ಕನ್ನಡದ ನಟಿಯರು ಪರಭಾಷಾ ಸಿನಿಮಾಗಳಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ. 'ಕೆಜಿಎಫ್' ಚಿತ್ರದ ರೀನಾ ಆಗಿ ಮೋಡಿ ಮಾಡಿದ್ದ ಶ್ರೀನಿಧಿ ಶೆಟ್ಟಿ ಈಗ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ವಿಕ್ಟರಿ ವೆಂಕಟೇಶ್ ಜೊತೆ ನಟಿಸಿದ 'ಆದರ್ಶ ಕುಟುಂಬಂ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. 'ಕೆಜಿಎಫ್' ಸಿನಿಮಾ ಬಂದಮೇಲೆ ಕೂಡ ಮನೆಯಲ್ಲಿ ಬೈಗುಳ ತಪ್ಪಿಲ್ಲ ಎಂದು ಆಕೆ ಹೇಳಿರುವುದು ವೈರಲ್ ಆಗ್ತಿದೆ.
"ನಾಡಿಗೆ ರಾಜ ಆದರೂ ತಾಯಿಗೆ ಮಗನೇ" ಎನ್ನುವ ಮಾತಿದೆ. ಹೊರಗಡೆ ಏನೇ ನೇಮು ಫೇಮು ಇದ್ದರೂ ಸ್ಟಾರ್ ನಟ, ನಟಿ ಆಗಿದ್ದರೂ ಮನೆಯವರಿಗೆ ಆಪ್ತರಿಗೆ ಅದೆಲ್ಲಾ ಲೆಕ್ಕಕ್ಕೆ ಬರಲ್ಲ. ನಟ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದರೂ ಇವತ್ತಿಗೂ ಅಮ್ಮ ಅಂದ್ರೆ ಅದೇ ಭಯಭಕ್ತಿ ಎನ್ನುತ್ತಾರೆ. ಸಾಕಷ್ಟು ಜನ ಈ ಮಾತನ್ನು ಒಪ್ಪಿಕೊಳ್ಳುತ್ತಾರೆ. 'ಕೆಜಿಎಫ್' ಚಿತ್ರದಲ್ಲಿ ನಟಿಸಿದ ಮೇಲೂ ನನ್ನ ವೈಯಕ್ತಿಕ ಜೀವನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಮೊದಲು ಹೇಗೆ ಇದ್ನೋ ಈಗ್ಲೂ ಅದೇ ರೀತಿ ಇದ್ದೀನಿ ಎಂದು ಶ್ರೀನಿಧಿ ಶೆಟ್ಟಿ ಹೇಳಿದ್ದಾರೆ.
'ಕೆಜಿಎಫ್' ಸಿನಿಮಾ ನಿಮ್ಮ ವೈಯಕ್ತಿಕ ಜೀವನದ ಮೇಲೆ ಹೇಗೆ ಪರಿಣಾಮ ಬೀರಿತು ಅಂತ ಎಲ್ಲರೂ ಕೇಳ್ತಾರೆ. ನಾನು ಹಂಗೆ ಇದ್ದೀನಿ. ಹೆಸರು, ಹಣ ಬಂದಿದೆ. ಜನ ನನ್ನ ಗುರ್ತಿಸ್ತಾರೆ.. ಅವಕಾಶಗಳು ಬರ್ತಿವೆ. ಅದೆಲ್ಲಾ ವೃತ್ತಿ ಜೀವನದಲ್ಲಿ ಮಾತ್ರ. ವೈಯಕ್ತಿಕವಾಗಿ ಇವತ್ತಿಗೂ ಮನೆಯಲ್ಲಿ ಬೈಗುಳ ತಪ್ಪಿಲ್ಲ. ಆ ಕೆಲ್ಸ ಮಾಡು, ಈ ಕೆಲ್ಸ ಮಾಡು ಅಂತಾರೆ..'ಕೆಜಿಎಫ್' ಅಲ್ಲ ಯಾವ್ದೆ ಚಿತ್ರ ಬಂದ್ರು ನಾನು ಹಂಗೆ ಇರ್ತೀನಿ ಎಂದು ಶ್ರೀನಿಧಿ ಶೆಟ್ಟಿ ಹೇಳಿದ್ದಾರೆ.
ಕೆಲವೊಂದು ಪಾತ್ರಗಳು ಮಾಡಿ ಅಂದಾಗ, ಸಾಂಗ್ಸ್ ಮಾಡಿ ಅಂದಾಗ ನನಗೆ ಕಂಫರ್ಟ್ ಅನ್ನಿಸಿದ್ರೆ ಮಾತ್ರ ಮಾಡ್ತೀನಿ. ಇಲ್ಲ ಅಂದ್ರೆ ಇಲ್ಲ. ಕಂಫರ್ಟ್ ಇಲ್ಲದೇ ಮಾಡುವುದು ತಪ್ಪಾಗುತ್ತದೆ ಎಂದು ಶ್ರೀನಿಧಿ ಹೇಳಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಫ್ಯಾಮಿಲಿ ಎಂಟರ್‌ಟೈನರ್ 'ಆದರ್ಶ ಕುಟುಂಬಂ' ಚಿತ್ರದಲ್ಲಿ ವೆಂಕಿ ಜೋಡಿಯಾಗಿ ಶ್ರೀನಿಧಿ ಮಿಂಚಿದ್ದಾರೆ. ದಸರಾ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರಲಿದೆ.
ಮಾಡೆಲಿಂಗ್ ಮೂಲಕ ಚಿತ್ರರಂಗ ಪ್ರವೇಶಿಸಿದ ಶ್ರೀನಿಧಿ ಶೆಟ್ಟಿ 'ಕೆಜಿಎಫ್' ಸರಣಿ ಸಿನಿಮಾಗಳಲ್ಲಿ ನಟಿಸಿ ಗೆದ್ದರು. ಬಳಿಕ ದೊಡ್ಡ ಅವಕಾಶಗಳು ಸಿಗಲಿಲ್ಲ. ತಮಿಳಿನ 'ಕೋಬ್ರಾ' ಸಿನಿಮಾ ಫ್ಲಾಪ್ ಆಗಿತ್ತು. ತೆಲುಗಿನ 'ಹಿಟ್: ದಿ ಥರ್ಡ್ ಕೇಸ್' ಬಳಿಕ 'ತೆಲುಸು ಕದಾ' ಎನ್ನುವ ಮತ್ತೊಂದು ಚಿತ್ರದಲ್ಲಿ ನಟಿಸಿದರೂ ಪ್ರಯೋಜನವಾಗಲಿಲ್ಲ. ಅಂದಹಾಗೆ ರಾಮಾಯಣ ಚಿತ್ರದಲ್ಲಿ ಸೀತೆ ಪಾತ್ರಕ್ಕೆ ಶ್ರೀನಿಧಿ ಆಡಿಷನ್, ಲುಕ್ ಟೆಸ್ಟ್ ಮಾಡಿದ್ದರು.