ಇತ್ತೀಚೆಗೆ ಮದುವೆಗೆ ಬಂಧಕ್ಕೆ ವ್ಯಾರಂಟಿ ಕಮ್ಮಿ ಆಗ್ತಿದೆ. ಸಣ್ಣ ಸಣ್ಣ ಕಾರಣಕ್ಕೆ ಡಿವೋರ್ಸ್ ಎನ್ನುವಂತಾಗಿದೆ. ಸೆಲೆಬ್ರೆಟಿಗಳ ಡಿವೋರ್ಸ್ ಸುದ್ದಿ ಪದೇ ಪದೆ ಸದ್ದು ಮಾಡ್ತಿದ್ದು ಬ್ರೇಕಪ್ ಸರ್ವೇ ಸಾಮಾನ್ಯ ಎನ್ನುವಂತಾಗಿಬಿಟ್ಟಿದೆ. ಆದರೆ ಕೆಲವರು ಮಾತ್ರ ತಮ್ಮ ರಿಲೇಷನ್‌ಶಿಪ್ ಅನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುತ್ತಲೇ ಇದ್ದಾರೆ. ಇತ್ತೀಚೆಗೆ ನಟ ಸೂರ್ಯ ಹಾಗೂ ನಟಿ ಜ್ಯೋತಿಕಾ ದಂಪತಿ ತಮ್ಮ 20ನೇ ವಿವಾಹ ವಾರ್ಷಿಕೋತ್ಸವವನ್ನು ವಿಭಿನ್ನವಾಗಿ ಆಚರಿಸಿದ್ದಾರೆ.

ಕ್ರಿಶ್ಚಿಯನ್ ಶೈಲಿಯಲ್ಲಿ ನಟ ಸೂರ್ಯ ಹಾಗೂ ನಟಿ ಜ್ಯೋತಿಕಾ ಮತ್ತೆ ಮದುವೆಯಾಗಿದ್ದಾರೆ. ಆ ಮೂಲಕ ತಮ್ಮಿಬ್ಬರ ಮದುವೆ ಪ್ರಮಾಣವಚನವನ್ನು ನವೀಕರಿಸಿಕೊಂಡಿದ್ದಾರೆ. ಈ ವಿಶೇಷ ಮದುವೆ ಸಮಾರಂಭಕ್ಕೆ ಮಕ್ಕಳು ದೇವ್ ಹಾಗೂ ದಿಯಾ ಜೊತೆಗೆ ಸೂರ್ಯ ಸಹೋದರ ಕಾರ್ತಿ ಕೂಡ ಸಾಕ್ಷಿ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿವಾಹ ವಾರ್ಷಿಕೋತ್ಸವ ಸಂಭ್ರಮದ ವೀಡಿಯೋವನ್ನು ಇಬ್ಬರೂ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ವೀಡಿಯೋ ನೋಡಿ ಖುಷಿಯಾಗಿ "ವಾವ್ ಕ್ಯೂಟ್" ಜೋಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವೇ ಗಂಟೆಗಳಲ್ಲಿ ಲಕ್ಷ ಲಕ್ಷ ವೀವ್ಸ್ ಲೈಕ್ಸ್ ಗಿಟ್ಟಿಸಿ ವೀಡಿಯೋ ವೈರಲ್ ಆಗ್ತಿದೆ.

ಸೂರ್ಯ ಹಾಗೂ ಜ್ಯೋತಿಕಾ ಪರಸ್ಪರ ಪ್ರೀತಿಸಿ ಸೆಪ್ಟೆಂಬರ್ 11, 2006ರಂದು ಮದುವೆ ಆಗಿದ್ದರು. 'ಪೂವೆಲ್ಲಾಂ ಕೆಟ್ಟುಪ್ಪಾರ್' ಸಿನಿಮಾ ಸೆಟ್‌ನಲ್ಲಿ ಇಬ್ಬರ ಭೇಟಿ ಆಗಿದ್ದರು. ಹೀಗೆ ಶುರುವಾದ ಪರಿಚಯ ಬಳಿಕ ಸ್ನೇಹವಾಗಿ ಕೊನೆಗೆ ಪ್ರೀತಿಗೆ ತಿರುಗಿತ್ತು. ನಂತರ ಪೋಷಕರ ಒಪ್ಪಿಗೆ ಪಡೆದು ಜೋಡಿ ಮದುವೆ ಆಗಿದ್ದರು. ಪತಿ- ಪತ್ನಿ ಇಬ್ಬರೂ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುತ್ತಲೇ ಬರ್ತಿದ್ದಾರೆ. ಮದುವೆ ಬಳಿಕ ಕೂಡ ಜ್ಯೋತಿಕಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಿರ್ಮಾಪಕಿಯಾಗಿ ಕೂಡ ಗುರ್ತಿಸಿಕೊಂಡಿದ್ದಾರೆ. ಅದಕ್ಕೆ ಸೂರ್ಯ ಬೆಂಬಲವಾಗಿ ನಿಂತಿದ್ದಾರೆ.

"ನಮ್ಮ 20 ವರ್ಷಗಳ ಪ್ರೀತಿ ಹಾಗೂ ಜಗಳದ (ಪ್ರೀತಿಯ ಸಂಘರ್ಷದ) ಸಂಭ್ರಮವಿದು.. ನಮ್ಮ ಬಾಂಧವ್ಯದ ನವೀಕರಣ. ಇದು ಪರಿಪೂರ್ಣ ದಾಂಪತ್ಯದ ಸಂಭ್ರಮವಲ್ಲ. ಬದಲಿಗೆ, ಇದು ಅಪರಿಪೂರ್ಣತೆಗಳು, ಹೊಂದಾಣಿಕೆಗಳು, ಪರಸ್ಪರ ತಿಳುವಳಿಕೆ, ತ್ಯಾಗಗಳು ಮತ್ತು ನಿಸ್ವಾರ್ಥ ಪ್ರೀತಿಯ ಸಂಭ್ರಮ. ಇದು "ನಮ್ಮ" ಸಂಭ್ರಮ — ಅಂದರೆ, ಒಬ್ಬರಿಗೊಬ್ಬರು ನಾವು ರೂಪಿಸಿಕೊಂಡಿರುವ ವ್ಯಕ್ತಿತ್ವಗಳ ಸಂಭ್ರಮ" ಎಂದು ನಟಿ ಜ್ಯೋತಿಕಾ ಬರೆದುಕೊಂಡಿದ್ದಾರೆ.

ನಾನು ಸಂತೋಷವಾಗಿರಲು ಪ್ರತಿಜ್ಞೆ ಮಾಡುತ್ತೇನೆ, ನಾನು ಜೀವನವನ್ನು ಸಂಭ್ರಮಿಸಲು ಪ್ರತಿಜ್ಞೆ ಮಾಡುತ್ತೇನೆ, ನಾನು ಎಂದಿಗೂ ದೂರು ಹೇಳದಿರಲು ಪ್ರತಿಜ್ಞೆ ಮಾಡುತ್ತೇನೆ, ನಾನು ಕೃತಜ್ಞತೆಯಿಂದಿರಲು ಪ್ರತಿಜ್ಞೆ ಮಾಡುತ್ತೇನೆ, ನಾನು ಆರೋಗ್ಯವಾಗಿರಲು ಪ್ರತಿಜ್ಞೆ ಮಾಡುತ್ತೇನೆ, ನಾನು ಅತ್ಯುತ್ತಮ ತಾಯಿಯಾಗಿರಲು ಪ್ರತಿಜ್ಞೆ ಮಾಡುತ್ತೇನೆ, ನನ್ನ ಸೂರ್ಯಾ, ನಾನು ಯಾವಾಗಲೂ ಆ 'ಅಪರಿಪೂರ್ಣ' ಪತ್ನಿಯಾಗಿಯೇ ಉಳಿಯಲು ಪ್ರತಿಜ್ಞೆ ಮಾಡುತ್ತೇನೆ, ನಮ್ಮ ಸ್ನೇಹವನ್ನು ಎಲ್ಲಕ್ಕಿಂತ ಹೆಚ್ಚಾಗಿ ಗೌರವಿಸಲು ಮತ್ತು ಪ್ರೀತಿಸಲು ನಾನು ಪ್ರತಿಜ್ಞೆ ಮಾಡುತ್ತೇನೆ ಎಂದು ಇಬ್ಬರು ತಮ್ಮ ಮದುವೆಯ ಪ್ರತಿಜ್ಞೆ ಸ್ವೀಕರಿಸಿದ್ದಾರೆ.

ಸೂರ್ಯ ಹಿಂದೂ ಸಮುದಾಯದವರು. ಇನ್ನು ಜ್ಯೋತಿಕಾ ತಂದೆ ಪಂಜಾಬಿ ಹಿಂದೂ ಹಾಗೂ ತಾಯಿ ಮುಸ್ಲಿಂ ಸಮುದಾಯದವರು. ಇಪ್ಪತ್ತು ವರ್ಷಗಳ ಹಿಂದೆ ಹಿಂದೂ ಸಂಪ್ರದಾಯದಂತೆ ಸೂರ್ಯ- ಜ್ಯೋತಿಕಾ ಮದುವೆ ನಡೆದಿತ್ತು. ಈಗ ಯಾಕೆ ಕ್ರಿಶ್ಚಿಯನ್ ಶೈಲಿಯಲ್ಲಿ ಮದುವೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.