ಡಾ.ವಿಷ್ಣುವರ್ಧನ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗ್ತಿದೆ. ಸೆಪ್ಟೆಂಬರ್ 27ರಂದು ನಂದಿ ಲಿಂಕ್ ಗ್ರೌಂಡ್‌ನಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 8ಗಂಟೆಯಿಂದ ರಾತ್ರಿ 10 ಗಂಟೆವರೆಗೂ ನಿರಂತರವಾಗಿ ಕಾರ್ಯಕ್ರಮ ನಡೆಯಲಿದೆ. ಪರಭಾಷಾ ತಾರೆಯರು ಕಾರ್ಯಕ್ರಮಕ್ಕೆ ಸಾಕ್ಷಿ ಆಗಲಿದ್ದಾರೆ. ದೈಹಿಕವಾಗಿ ದಾದಾ ಇಲ್ಲದೇ ಇದ್ದರೂ ಅಭಿಮಾನಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಸಂಪಾದಿಸಿಬಿಟ್ಟಿದ್ದಾರೆ.

ನೂರಾರು ಸಿನಿಮಾಗಳಲ್ಲಿ ತರಹೇವಾರಿ ಪಾತ್ರಗಳಲ್ಲಿ ನಟಿಸಿ ವಿಷ್ಣುವರ್ಧನ್ ಪ್ರೇಕ್ಷಕರ ಮನೆಗೆದ್ದಿದ್ದರು. ಕನ್ನಡ ಮಾತ್ರವಲ್ಲದೇ ಪರಭಾಷಾ ಸಿನಿಮಾಗಳಲ್ಲಿ ಕೂಡ ನಟಿಸಿದ್ದರು. ಸ್ಪುರದ್ರೂಪಿ ನಟ ತಮ್ಮ ಅಭಿನಯದ ಮೂಲಕ ಕೂಡ ಮ್ಯಾಜಿಕ್ ಮಾಡಿದ್ದರು. ಕಮಲ್ ಹಾಸನ್, ರಜನಿಕಾಂತ್, ಚಿರಂಜೀವಿ, ಮೊಮ್ಮುಟ್ಟಿ, ಮೋಹನ್ ಲಾಲ್ ರೀತಿಯ ದಿಗ್ಗಜರ ಸಾಲಿನಲ್ಲಿ ದಾದಾ ನಿಲ್ತಾರೆ. ವಿಷ್ಣು ತಮಿಳು ಚಿತ್ರರಂಗಕ್ಕೆ ಪರಿಚಿತರಾದಾಗ ಕಮಲ್ ಹಾಸನ್ ಸಹ ಭಯಬಿದ್ದಿದ್ದರು ಎಂದು ಹಿರಿಯ ನಟ ಸುಂದರ್ ರಾಜ್ ಹೇಳಿದ್ದಾರೆ.

ವಿಷ್ಣು ಆಪ್ತ ಬಳಗದಲ್ಲಿ ಸುಂದರ್ ರಾಜ್ ಗುರ್ತಿಸಿಕೊಂಡವರು. ಸಾಕಷ್ಟು ಸಿನಿಮಾಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಅಮೃತ ಮಹೋತ್ಸವ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಡೆದು ಕಾರ್ಯಕ್ರಮದಲ್ಲಿ ಅವರು ಮಾತನಾಡಿ ವಿಷ್ಣುವರ್ಧನ್ ಪ್ರತಿಭೆಯನ್ನು ಕೊಂಡಾಡಿದ್ದರು. "ನನ್ನ, ವಿಷ್ಣು ಸ್ನೇಹ 60 ವರ್ಷಗಳದ್ದು. ನಮ್ಮಿಬ್ಬರಿಗೂ ಚಿತ್ರರಂಗಕ್ಕೆ ಬರ್ತೀವಿ ಎಂದುಕೊಂಡಿರಲಿಲ್ಲ. ವಿಷ್ಣುಗೆ ಕಲಾ ಸಂಪತ್ತು ಇತ್ತು. ಯಾವುದೇ ಆಕ್ಟಿಂಗ್ ಇನ್ಸಿಟ್ಯೂಟ್ ಸೇರಿಕೊಳ್ಳದೇ ಪುಟ್ಟಣ್ಣ ಮಾಡಿದ ಆಡಿಷನ್‌ನಲ್ಲಿ ಗೆದ್ದು 'ನಾಗರಹಾವು' ಚಿತ್ರದ ರಾಮಾಚಾರಿ ಪಾತ್ರಕ್ಕೆ ವಿಷ್ಣು ಆಯ್ಕೆ ಆಗಿದ್ರು. ಅವತ್ತು ಸಾವಿರಾರು ಜನ ಅಲ್ಲಿಗೆ ಬಂದಿದ್ರು. ಅವಕಾಶ ಮಾತ್ರ ವಿಷ್ಣುವರ್ಧನ್‌ಗೆ ಸಿಕ್ಕಿತ್ತು" ಎಂದು ನೆನಪಿಸಿಕೊಂಡಿದ್ದಾರೆ.

ಕಮಲ್ ಹಾಸನ್, ಅಮಿತಾಬ್ ಬಚ್ಚನ್, ರಜನಿಕಾಂತ್ ಯಾರೇ ಆಗಿರಲಿ, ವಿಷ್ಣುವರ್ಧನ್ ಮಾತ್ರ ವಿಷ್ಣುವರ್ಧನ್ ಎಂದು ಸುಂದರ್ ರಾಜ್ ಹೇಳಿದ್ದಾರೆ. "ತಮಿಳು ಚಿತ್ರರಂಗಕ್ಕೆ ವಿಷ್ಣುವರ್ಧನ್ ಅವರನ್ನು ಬಾಲಚಂದರ್ ಪರಿಚಯಿಸ್ತಾರೆ. ಒಂದ್ಸಲ್ಲ ಕಮಲ್ ಹಾಸನ್ ಪತರಗುಟ್ಟುಬಿಡ್ತಾರೆ. ಅಲ್ಲ ವಿಷ್ಣು ಬಂದ್ರೆ ನಮ್ಮ ಜಾಗ ಖಾಲಿ ಆಗಿಬಿಡುತ್ತೇನೊ ಎನ್ನುವ ಭಯ ಬಂದಿತ್ತು. ಆದ್ರೆ ನಾವು ಕನ್ನಡಿಗರು ಸ್ವಾಭಿಮಾನಿಗಳು. ಅವ್ರನ್ನು ಉಳಿಸಿಕೊಂಡುಬಿಟ್ವಿ. ಅದಕ್ಕೆ ಅವ್ರು ಸಾಹಸಸಿಂಹ ಆದ್ರು. ಅವರಿಗೆ ಎಲ್ಲವೂ ಸಿಕ್ಕಿದೆ" ಎಂದು ಸುಂದರ್ ರಾಜ್ ವಿವರಿಸಿದ್ದಾರೆ.