ವೆಂಕಿ ಅಲ್ಲೂರಿ ನಿರ್ದೇಶನದ 'ವಿಶ್ವನಾಥ್ & ಸನ್ಸ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ. ಇತ್ತೀಚೆಗೆ ಓಟಿಟಿಗೆ ಬಂದ ಸಿನಿಮಾ ಮೊದಲ ವಾರವೇ ದಾಖಲೆ ಮಟ್ಟದಲ್ಲಿ ಸ್ಟ್ರೀಮಿಂಗ್ ಕಂಡಿದೆ. ಸಿನಿರಸಿಕರು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ತಮಿಳು ಜೊತೆಗೆ ನಾಲ್ಕು ಭಾಷೆಗಳಿಗೆ ಡಬ್ ಆಗಿ ಬಂದಿರುವುದರಿಂದ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ತಲುಪುತ್ತಿದೆ.
ಆಗಸ್ಟ್ 14ರಂದು ತೆರೆಗೆ ಬಂದಿದ್ದ 'ವಿಶ್ವನಾಥ್ & ಸನ್ಸ್' ಸಿನಿಮಾ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸದ್ದು ಮಾಡಿತ್ತು. 'ಕರುಪ್ಪು' ಹಿಟ್ ಬೆನ್ನಲ್ಲೇ ಸೂರ್ಯ ಖಾತೆಗೆ ಮತ್ತೊಂದು ಗೆಲುವು ದಾಖಲಾಗಿತ್ತು. ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಎಂಗೇಜಿಂಗ್ ಆಗಿ ಪ್ರೇಕ್ಷಕರ ಮನಗೆದ್ದಿತ್ತು. ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.
ಸೆಪ್ಟೆಂಬರ್ 11ರಂದು ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿತ್ತು. ಮೊದಲ ವೀಕೆಂಡ್‌ನಲ್ಲೇ 5.5 ಮಿಲಿಯನ್ ವೀವ್ಸ್ ಸಾಧಿಸಿದೆ. ಆ ಮೂಲಕ ಈ ವರ್ಷ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಿರುವ ಸೌತ್ ಸಿನಿಮಾಗಳಲ್ಲಿ ಮೊದಲ ಸ್ಥಾನಕ್ಕೇರಿದೆ. ಇನ್ನು ಭಾರತದಲ್ಲಿ ನಂ. 1 ಟ್ರೆಂಡಿಂಗ್‌ನಲ್ಲಿ ಸಿನಿಮಾ ಸದ್ದು ಮಾಡ್ತಿದೆ. ಇನ್ನು ವಿಶ್ವದಾದ್ಯಂತ 3ನೇ ಸ್ಥಾನದಲ್ಲಿ 'ವಿಶ್ವನಾಥ್ & ಸನ್ಸ್' ಸಿನಿಮಾ ದರ್ಬಾರ್ ನಡೆಸುತ್ತಿದೆ. ಸಾಮಾನ್ಯವಾಗಿ ಚಿತ್ರಮಂದಿರಗಳಲ್ಲಿ ಹಿಟ್ ಆಗುವ ಸಿನಿಮಾಗಳು ಓಟಿಟಿಯಲ್ಲಿ ಸದ್ದು ಮಾಡಲ್ಲ. ಆದರೆ ಕೆಲ ಸಿನಿಮಾಗಳು ಆ ಮಾತನ್ನು ಸುಳ್ಳಾಗಿಸುತ್ತವೆ.
ಎಂಗೇಜಿಂಗ್ ಆಗಿರುವುದರ ಜೊತೆಗೆ ಸಂಬಂಧಗಳ ಕಥೆ ಫ್ಯಾಮಿಲಿ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ಇದೇ ಕಾರಣಕ್ಕೆ ಮಹಿಳಾ ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಓಟಿಟಿಯಲ್ಲಿ ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಸಿಂಪಲ್ ಕಥೆಯನ್ನು ಸೊಗಸಾಗಿ ತೆರೆಗೆ ತಂದು ಚಿತ್ರತಂಡ ಗೆದ್ದಿದೆ. ಟೈಟಲ್ ರೋಲ್‌ನಲ್ಲಿ ಸೂರ್ಯ, ಚೆಲ್ಲು ಚೆಲ್ಲು ಹುಡುಗಿಯಾಗಿ ಮಮಿತಾ ಬೈಜು ನಟನೆ ಚಿತ್ರದ ಜೀವಾಳ. ಇನ್ನು ರಾಧಿಕಾ ಶರತ್‌ಕುಮಾರ್, ರವೀನಾ ಟಂಡನ್ ಪ್ರಧಾನ ಪಾತ್ರಗಳಲ್ಲಿ ನಟಿಸಿ ಚಿತ್ರಕ್ಕೆ ಬಲ ತುಂಬಿದ್ದಾರೆ. ಜಿ. ವಿ ಪ್ರಕಾಶ್ ಕುಮಾರ್ ಸಂಗೀತ ಕೂಡ ಚಿತ್ರಕ್ಕೆ ಪ್ಲಸ್ ಆಗಿದೆ.