ಸಿನಿಮಾ ಸೋತ್ರು ಗೆದ್ರು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ತಲೆ ಕೆಡಿಸಿಕೊಳ್ತಿಲ್ಲ. ಹೊಸ ಹೊಸ ಸಿನಿಮಾ ಘೋಷಣೆ ಮಾಡ್ತಾನೆ ಇದೆ. 'ಜನನಾಯಗನ್' ಹಾಗೂ 'ಟಾಕ್ಸಿಕ್' ಸಿನಿಮಾಗಳು ನಿರಾಸೆ ಅನುಭವಿಸಿದ ಬಳಿಕ ಕೂಡ ಮತ್ತೊಂದು ಹೊಸ ಚಿತ್ರವನ್ನು ಸಂಸ್ಥೆ ತೆರೆಗೆ ತರ್ತಿದೆ. ಬಹುನಿರೀಕ್ಷಿತ 'ಬೀರ್‌ಬಲ್ ಕೇಸ್- 2' ಪ್ರಾಜೆಕ್ಟ್ ಕುತೂಹಲ ಮೂಡಿಸಿದೆ.

ವಿಶಿಷ್ಟ ಚಿತ್ರಕಥೆ, ಚಾಣಾಕ್ಷ ತಿರುವುಗಳು ಹಾಗೂ ಕೌತುಕದ ಕೋರ್ಟ್‌ರೂಮ್ ಡ್ರಾಮಾ 'ಬೀರ್‌ಬಲ್ ಟ್ರೈಲಜಿ ಕೇಸ್ 1: ಫೈಂಡಿಂಗ್ ವಜ್ರಮುನಿ' ಸಿನಿಮಾ ಹಿಟ್ ಆಗಿತ್ತು. ಚಿತ್ರದ ಸೀಕ್ವೆಲ್‌ಗಾಗಿ ಬಹಳ ದಿನಗಳಿಂದ ಪ್ರೇಕ್ಷಕರು ಕಾಯುತ್ತಿದ್ದಾರೆ. ಆ ಕಥೆಯನ್ನು ಮುಂದುವರೆಸಲು ಶ್ರೀನಿ ಮನಸ್ಸು ಮಾಡಿದ್ದಾರೆ. ವಕೀಲ ಮಹೇಶ್ ದಾಸ್ ಆಗಿ ಮತ್ತೆ ಕಮಾಲ್ ಮಾಡಲು ಬರ್ತಿದ್ದಾರೆ. ಮತ್ತಷ್ಟು ಜಟಿಲ ಹಾಗೂ ಕಗ್ಗಂಟಾದ ನಿಗೂಢ ಪ್ರಕರಣವನ್ನು ಭೇದಿಸಲು ಮಹೇಶ್ ದಾಸ್ 'ಬೀರ್‌ಬಲ್ ಟ್ರೈಲಜಿ ಕೇಸ್ -2' ಆಗಮನವಾಗ್ತಿದೆ.

'ಶ್ರೀನಿ ಸಿನಿಮ್ಯಾಟಿಕ್ ಯೂನಿವರ್ಸ್' (SCU) ಈ ಚಿತ್ರದ ಮೂಲಕ ಮತ್ತಷ್ಟು ದೊಡ್ಡದಾಗುತ್ತಿದೆ. ಶಿವಣ್ಣ ನಟನೆಯ 'ಘೋಸ್ಟ್' ಕಥೆಯನ್ನು ಇದಕ್ಕೆ ಲಿಂಕ್ ಮಾಡಿ ಶಿವಣ್ಣನನ್ನು ಸೀಕ್ವೆಲ್‌ನಲ್ಲಿ ಪವರ್‌ಫುಲ್ ಅತಿಥಿ ಪಾತ್ರದಲ್ಲಿ ಕರ್ಕೊಂಡ್ ಬರ್ತಿದ್ದಾರೆ. 'ಬೀರ್‌ಬಲ್ ಟ್ರೈಲಜಿ ಕೇಸ್ -2' ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರ ತಂಡ ಕೂಡ ದೊಡ್ಡದಿದೆ. ಬಹುಭಾಷಾ ನಟಿ ಖುಷ್ಬೂ ಸುಂದರ್ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಡೈಸಿ ಬೋಪಣ್ಣ ಕೂಡ ರೀ-ಎಂಟ್ರಿ ಕೊಡುತ್ತಿದ್ದಾರೆ. ಇನ್ನು ಯೋಗಲಕ್ಷ್ಮಿ ನಾಯಕಿಯಾಗಿ ಚಂದನವನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಸಂಪತ್ ರಾಜ್ ಕೂಡ ತಾರಾಗಣದಲ್ಲಿದ್ದಾರೆ.

ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಹಾಗೂ ಮಹೇನ್ ಸಿಂಹ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಅಕ್ಟೋಬರ್ 23ರಂದು ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಶೀಘ್ರದಲ್ಲೇ ಟೀಸರ್ ಬಿಡುಗಡೆ ಆಗಲಿದೆ. ಈ ಇಸ್ಟಿಗೇಷನ್ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡಲಿದೆ. ಮತ್ತೊಂದು ಕಡೆ ಶಿವಣ್ಣನ ಜೊತೆ 'ಎ ಫಾರ್ ಆನಂದ್' ಚಿತ್ರಕ್ಕಾಗಿ ಶ್ರೀನಿ ಕೆಲಸ ಮಾಡುತ್ತಿದ್ದಾರೆ.