ವೆಂಕಿ ಅಟ್ಲೂರಿ ನಿರ್ದೇಶನದಲ್ಲಿ ಸೂರ್ಯ ನಟನೆಯ 'ವಿಶ್ವನಾಥ್ & ಸನ್ಸ್' ಆಗಸ್ಟ್ 14ಕ್ಕೆ ತೆರೆಕಂಡು ಹಿಟ್ ಆಗಿತ್ತು. 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ರೊಮ್ಯಾಂಟಿಕ್ ಫ್ಯಾಮಿಲಿ ಡ್ರಾಮ್ ಸದ್ದು ಮಾಡಿತ್ತು. ಇದೀಗ ಸಿನಿಮಾ ಓಟಿಟಿಗೆ ಬರಲು ಸಜ್ಜಾಗಿದೆ.

'ಕರುಪ್ಪು' ಸಿನಿಮಾ ಸಕ್ಸಸ್ ಬೆನ್ನಲ್ಲೇ ಸೂರ್ಯ ನಟನೆಯ ಮತ್ತೊಂದು ಸಿನಿಮಾ ಕೂಡ ಹಿಟ್ ಆಗಿ ಗಮನ ಸೆಳೆದಿತ್ತು. ದಶಕದ ಬಳಿಕ ಅವರ ಚಿತ್ರ ಹಿಟ್ ಟಾಕ್ ಪಡೆದುಕೊಂಡಿದೆ. ಶ್ರೀಕರ ಸ್ಟುಡಿಯೋಸ್, ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಹಾಗೂ ಫಾರ್ಚೂನ್ ಫೋರ್ ಸಿನಿಮಾಸ್ ಸಂಸ್ಥೆಗಳು ಜಂಟಿಯಾಗಿ 'ವಿಶ್ವನಾಥ್ & ಸನ್ಸ್'ಈ ಚಿತ್ರವನ್ನು ತೆರೆಗೆ ತಂದಿವೆ. ಸೆಪ್ಟೆಂಬರ್ 11ಕ್ಕೆ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ವೀಕ್ಷಣೆಗೆ ಸಿಗಲಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ.

ಮಮಿತಾ ಬೈಜು, ರಾಧಿಕಾ ಶರತ್‌ಕುಮಾರ್, ರವೀನಾ ಟಂಡನ್, ನಾಸರ್ ಸೇರಿದಂತೆ ದೊಡ್ಡ ತಾರಗಣ 'ವಿಶ್ವನಾಥ್ & ಸನ್ಸ್' ಚಿತ್ರದಲ್ಲಿದೆ. ಜಿ. ವಿ ಪ್ರಕಾಶ್ ಕುಮಾರ್ ಸಂಗೀತ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಎನಿಸಿಕೊಂಡಿದೆ.

ಉದ್ಯಮಿ ಸಂಜಯ್ ವಿಶ್ವನಾಥ್ (ಸೂರ್ಯ) ಪಿಸ್ತೂಲ್ ಶೂಟರ್ ಆಗಿ ಕೂಡ ಗುರ್ತಿಸಿಕೊಂಡಿರುತ್ತಾನೆ. 40 ವರ್ಷ ವಯಸ್ಸಾದ್ರು, ಆತ ಒಂಟಿಯಾಗಿರುತ್ತಾನೆ. ತಾಯಿ (ರಾಧಿಕಾ) ಅವರನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಲೇ ಇರ್ತಾರೆ. ಸಂಜಯ್ ತನ್ನ ತಾಯಿಗಾಗಿ ಸರೊಗಸಿ ಪದ್ಧತಿ ಮೂಲಕ ಮಗನಿಗೆ ಜನ್ಮ ನೀಡುತ್ತಾನೆ. ಮುಂದೆ ಏನೆಲ್ಲಾ ಆಗುತ್ತೆ? ಮ್ಯಾಡಿ (ಮಮಿತಾ ಬೈಜು) ಆತನ ಜೀವನಕ್ಕೆ ಬಂದಮೇಲೆ ಕಥೆ ಏನೆಲ್ಲಾ ತಿರುವು ಪಡೆದುಕೊಳ್ಳುತ್ತದೆ ಎನ್ನುವುದು ಚಿತ್ರದ ಇನ್ನುಳಿದ ಕಥೆ.