ತಮಿಳು ನಟ ವಿಜಯ್ ರಾಜಕೀಯರಂಗದಲ್ಲಿ ಭರ್ಜರಿ ಸಕ್ಸಸ್ ಕಂಡಿದ್ದಾರೆ. ಹೊಸ ಪಕ್ಷ ಕಟ್ಟಿ ಮೊದಲ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿ ತಮಿಳುನಾಡು ಸಿಎಂ ಪಟ್ಟಕ್ಕೇರಿದ್ದಾರೆ. 'ಜನನಾಯಗನ್' ವಿಜಯ್ ನಟಿಸಿದ್ದ ಕೊನೆಯ ಸಿನಿಮಾ. ಇದೀಗ ಮತ್ತೆ ಬಣ್ಣ ಹಚ್ಚಲು ದಳಪತಿ ಮುಂದಾಗಿದ್ದಾರೆ.
ಸಂಪೂರ್ಣ ರಾಜಕೀಯರಂಗದಲ್ಲಿ ಗುರ್ತಿಸಿಕೊಂಡಿರುವ ವಿಜಯ್ ಸಿನಿಮಾಗಳಿಗೆ ಬ್ರೇಕ್ ಹಾಕಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಪೊಲಿಟಿಕಲ್ ಎಂಟ್ರಿ ಬಗ್ಗೆ ತೆರೆಮರೆಯಲ್ಲಿ ಕಸರತ್ತು ನಡೆಸಿದ್ದರು. ಅದಕ್ಕಾಗಿಯೇ 'ಜನನಾಯಗನ್' ಚಿತ್ರವನ್ನು ಬಳಸಿಕೊಂಡಿದ್ದರು. ಆದರೆ ಚುನಾವಣೆಗೂ ಮುನ್ನ ಸಿನಿಮಾ ಲೀಕ್ ಆಗಿ ಎಡವಟ್ಟಾಗಿತ್ತು. ಆದರೆ ಇದೇ ಕೊನೆ ಸಿನಿಮಾ ಎನ್ನಲಾಗ್ತಿದೆ. ಸದ್ಯ ವಿಜಯ್ ಸರ್ಕಾರಿ ಜಾಹೀರಾತಿಗಾಗಿ ಬಣ್ಣ ಹಚ್ಚಿ ನಟಿಸಲು ಮುಂದಾಗಿದ್ದಾರೆ.
ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹಾಗೂ ತಮಿಳುನಾಡು ಸರ್ಕಾರದ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಡಲು ಈ ಜಾಹೀರಾತು ಸಿದ್ಧವಾಗಲಿದೆ. ಗೌತಮ್ ವಾಸುದೇವ್ ಮೆನನ್ ನಿರ್ದೇಶನದಲ್ಲಿ ನವೆಂಬರ್ ಕೊನೆಗೆ ಎರಡು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ನಟ ವಿಜಯ್ ವಾಣಿಜ್ಯ ಉತ್ಪನ್ನಗಳ ಜಾಹೀರಾತಿನಲ್ಲಿ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಇದೀಗ ಸರ್ಕಾರಿ ಜಾಹೀರಾತಿಗಾಗಿ ಈ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ವಿಜಯ್ ನಟನೆಯ 'ಜನನಾಯಗನ್' ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಿಸಿತ್ತು. ನೂರಾರು ಕೋಟಿ ಬಂಡವಾಳದಲ್ಲಿ ಸಿನಿಮಾ ತಯಾರಾಗಿತ್ತು. ಸಂಕ್ರಾಂತಿಗೆ ಬರಬೇಕಿದ್ದ ಸಿನಿಮಾ ಏಳೆಂಟು ತಿಂಗಳು ತಡವಾಗಿ ಬಿಡುಗಡೆ ಆಗಿತ್ತು. ಅದಕ್ಕೂ ಮುನ್ನ ಸಂಪೂರ್ಣ ಸಿನಿಮಾ ಲೀಕ್ ಆಗಿತ್ತು. ಆದರೂ ತೆರೆಗೆ ಬಂದಾಗ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡಿದ್ದರು. ಮತ್ತೆ ನೆಚ್ಚಿನ ನಟನನ್ನು ಯಾವಾಗ ತೆರೆಮೇಲೆ ನೋಡ್ತೀವಿ ಎಂದು ಅಭಿಮಾನಿಗಳು ಕಾಯುವಂತಾಗಿದೆ.
ಚಿತ್ರರಂಗದ ಉತ್ತುಂಗದಲ್ಲಿ ಇದ್ದಾಗಲೇ ವಿಜಯ್ ರಾಜಕೀಯರಂಗ ಪ್ರವೇಶಿಸಿದ್ದರು. ಚಿತ್ರವೊಂದಕ್ಕೆ 200 ಕೋಟಿ ರೂ. ಸಂಭಾವನೆ ಕೇಳುವಮಟ್ಟಕ್ಕೆ ಅವರ ಸಿನಿಮಾಗಳು ಬಾಕ್ಸಾಫೀಸ್ ಕೊಳ್ಳೆ ಹೊಡೀತಿವೆ. ಆದರೂ ಅದೆಲ್ಲಾ ಬಿಟ್ಟು ಜನಸೇವೆಗೆ ರಾಜಕೀಯದ ಹಾದಿ ಹಿಡಿದರು. ಅದಕ್ಕಾಗಿ ಸಿನಿಮಾಗಳಿಂದ ದೂರಾಗಿದ್ದಾರೆ.