿಯೋದಲ್ಲಿ ಕ್ರೈಂ ಥ್ರಿಲ್ಲರ್ ಸಿನಿಮಾ ಸ್ಟ್ರೀಮಿಂಗ್ ಆಗ್ತಿದೆ. ವಿಕ್ರಮ್ ಆರ್ಯ ಜೊತೆ ಸಹ ನಿರ್ಮಾಪಕರಾಗಿ ವಿಜಯ್ ಸಿನಿಮಾ ತೆರೆಗೆ ತಂದಿದ್ದರು. 'ಸಲಗ' ಹಾಗೂ 'ಭೀಮ' ಬಳಿಕ ವಿಜಯ್ ಈ ಬಾರಿ ಸಂಪೂರ್ಣವಾಗಿ ತೆರೆಹಿಂದೆ ನಿಂತುಬಿಟ್ಟರು. ವಿನಯ್ ಜೊತೆ ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟಿದ್ದರು. ಬೆಂಗಳೂರು ಅದರಲ್ಲೂ ಮೆಜೆಸ್ಟಿಕ್‌ನ ರಾತ್ರಿ ಜೀವನವನ್ನು ಎಳೆ ಎಳೆಯಾಗಿ ತೆರೆಮೇಲೆ ತಂದಿದ್ದರು. 'ಪ್ರೇಮದ ಊರಲಿ' ಆರ್ಭಟದ ನಡುವೆ 'ಸಿಟಿಲೈಟ್ಸ್' ಚಿತ್ರಕ್ಕೆ ಕೊಂಚ ಹಿನ್ನಡೆ ಆಗಿದ್ದು ಸುಳ್ಳಲ್ಲ.

ಎರಡು ದಿನಗಳಿಂದ ವಿದೇಶಗಳಲ್ಲಿ ಇರುವ ಪ್ರೈಂ ವೀಡಿಯೋ ಚಂದಾದಾರರಿಗೆ 'ಸಿಟಿಲೈಟ್ಸ್' ಸಿನಿಮಾ ವೀಕ್ಷಣೆಗೆ ಸಿಕ್ಕಿತ್ತು. ಇದೀಗ ಭಾರತದಲ್ಲಿ ಕೂಡ ಸಿನಿಮಾ ರಿಲೀಸ್ ಆಗಿದೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಸಾಧ್ಯವಾಗದೇ ಇರುವವರು ಈಗ ಮನೆಯಲ್ಲೇ ಕೂತು ಸಿನಿಮಾ ನೋಡಬಹುದು.

ಉಮಾಶ್ರೀ, ಪುನೀತ್, ಬಿ. ಎಂ ಗಿರಿರಾಜ್ ಚಿತ್ರದ ತಾರಾಗಣದಲ್ಲಿದ್ದಾರೆ. ಸದ್ಯ ಪ್ರೈಂ ವೀಡಿಯೋದಲ್ಲಿ 'ಪ್ರೇಮದ ಊರಲಿ', 'ಮಾರ್ನಮಿ' ಹಾಗೂ 'ಹೆಗ್ಗಣ ಮುದ್ದು' ಸಿನಿಮಾಗಳು ಸ್ಟ್ರೀಮಿಂಗ್ ಆಗುತ್ತಿವೆ. ಆ ಪಟ್ಟಿಗೆ 'ಸಿಟಿಲೈಟ್ಸ್' ಕೂಡ ಸೇರಿಕೊಂಡಿದೆ. ವೀಕೆಂಡ್ ಕನ್ನಡ ಸಿನಿರಸಿಕರು ಈ ನಾಲ್ಕು ಸಿನಿಮಾಗಳನ್ನು ಮನೆಯಲ್ಲೇ ಕೂತು ನೋಡಬಹುದು.