ತಮಿಳುನಾಡಿನ ಟಿವಿಕೆ ಪಕ್ಷದ ಹಿರಿಯ ನಾಯಕ ಹಾಗೂ ಕೊಳತ್ತೂರು ಕ್ಷೇತ್ರದ ಶಾಸಕ ವಿ.ಎಸ್. ಬಾಬು ನಿಧನರಾಗಿದ್ದಾರೆ. ನಿನ್ನೆ(ನವೆಂಬರ್ 20) ಚೆನ್ನೈನಲ್ಲಿ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ವಿಧಿವಿಧನಗಳಲ್ಲಿ ಸಿಎಂ ವಿಜಯ್ ಸೇರಿದಂತೆ ಹಲವರು ಭಾಗಿ ಆಗಿದ್ದರು. ಅಂತಿಮಯಾತ್ರೆ ಆರಂಭವಾದಾಗ ಬಾಬು ಅವರ ಪಾರ್ಥೀವ ಶರೀರ ಹೊತ್ತು ಸಾಗಲು ಸಿಎಂ ವಿಜಯ್ ಹೆಗಲು ಕೊಟ್ಟರು.

ಚೆನ್ನೈನ ಪೆರಂಬೂರಿನಲ್ಲಿರುವ ಬಾಬು ಅವರ ನಿವಾಸಕ್ಕೆ ತೆರಳಿ ಸಿಎಂ ವಿಜಯ್, ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಿದರು. ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ವಿ.ಎಸ್. ಬಾಬು ಅಂತಿಮಯಾತ್ರೆ ಶುರುವಾಯಿತು. ಈ ವೇಳೆ ಸಿಎಂ ವಿಜಯ್ ತಮ್ಮ ಪಾದರಕ್ಷೆಗಳನ್ನು ಬದಿಗಿಟ್ಟು, ಇತರ ಮೂವರೊಂದಿಗೆ ಸೇರಿ ಬಾಬು ಅವರ ಪಾರ್ಥಿವ ಶರೀರ ಇದ್ದ ಚಟ್ಟವನ್ನು ಹೆಗಲ ಮೇಲೆ ಹೊತ್ತುಕೊಂಡು ವಾಹನದವರೆಗೆ ಸಾಗಿದರು.

ಅಂತಿಮಯಾತ್ರೆಯುದ್ದಕ್ಕೂ ಸುಮಾರು 2.3 ಕಿ.ಮೀ ಬರಿಗಾಲಿನಲ್ಲಿ ಸಿಎಂ ವಿಜಯ್ ನಡೆದು ಸ್ಮಶಾನಕ್ಕೆ ತೆರಳಿದರು. 75 ವರ್ಷದ ವಿ.ಎಸ್. ಬಾಬು ನವೆಂಬರ್ 19 ಕೊನೆಯುಸಿರೆಳೆದಿದ್ದರು. ಕೆಲ ದಿನಗಳಿಂದ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿತ್ತು. ಗುರುವಾರ ಹೃದಯಾಘಾತ ಸಂಭವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು.

2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ವಿ.ಎಸ್. ಬಾಬು ಕೊಳತ್ತೂರು ಕ್ಷೇತ್ರದಿಂದ ಟಿವಿಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಅವರನ್ನು 8,795 ಮತಗಳ ಅಂತರದಿಂದ ಸೋಲಿಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು. ಇದೀಗ ಬಾಬು ಅಗಲಿಕೆ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರಿಗೆ ದೊಡ್ಡ ಆಘಾತ ನೀಡಿದೆ.

ವಿ.ಎಸ್. ಬಾಬು ಅವರಿಗೆ ಗೌರವ ಸೂಚಕವಾಗಿ ಟಿವಿಕೆ ಪಕ್ಷ ತಮಿಳುನಾಡಿನಾದ್ಯಂತ ಏಳು ದಿನಗಳ ಶೋಕಾಚರಣೆ ಆಚರಲು ಮುಂದಾಗಿದೆ. ಇನ್ನು ಒಬ್ಬ ಮುಖ್ಯಮಂತ್ರಿ ತಮ್ಮ ಪಕ್ಷದ ಕಾರ್ಯಕರ್ತನ ಅಂತಿಮಯಾತ್ರೆಯಲ್ಲಿ ಭಾಗಿ ಆಗಿದ್ದು ಗೌರವ ತೋರಿದ ನಡೆಗೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗುತ್ತಿದೆ.