ತಮಿಳು ನಟ ವಿಕ್ರಮ್ ಪುತ್ರ ಧ್ರುವ್ ತಂದೆ ಹಾದಿಯಲ್ಲಿ ಚಿತ್ರರಂಗ ಪ್ರವೇಶಿಸಿದ್ದಾರೆ. ಕಳೆದ ವರ್ಷ ಆತ ನಟಿಸಿದ್ದ 'ಬೈಸನ್ ಕಾಲಮಾಡನ್' ಸಿನಿಮಾ ಹಿಟ್ ಆಗಿತ್ತು. ಮಾರಿ ಸೆಲ್ವರಾಜ್ ನಿರ್ದೇಶನದ ಸಿನಿಮಾ ಭಾರೀ ಪ್ರಶಂಸೆ ಗಳಿಸಿತ್ತು. ಧ್ರುವ್ ವಿಕ್ರಮ್ ಅತ್ಯುತ್ತಮ ನಟ ಸೈಮಾ ಪ್ರಶಸ್ತಿ ಕೂಡ ಪಡೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡದಲ್ಲೇ ಮಾತನಾಗಿ ಗಮನ ಸೆಳೆದರು.

ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣ ಈ ಬಾರಿ ಸೈಮಾ 2026 ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ವೇದಿಕೆಯಾಗಿತ್ತು. 'ಕಾಂತಾರ- 1' ಚಿತ್ರದ ನಟನೆಗಾಗಿ ಕನ್ನಡದಲ್ಲಿ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ರಿಷಬ್ ಸರ್ ನಿಮ್ಮ ಜೊತೆ ನಾನು ಈ ವೇದಿಕೆಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆಯುತ್ತಿರುವುದು ಸಂತಸ ತಂದಿದೆ ಎಂದು ಧ್ರುವ್ ಹೇಳಿದ್ದಾರೆ. ಆ ವೀಡಿಯೋ ವೈರಲ್ ಆಗ್ತಿದೆ.

ಯಶ್ ಸೇರಿದಂತೆ ಕನ್ನಡದ ನಟರು ಬೇರೆ ರಾಜ್ಯಗಳಿಗೆ ಹೋದಾಗ ವೇದಿಕೆಗಳಲ್ಲಿ ಆಯಾ ಭಾಷೆ ಮಾತನಾಡುವ ಪ್ರಯತ್ನ ಮಾಡುತ್ತಾರೆ. ಆದರೆ ಪರಭಾಷಾ ಕಲಾವಿದರು ಕರ್ನಾಟಕಕ್ಕೆ ಬಂದರೆ ಕನ್ನಡ ಮಾತನಾಡುವುದಿಲ್ಲ. ಇಂಗ್ಲೀಷ್‌ನಲ್ಲಿ ಮಾತನಾಡಿ ಹೋಗುತ್ತಾರೆ ಎನ್ನುವ ಆರೋಪ ಇದೆ. ಕೆಲವೊಮ್ಮೆ ಇದೇ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಟೀಕೆಗಳನ್ನು ಎದುರಿಸುತ್ತಾರೆ. ಆದರೆ ಧ್ರುವ್ ಕನ್ನಡದಲ್ಲೇ ಮಾತನಾಡಲು ಯತ್ನಿಸಿರುವುದು ಕನ್ನಡಿಗರಿಗೆ ಖುಷಿ ಕೊಟ್ಟಿದೆ.

ಸೈಮಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಧ್ರುವ್ ಎಲ್ಲರಿಗೂ ನಮಸ್ಕಾರ ಎಂದು ಮಾತು ಆರಂಭಿಸಿದರು. ಕನ್ನಡದಲ್ಲಿ ಚಿಕ್ಕದಾಗಿ ಒಂದಷ್ಟು ವಿಷಯಗಳನ್ನು ಬರೆದುಕೊಂಡು ಬಂದಿದ್ದೇನೆ ಎಂದು ಕಾಗದದಲ್ಲಿ ಬರೆದುಕೊಂಡು ಬಂದಿದ್ದನ್ನು ಮಾತಿನ ರೂಪದಲ್ಲಿ ಹೇಳಿದರು. "ಮೊದಲಿಗೆ ರಿಷಬ್ ಶೆಟ್ಟಿ ಅವರಿಗೆ ಹೃಯದಪೂರ್ವಕ ಅಭಿನಂದನೆಗಳು. 'ಕಾಂತಾರ' ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದ ನಿಮ್ಮ ಜೊತೆ ಬೈಸನ್ ಚಿತ್ರಕ್ಕಾಗಿ ಅತ್ಯುತ್ತಮ ನಟ ತಮಿಳು ಪ್ರಶಸ್ತಿ ಪಡೆಯುತ್ತಿರುವುದು ಹೆಮ್ಮೆ ಮತ್ತು ಗೌರವದ ವಿಷಯ" ಎಂದು ಧ್ರುವ್ ಹೇಳಿದ್ದಾರೆ. ಕೂಡಲೇ 'ಓಹ್' ಎನ್ನುವ ಉದ್ಘಾರ ಕೇಳಿಬಂದಿದೆ.