ಗ್ಲೋಬಲ್ ಮಟ್ಟದಲ್ಲಿ 'ರಾಮಾಯಣ' ಸಿನಿಮಾ ಬಿಡುಗಡೆಯಾಗಿ ಸದ್ದು ಮಾಡ್ತಿದೆ. ಪ್ರೇಕ್ಷಕರು, ವಿಮರ್ಶಕರಿಂದ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಮುಖ್ಯವಾಗಿ ವಿಷ್ಯುವಲ್ಸ್ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರ್ತಿದೆ. ಮೇಕಿಂಗ್, ಗ್ರಾಫಿಕ್ಸ್ ಹೈಲೆಟ್ ಆಗಿದೆ. ರಾವಣನಾಗಿ ಯಶ್ ಆರ್ಭಟವೂ ಜೋರಾಗಿದೆ ಎಂದು ಸಿನಿರಸಿಕರು ಕೊಂಡಾಡುತ್ತಿದ್ದಾರೆ. ಸದ್ಯ ಖ್ಯಾತ ನಿರ್ದೇಶಕ ಎಸ್‌. ಎಸ್ ರಾಜಮೌಳಿ ಈ ಸಿನಿಮಾ ನೋಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಜಕ್ಕಣ್ಣ ಟ್ವೀಟ್ ಮಾಡಿ 'ರಾಮಾಯಣ'... ಈ ಚಿತ್ರದ ಬೃಹತ್ ವ್ಯಾಪ್ತಿ ಹಾಗೂ ದೊಡ್ಡ ಪರದೆಯ ಮೇಲಿನ ದೃಶ್ಯಗಳು ನೋಡಲು ಅದ್ಭುತವಾಗಿವೆ. ರಾಮನ ಪಾತ್ರದಲ್ಲಿ ರಣಬೀರ್ - ವಿಶೇಷವಾಗಿ ವನವಾಸದ ನಂತರದ ದೃಶ್ಯಗಳಲ್ಲಿ ಶಾಂತ ಹಾಗೂ ಭವ್ಯವಾಗಿ ಕಾಣುತ್ತಾರೆ. ರಾವಣನ ಪಾತ್ರದಲ್ಲಿ ಯಶ್ ಭಯ ಹುಟ್ಟಿಸುವಂತಹ ಪ್ರಭಾವಶಾಲಿ ಅಭಿನಯ ನೀಡಿದ್ದಾರೆ, ಹಾಗೆಯೇ ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಅತ್ಯಂತ ಲಾವಣ್ಯಯುತವಾಗಿ ಮೂಡಿಬಂದಿದ್ದಾರೆ. ಕ್ಲೈಮ್ಯಾಕ್ಸ್ ಹಾಗೂ ಪ್ರೀ ಕ್ಲೈಮ್ಯಾಕ್ಸ್ ದೃಶ್ಯಗಳು ನನಗೆ ತುಂಬಾ ಇಷ್ಟವಾಯಿತು. ಇಂತಹ ಮಹತ್ವಾಕಾಂಕ್ಷೆಯ ಕಲ್ಪನೆಯನ್ನು ಅತ್ಯಂತ ಸುಂದರವಾಗಿ ತೆರೆಗೆ ತಂದಿದ್ದಕ್ಕಾಗಿ ನಮಿತ್ ಮಲ್ಹೋತ್ರಾ ಹಾಗೂ ನಿತೇಶ್ ತಿವಾರಿ ಸೇರಿ ಇಡೀ ತಂಡಕ್ಕೆ ಅಭಿನಂದನೆಗಳು ಎಂದು ರಾಜಮೌಳಿ ಟ್ವೀಟ್ ಮಾಡಿದ್ದಾರೆ.

ಈ ಹಿಂದೆ 'ರಾಮಾಯಣ' ಟ್ರೈಲರ್ ನೋಡಿ ರಾಜಮೌಳಿ ಪ್ರತಿಕ್ರಿಯಿಸಿದ್ದರು. ನಿನ್ನೆಯಷ್ಟೆ(ನವೆಂಬರ್ 5) ನಟ ಅಲ್ಲು ಅರ್ಜುನ್ ಟ್ವೀಟ್ ಮಾಡಿ 'ರಾಮಾಯಣ' ತಂಡಕ್ಕೆ ಶುಭ ಕೋರಿದ್ದರು. ವಿಜಯ್ ದೇವರಕೊಂಡ ಕೂಡ ಟ್ವೀಟ್ ಮಾಡಿದ್ದಾರೆ. 'ರಾಮಾಯಣ' ಚಿತ್ರತಂಡಕ್ಕೆ ಅದ್ಭುತ ಬಿಡುಗಡೆ ಮತ್ತು ಭಾರೀ ಗೆಲುವು ಸಿಗಲಿ. ಇದು ಭಾರತೀಯ ಚಿತ್ರರಂಗಕ್ಕೆ ಮತ್ತೊಂದು ದೊಡ್ಡ ಮೈಲಿಗಲ್ಲಾಗಲಿದೆ ಎಂದು ನಾನು ಬಲವಾಗಿ ನಂಬುತ್ತೇನೆ. ಇದು ನಮ್ಮ ಕಥೆಗಳು, ಸಂಸ್ಕೃತಿ ಮತ್ತು ಕಲ್ಪನಾಶಕ್ತಿಯನ್ನು ಪ್ರಪಂಚದಾದ್ಯಂತದ ಪ್ರೇಕ್ಷಕರಿಗೆ ತಲುಪಿಸಿ, ಜಾಗತಿಕ ಮಟ್ಟದಲ್ಲಿ ಛಾಪು ಮೂಡಿಸಲಿದೆ. ಈ ಚಿತ್ರಕ್ಕಾಗಿ ನಾನು ವೈಯಕ್ತಿಕವಾಗಿ ಬಹಳ ಉತ್ಸುಕನಾಗಿದ್ದೇನೆ. ರಣಬೀರ್, ಸಾಯಿ ಪಲ್ಲವಿ ಮತ್ತು ಯಶ್ ಅವರು ಬೆಳ್ಳಿಪರದೆಯ ಮೇಲೆ ಮಾಯಾಜಾಲ ಸೃಷ್ಟಿಸುವುದನ್ನು ನೋಡಲು ನಾನು ಕಾತರನಾಗಿದ್ದೇನೆ. ನಮಿತ್, ನಿತೇಶ್, ರಹಮಾನ್ ಎಲ್ಲರೂ ಸೇರಿ ಇತಿಹಾಸ ನಿರ್ಮಿಸಿ ಎಂದು ವಿಜಯ್ ದೇವರಕೊಂಡ ಬರೆದುಕೊಂಡಿದ್ದರು.

ಸದ್ಯ ರಾಜಮೌಳಿ 'ವಾರಣಾಸಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮಹೇಶ್ ಬಾಬು ಹೀರೊ ಆಗಿ ನಟಿಸುತ್ತಿರುವ ಸಿನಿಮಾ ಇದು. ಮುಂದಿನ ವರ್ಷ ಏಪ್ರಿಲ್ 7ರಂದು ಗ್ಲೋಬಲ್ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ಇದೊಂದು ಟೈಮ್ ಟ್ರಾವಲ್ ಸಿನಿಮಾ ಆಗಿದ್ದು 'ರಾಮಾಯಣ'ದ ಒಂದು ಎಪಿಸೋಡ್ ಕೂಡ ಇರಲಿದೆ. ಶ್ರೀರಾಮನಾಗಿ ಮಹೇಶ್ ಬಾಬು ನಟಿಸಿದ್ದಾರೆ. ಮೌಳಿ ನಿರ್ದೇಶನಲ್ಲಿ ಮಹೇಶ್ ಬಾಬು ಹೇಗೆ ರಾಮನ ಅವತಾರದಲ್ಲಿ ಕಾಣಿಸುತ್ತಾರೆ ಎನ್ನುವ ಕುತೂಹಲ ಮೂಡಿದೆ.