ತಮಿಳಿನ 'ಮೂಕುತ್ತಿ ಅಮ್ಮನ್'- 2 ಚಿತ್ರದಲ್ಲಿ ದುನಿಯಾ ವಿಜಯ್ ವಿಲನ್ ಆಗಿ ಅಬ್ಬರಿಸಿದ್ದಾರೆ. ನಯನತಾರಾ ಎದುರು ನಟಿಸಿ ಗಮನ ಸೆಳೆದಿದ್ದಾರೆ. ಆದರೆ ದುನಿಯಾ ವಿಜಯ್ ಬಗ್ಗೆ ತಮಿಳು ಹಾಸ್ಯನಟ, ಯೂಟ್ಯೂಬರ್, ಪತ್ರಕರ್ತ ಬಯಿಲ್ವಾನ್ ರಂಗನಾಥನ್ ಕಾಮೆಂಟ್ ವೈರಲ್ ಆಗ್ತಿದೆ. ಆತನ ವಿರುದ್ಧ ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಒಂದ್ಕಾಲದಲ್ಲಿ ಹಾಸ್ಯ ಪಾತ್ರಗಳಲ್ಲಿ ನಟಿಸುತ್ತಿದ್ದ ಬಯಿಲ್ವಾನ್ ರಂಗನಾಥನ್ ಈಗ ಸಿನಿಮಾ ವಿಮರ್ಶೆ ಮಾಡುತ್ತಾ, ಚಿತ್ರರಂಗದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾ ಸುದ್ದಿ ಆಗುತ್ತಿದ್ದಾರೆ. ವಿವಾದಾತ್ಮಕ ಹೇಳಿಕೆಗಳಿಂದ ಪ್ರಚಾರ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. 'ಮೂಕುತ್ತಿ ಅಮ್ಮನ್'- 2 ಚಿತ್ರದಲ್ಲಿ ನಟಿಸಿರುವ ವಿಜಯ್ ಬಗ್ಗೆ ಬಾಡಿಶೇಮಿಂಗ್ ಮಾಡಿದ್ದಾರೆ. ನೋಡಲು ಹಂದಿ ತರ ಇದ್ದಾನೆ, ನಮ್ಮ ಯೋಗಿ ಬಾಬು ವಾಸಿ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.

'ಮೂಕುತ್ತಿ ಅಮ್ಮನ್'- 2 ಚಿತ್ರದ ಬಗ್ಗೆ CINEBUZZ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಬಯಿಲ್ವಾನ್ ರಂಗನಾಥನ್ ಮಾತನಾಡಿದ್ದಾರೆ. ಸಿನಿಮಾ ಬಗ್ಗೆ ಮಾತನಾಡುತ್ತಾ "ನಡುವೆ ಒಬ್ಬ ವಿಲನ್ ಹಂದಿ ತರ ಬರ್ತಾನೆ" ಎಂದು ಬಯಿಲ್ವಾನ್ ರಂಗನಾಥನ್ ಹೇಳಿದ್ದಾರೆ. ಕೂಡಲೇ ನಿರೂಪಕ ಬಾಡಿ ಶೇಮಿಂಗ್ ಮಾಡಬಾರದು ಎಂದು ತಾಕೀತು ಮಾಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೇ "ಬಾಡಿ ಶೇಮಿಂಗ್ ಅಲ್ಲ ಇದು, ನೋಡುವುದಕ್ಕೆ ಕಷ್ಟವಾಗುತ್ತೆ..ನಮ್ಮ ಹಾಸ್ಯನಟ ಯೋಗಿ ಬಾಬು ಎಷ್ಟೋ ವಾಸಿ" ಎಂದು ಬಯಿಲ್ವಾನ್ ರಂಗನಾಥನ್ ಹೇಳಿರುವುದು ಕನ್ನಡ ಸಿನಿರಸಿಕರ ಬೇಸರಕ್ಕೆ ಕಾರಣವಾಗಿದೆ.

ಯಾವುದೇ ಸಿನಿಮಾ ಅಥವಾ ನಟನ ಬಗ್ಗೆ ಏನು ಬೇಕಾದರೂ ಮಾತನಾಡಲಿ. ಆದರೆ ವ್ಯಕ್ತಿಯ ರೂಪ, ಮೈಕಟ್ಟಿನ ಬಗ್ಗೆ ಮಾತನಾಡುವುದು ಸರಿಯಲ್ಲ. ಕೂಡಲದೇ ಬಯಿಲ್ವಾನ್ ರಂಗನಾಥನ್ ತಮ್ಮ ಹೇಳಿಕೆಗೆ ಕ್ಷಮೆ ಕೋರಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 'ಮೂಕುತ್ತಿ ಅಮ್ಮನ್'- 2 ಚಿತ್ರದಲ್ಲಿ ಜನ್ಮ ಜನ್ಮಾಂತರದ ಕಥೆಯಿದೆ. ನಯನತಾರಾ ಮೂಕುತ್ತಿ ಅಮ್ಮನ್ ಹಾಗೂ ಕಾನ್ಸ್‌ಟೇಬಲ್ ಶಕ್ತಿ ಪಾತ್ರಗಳಲ್ಲಿ ನಟಿಸಿದ್ದು ರಣಧೀರನ್ ಹಾಗೂ ರುದ್ರ ಆಗಿ ದ್ವಿಪಾತ್ರದಲ್ಲಿ ದುನಿಯಾ ವಿಜಯ್ ಅಬ್ಬರಿಸಿದ್ದಾರೆ.

ಕನ್ನಡದಲ್ಲಿ ಹೀರೊ ಆಗಿ ನಿರ್ದೇಶಕರಾಗಿ ಸಕ್ಸಸ್ ಕಂಡಿರುವ ದುನಿಯಾ ವಿಜಯ್ ಈಗ ಪರಭಾಷೆಗಲ್ಲಿ ನೆಗೆಟಿವ್ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ತೆಲುಗಿನ 'ವೀರಸಿಂಹ ರೆಡ್ಡಿ' ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದರು. 'ಸ್ಲಂ ಡಾಗ್' ಎಂಬ ಮತ್ತೊಂದು ಚಿತ್ರದಲ್ಲಿ ನೆಗೆಟಿವ್ ರೋಲ್ ಮಾಡಿದ್ದಾರೆ. ನಡುವೆ 'ಮೂಕುತ್ತಿ ಅಮ್ಮನ್'- 2 ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.