ನಟ ಯುವರಾಜ್‌ಕುಮಾರ್ ಹಾಗೂ ಪತ್ನಿ ಶ್ರೀದೇವಿ ಭೈರಪ್ಪ ಡಿವೋರ್ಸ್ ವಿವಾದ ಇನ್ನು ಬಗೆಹರಿದಿಲ್ಲ. ಪತ್ನಿಯಿಂದ ಯುವ ಡಿವೋರ್ಸ್ ಕೇಳಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಪತ್ನಿ ಶ್ರೀದೇವಿ ಅದಕ್ಕೆ ಒಪ್ಪುತ್ತಿಲ್ಲ. ತಮ್ಮ ಮೇಲಿನ ಆರೋಪಗಳಿಗೆಲ್ಲಾ ತಿರುಗೇಟು ಕೊಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಪರೋಕ್ಷವಾಗಿ ಯುವಗೆ ಟಾಂಗ್ ಕೊಡುತ್ತಿದ್ದಾರೆ.

ವಿದ್ಯಾಭ್ಯಾಸಕ್ಕಾಗಿ ಶ್ರೀದೇವಿ ಭೈರಪ್ಪ ವಿದೇಶದಲ್ಲಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಫೋಟೊ, ವೀಡಿಯೋ ಶೇರ್ ಮಾಡುತ್ತಾರೆ. ತಮ್ಮ ಮನಸ್ಸಿನ ಭಾವನೆಗಳಿಗೆ ಅಕ್ಷರ ರೂಪ ಕೊಡುತ್ತದೆ. ಸದ್ಯ ಅಡುಗೆ ಮಾಡುತ್ತಿರುವ ವೀಡಿಯೋವೊಂದನ್ನು ಅವರು ಪೋಸ್ಟ್ ಮಾಡಿದ್ದು ಸಾಕಷ್ಟು ಜನ ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

ಅಭಿಮಾನಿಯೊಬ್ಬ ಕಾಮೆಂಟ್ ಮಾಡಿ "ಬನ್ನಿ ಅತ್ತಿಗೆ.. ಅಣ್ಣನ ಜೊತೆಗಿರಿ" ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಶ್ರೀದೇವಿ ರಿಪ್ಲೇ ಮಾಡಿ ಪತಿ ಯುವರಾಜ್‌ಕುಮಾರ್‌ಗೆ ಟಾಂಗ್ ಕೊಟ್ಟಿದ್ದಾರೆ. "ಓಹ್! ತುಂಬಾ ಜನ ಈ ಥರದ ಮೆಸೇಜ್‌ಗಳು, ಕಾಮೆಂಟ್‌ಗಳು ಮಾಡ್ತಾರೆ. ಆದ್ರೆ ನಿಮ್ಮ ಅಣ್ಣನಿಗೆ ಇನ್ನೂ ಡಿವೋರ್ಸ್ ಆಗಿಲ್ಲ, ಇಬ್ಬರೂ ಕುಟುಂಬದವರ ಬೆಂಬಲದಿಂದ ಸೈಡ್‌ಚಿಕ್ ಜೊತೆ ಇದ್ದಾರಲ್ಲ.. ಇದೆಲ್ಲಾ ನಿಮಗೆ ಗೊತ್ತಿಲ್ಲ ಅನ್ಸುತ್ತೆ ಪಾಪಾ.. ಹೋಗ್ಲಿ ಬಿಡಿ, ನೀವೆಲ್ಲ ನಿಮ್ಮ ಮನೆಯ ಮಕ್ಕಳನ್ನು ಸರಿಯಾಗಿ ಬೆಳೆಸಿ. ಇಂಥವರಿಂದ ಪ್ರಭಾವಿತರಾಗ್ಬೇಡಿ" ಎಂದು ವ್ಯಂಗ್ಯವಾಡಿದ್ದಾರೆ.

ಶ್ರೀದೇವಿ ಮಾಡಿರುವ ಈ ಕಾಮೆಂಟ್ ಸಖತ್ ವೈರಲ್ ಆಗ್ತಿದೆ. 2019ರ ಮೇ ತಿಂಗಳಲ್ಲಿ ಯುವ ಹಾಗೂ ಶ್ರೀದೇವಿ ಪ್ರೀತಿಸಿ ಮದುವೆ ಆಗಿದ್ದರು. ಐದು ವರ್ಷಗಳ ಬಳಿಕ ಭಿನ್ನಾಭಿಪ್ರಾಯ ಹೆಚ್ಚಾಗಿ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಪತ್ನಿಯಿಂದ ಮಾನಸಿಕ ಕಿರುಕುಳ ಎದುರಾಗಿದೆ ಹಾಗೂ ಹಣಕಾಸಿನ ದುರುಪಯೋಗವಾಗಿದೆ ಎಂದು ಯುವ ಆರೋಪಿಸಿದ್ದಾರೆ. ಯುವ ರಾಜ್‌ಕುಮಾರ್ ಅವರು ತಮಗೆ ಪತ್ನಿಯಿಂದ ಮಾನಸಿಕ ಕ್ರೌರ್ಯ ಎದುರಾಗಿದೆ ಮತ್ತು ಹಣಕಾಸಿನ ದುರುಪಯೋಗವಾಗಿದೆ ಎಂದು ಆರೋಪಿಸಿದ್ದಾರೆ. ಪತಿಗೆ ಸಹ-ನಟಿಯೊಂದಿಗೆ ಸಂಬಂಧವಿದೆ, ನನಗೆ ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ಶ್ರೀದೇವಿ ಪ್ರತ್ಯಾರೋಪ ಮಾಡಿದ್ದರು.