ನಮ್ಮನ್ನು ಬಿಟ್ಟುಹೋದ ಪೂರ್ವಜರನ್ನು, ಆಪ್ತರನ್ನು ಸ್ಮರಿಸಿ, ಗೌರವ ಸಲ್ಲಿಸುವ ಪವಿತ್ರ ಅವಧಿ ಪಿತೃಪಕ್ಷ. ಈ ವರ್ಷ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 10ರವರೆಗೆ ದಿನಗಳನ್ನು ಪಿತೃ ಕಾರ್ಯಗಳಿಗೆ ಮೀಸಲಿಡಲಾಗಿದೆ. ಈಗಾಗಲೇ ಸಾಕಷ್ಟು ಜನ ತಮ್ಮ ತಮ್ಮ ಮನೆಗಳಲ್ಲಿ ಪಿತೃಪಕ್ಷ ಪೂಜೆ ನೆರವೇರಿಸಿದ್ದಾರೆ. ನಟ ಸೃಜನ್ ಲೋಕೇಶ್ ಮನೆಯಲ್ಲಿ ಪ್ರತಿ ವರ್ಷ ಪಿತೃಪಕ್ಷ ಪೂಜೆ ವಿಶೇಷ.
ಸಾಮಾನ್ಯವಾಗಿ ನಮ್ಮ ಪೂರ್ವಜರು ಅಥವಾ ಆಪ್ತರನ್ನು ಸ್ಮರಿಸಿ ಪಿತೃಪಕ್ಷ ಪೂಜೆ ಮಾಡಲಾಗುತ್ತೆ. ಆದರೆ ಸೃಜನ್ ಲೋಕೇಶ್ ಮನೆಯಲ್ಲಿ ಪ್ರತಿ ಬಾರಿ ನಮ್ಮನ್ನಗಲಿದ ಚಿತ್ರರಂಗದ ಪ್ರಮುಖ ತಾರೆಯರ ಫೋಟೊಗಳನ್ನಿಟ್ಟು ಎಡೆ ಇಟ್ಟು ಪೂಜೆ ಸಲ್ಲಿಸುತ್ತಾರೆ. ಈ ವರ್ಷ ಕೂಡ ಅದು ಮುಂದುವರೆದಿದೆ. 'ನಮ್ಮ ಮನೆಯ ಪಕ್ಷ' ಎಂದು ಬರೆದು ಸೃಜನ್ ವೀಡಿಯೋ ಹಂಚಿಕೊಂಡಿದ್ದಾರೆ.
ಸೃಜನ್ ತಾತ, ಅಜ್ಜಿ ಜೊತೆಗೆ ತಂದೆ ದಿವಂಗತ ನಟ ಲೋಕೇಶ್ ಫೋಟೊ ಮಾತ್ರವಲ್ಲ ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಅಂಬರೀಶ್, ಪುನೀತ್ ರಾಜ್‌ಕುಮಾರ್, ಸಂಚಾರಿ ವಿಜಯ್, ಚಿರಂಜೀವಿ ಸರ್ಜಾ ಹೀಗೆ ಚಿತ್ರರಂಗದ ಸಾಕಷ್ಟು ಸಾಧಕರ ಫೋಟೊಗಳನ್ನು ಇಟ್ಟು ಪೂಜೆ ಮಾಡಿರುವುದನ್ನು ನೋಡಬಹುದು. ಅರ್ಚಕರನ್ನು ಕರೆಸಿ ಬಹಳ ಸಂಪ್ರದಾಯಬದ್ಧವಾಗಿ ಪೂಜೆ ನೆರವೇರಿಸಲಾಗಿದೆ. ಗಿರಿಜಾ ಲೋಕೇಶ್ ಸೇರಿ ಇಡೀ ಕುಟುಂಬ ಪೂಜೆಯಲ್ಲಿ ಭಾಗಿ ಆಗಿರುವುದನ್ನು ನೋಡಬಹುದು.
ಮೂರು ವರ್ಷಗಳ ಹಿಂದೆ ಇದೇ ರೀತಿ ಅವರ ಮನೆಯಲ್ಲಿ ಪಿತೃಪಕ್ಷ ಪೂಜೆ ಮಾಡಿ ವೀಡಿಯೋ ಹಂಚಿಕೊಂಡಿದ್ದರು. ಆದರೆ ವಿಷ್ಣುವರ್ಧನ್, ಶಂಕರ್ ನಾಗ್ ಫೋಟೊ ಯಾಕಿಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಗಿರಿಜಾ ಲೋಕೇಶ್ ತಮ್ಮ ಮನೆಗೆ ಆಪ್ತರಾಗಿದ್ದವರ ಫೋಟೊಗಳನ್ನು ಇಟ್ಟು ನಾವು ಪೂಜೆ ಮಾಡ್ತೀವಿ. 130 ಜನರ ಫೋಟೊ ಇಟ್ಟು ಪೂಜೆ ಮಾಡ್ತೀವಿ, ಅದಕ್ಕೆ ಗಂಟೆಗಟ್ಟಲೆ ಸಮಯ ಬೇಕು. ಇನ್ನು ಹೆಚ್ಚು ಜನರ ಫೋಟೊ ಇಡಲಿ ಮನೆಯಲ್ಲಿ ಜಾಗವಿಲ್ಲ. ಪಾರ್ವತಮ್ಮ ರಾಜ್‌ಕುಮಾರ್ ಸೇರಿದಂತೆ ಇನ್ನು ಕೆಲವರ ಫೋಟೊ ಇಟ್ಟಿಲ್ಲ. ಹಾಗಂತ ಅವರನ್ನು ಮರೆತಿದ್ದೀವಿ ಅಂತ ಅಲ್ಲ" ಎಂದಿದ್ದರು.