ವಿನಯ್‌ ರಾಜ್‌ಕುಮಾರ್ ಹಾಗೂ ಮೋನಿಷಾ ನಟನೆಯ ಕ್ರೈಂ ಥ್ರಿಲ್ಲರ್ 'ಸಿಟಿಲೈಟ್ಸ್' ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಆರಂಭವಾಗಿದೆ. ಸರಿಯಾಗಿ ಎರಡು ತಿಂಗಳ ಹಿಂದೆ ತೆರೆಕಂಡಿದ್ದ ಸಿನಿಮಾ ಹಿಟ್ ಲಿಸ್ಟ್ ಸೇರಿತ್ತು. ದುನಿಯಾ ವಿಜಯ್ ನಿರ್ದೇಶನಕ್ಕೆ ಒಳ್ಳೆ ಅಂಕ ಸಿಕ್ಕಿತ್ತು. ಶಿವಸೇನಾ ಛಾಯಾಗ್ರಹಣ ಹಾಗೂ ಚರಣ್ ರಾಜ್ ಸಂಗೀತ ಚಿತ್ರಕ್ಕಿತ್ತು.

ಹಳ್ಳಿಯಿಂದ ಬೆಂಗಳೂರು ಮಹಾನಗರದಲ್ಲಿ ಬದುಕು ಕಟ್ಟಿಕೊಳ್ಳಲು ಬರುವ ಯುವಕ, ಯುವತಿಯ ಕಥೆ ಚಿತ್ರದಲ್ಲಿತ್ತು. ಬೆಂಗಳೂರಿನ ಕತ್ತಲಲೋಕದ ಕರಾಳತೆಯನ್ನು ಬಿಚ್ಚಿಡುತ್ತಲೇ ಹೊಸ ಪ್ರಪಂಚವನ್ನು ಚಿತ್ರದಲ್ಲಿ ದುನಿಯಾ ವಿಜಯ್ ಕಟ್ಟಿಕೊಟ್ಟಿದ್ದರು. ವಿನಯ್ ಹಾಗೂ ಮೊನಿಷಾ ನಟನೆ ಕೂಡ ಮೋಡಿ ಮಾಡಿತ್ತು. ಉಮಾಶ್ರೀ, ಬಿ. ಎಂ. ಗಿರಿರಾಜ್, ಪುನೀತ್ ಚಿತ್ರದ ತಾರಾಗಣದಲ್ಲಿದ್ದರು.

ವಿಕ್ರಮ್ ಆರ್ಯ ಎಂಬುವವರ ಜೊತೆಗೂಡಿ ಸ್ವತಃ ದುನಿಯಾ ವಿಜಯ್ ಈ ಸಿನಿಮಾ ನಿರ್ಮಿಸಿದ್ದರು. ಮಾಸ್ತಿ ಸಂಭಾಷಣೆ ಚಿತ್ರಕ್ಕಿತ್ತು. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಸಿನಿಮಾ ವಿತರಣೆ ಮಾಡಿತ್ತು. ಆಹಾ ಓಹೋ ಎನ್ನುವ ಕಲೆಕ್ಷನ್ ಮಾಡದೇ ಇದ್ದರೂ 10 ಕೋಟಿ ರೂ.ಗೂ ಹೆಚ್ಚು ಗಳಿಕೆ ಕಂಡಿತ್ತು. ಮಾಸ್ ಪ್ರೇಕ್ಷಕರಿಗೆ 'ಸಿಟಿಲೈಟ್ಸ್' ಸಿನಿಮಾ ಇಷ್ಟವಾಗಿತ್ತು. ಸದ್ಯ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಆದರೆ ವಿದೇಶದಲ್ಲಿರುವ ಚಂದಾದಾರರು ಸದ್ಯಕ್ಕೆ ಹಣ ಪಾವತಿಸಿ ಸಿನಿಮಾ ನೋಡಲು ಅವಕಾಶ ಇದೆ. ಭಾರತದಲ್ಲಿ ಶೀಘ್ರದಲ್ಲೇ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ.

'ಸಲಗ' ಹಾಗೂ 'ಭೀಮ' ಸಿನಿಮಾಗಳನ್ನು ನಿರ್ದೇಶಿಸಿ ನಟಿಸಿ ಗೆದ್ದಿದ್ದ ದುನಿಯಾ ವಿಜಯ್ ಮೂರನೇ ಚಿತ್ರಕ್ಕೆ ಆಕ್ಷನ್ ಕಟ್ ಮಾತ್ರ ಹೇಳಿದ್ದರು. ಆದರೆ ತಮ್ಮದೇ ಟೆಂಪ್ಲೆಟ್‌ನಲ್ಲಿ ಮೆಜೆಸ್ಟಿಕ್ ಸುತ್ತಮುತ್ತಲ ಭಾಗದ ರಾತ್ರಿ ಜೀವನದ ಕಥೆಯನ್ನು ಹೇಳಿದ್ದರು. ಅದಕ್ಕೆ ಚರಣ್ ರಾಜ್ ಸಂಗೀತದ ಬಲ ಸಿಕ್ಕಿ 'ಸಿಟಿಲೈಟ್ಸ್' ಜೋರಾಗಿ ಬೆಳಗಿತ್ತು.