ತಮಿಳು ನಟ ವಿಜಯ್ ಚುನಾವಣೆಯಲ್ಲಿ ಗೆದ್ದು ತಮಿಳುನಾಡು ಸಿಎಂ ಆಗಿ ಅಧಿಕಾರ ನಡೆಸುತ್ತಿದ್ದಾರೆ. ಹಾಗಾಗಿ ವಿಜಯ್ ಇನ್ಮುಂದೆ ಸಿನಿಮಾಗಳಲ್ಲಿ ನಟಿಸೋದು ಅನುಮಾನ ಎನ್ನುವಂತಾಗಿದೆ. ವಿಜಯ್ ಜಾಗ ತುಂಬಲು ಮಗ ಜೇಸನ್ ಸಂಜಯ್ ಚಿತ್ರರಂಗಕ್ಕೆ ಬಂದಿದ್ದಾರೆ. ಜೇಸನ್ ನಿರ್ದೇಶನದ ಚೊಚ್ಚಲ ಚಿತ್ರ 'ಸಿಗ್ಮಾ' ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರಕ್ಕೆ ಸುದೀಪ್ ಮಗಳು ಸಾನ್ವಿ ಹಾಡೊಂದನ್ನು ಹಾಡಿದ್ದಾರೆ.

'ಮಸ್ತ್‌ ಮಲೈಕಾ' ರೀತಿ ಸೂಪರ್ ಹಿಟ್ ಸಾಂಗ್ ಹಾಡಿ ಗಮನ ಸೆಳೆದ ಸಾನ್ವಿ ಈಗ 'ಸುಲೋಚನ' ಎಂಬ ಹಾಡಿಗೆ ದನಿಯಾಗಿದ್ದಾರೆ. 'ಸಿಗ್ಮಾ' ಸಿನಿಮಾದಲ್ಲಿ ಸಂದೀಪ್ ಕಿಶನ್ ಮತ್ತು ಫರಿಯಾ ಅಬ್ದುಲ್ಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎಸ್. ತಮನ್ ಸಂಗೀತ ಚಿತ್ರಕ್ಕಿದೆ. 'ಸಿಗ್ಮಾ' ಚಿತ್ರಕ್ಕಾಗಿ ಸಾನ್ವಿ ಹಾಡಿರುವ ಹಾಡು ಸಖತ್ ಸದ್ದು ಮಾಡ್ತಿದೆ. ಈ ಹಾಡಿನ ಮೂಲಕ ಸುದೀಪ್ ಮಗಳು ತಮಿಳು ಚಿತ್ರರಂಗ ಪ್ರವೇಶಿಸಿದಂತಾಗಿದೆ.

ಎಸ್. ತಮನ್ ಸಂಗೀತದ ಹಾಡಿಗೆ ಸೂಪರ್ ಸುಬು ಸಾಹಿತ್ಯ ಬರೆದಿದ್ದಾರೆ. ಬಹಳ ಮಾದಕವಾಗಿ ಸಾನ್ವಿ ಹಾಡು ಹಾಡಿದ್ದಾರೆ. ಸಿಕ್ಕಾಪಟ್ಟೆ ಬಿಂದಾಸ್ ಆಗಿ ಸಾಂಗ್ ಚಿತ್ರೀಕರಣ ಮಾಡಲಾಗಿದೆ. ಎರಡೂವರೆ ನಿಮಿಷದ ಡ್ಯಾನ್ಸ್ ನಂಬರ್ ಸಖತ್ ಮಜವಾಗಿದೆ. ಜುಲೈ ಕೊನೆ ವಾರದಲ್ಲೇ 'ಸಿಗ್ಮಾ' ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ತಡವಾಗಿತ್ತು. ಅಕ್ಟೋಬರ್ 2ರಂದು ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.